ರಾಜ್ಯ

ಮನಿ ಕೊಟ್ಟರೆ ಮನೆ, ಹೌಸಿಂಗ್‌ ಬೋರ್ಡ್‌ನ ಹೊಸ ಸ್ಲೋಗನ್ : ಆರ್ ಅಶೋಕ್ ಲೇವಡಿ

ಮಂಡ್ಯ : ಅನ್ನ ಕೊಡಿ ಅಂದರೆ ಕಂಡ ಕಂಡಲ್ಲಿ ಕನ್ನ ಹಾಕಲಾಗುತ್ತಿದೆ. ಹೌಸಿಂಗ್ ಬೋರ್ಡ್ ಕಮಿಷನ್ ಬೋರ್ಡ್ ಆಗಿದೆ. ಮನಿ ಕೊಟ್ಟರೆ ಮನೆ ಎಂಬುದು ಹೌಸಿಂಗ್ ಬೋರ್ಡ್ನ ಹೊಸ ಸ್ಲೋಗನ್ ಆಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ಈ ಕಾಂಗ್ರೆಸ್ ಸರ್ಕಾರ ಬಡವರಿಗೆ ಅನ್ನ ಕೊಡಿ ಅಂದ್ರೆ ಬಡವರ ಮನೆಗೆ ಕನ್ನ ಹಾಕಿದೆ . ಈ ಸರ್ಕಾರದಲ್ಲಿ ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್ ಆಗಿದೆ. ಮನಿ ಕೊಟ್ರೆ ಮನೆ ಎಂಬ ಹೊಸ ಸ್ಲೋಗನ್ ಬಿಟ್ಟಿದ್ದಾರೆ. ವಸತಿ ಇಲಾಖೆಯಲ್ಲಿ ರಕ್ತ ಹೀರುವ ಜಿಗಣೆಗಳು ಸೇರಿಕೊಂಡಿದೆ. ಬಡವರಿಗೆ ಮನೆ ನೀಡುವ ಬದಲು ಸೇಲ್ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಹೈಕಮಾಂಡ್‌ಗೆ ಕಪ್ಪ ಸಲ್ಲಿಸಲು ರಾಜ್ಯ ಸರ್ಕಾರ ಲೂಟಿಗೆ ಇಳಿದಿದೆ: ಪ್ರತಿಪಕ್ಷ ನಾಯಕ ಆರ್.‌ಅಶೋಕ್‌ 

ಅಬಕಾರಿ, ವಾಲ್ಮೀಕಿ ನಿಗಮದ ಬಳಿಕ ವಸತಿ ಇಲಾಖೆಯ ಭ್ರಷ್ಟಾಚಾರ ಬಯಲಿಗೆ ಬಂದಿದೆ. “ಮನೆಗಾಗಿ ಕಾಸು” ವಿಷಯ ಬಹಳ ಚರ್ಚಿತವಾಗುತ್ತಿದೆ. ಕಾಂಗ್ರೆಸ್‌ನವರೇ ಆದ ಶಾಸಕ ಬಿ.ಆರ್.ಪಾಟೀಲ್ ಅವರೇ ವಸತಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ವೈರಲ್ ಆಗಿರುವ ಆಡಿಯೋದಲ್ಲಿನ ಮಾತುಗಳು ತಮ್ಮದೇ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಜತೆಗೆ, ಭ್ರಷ್ಟಾಚಾರದ ತನಿಖೆಗೂ ಒತ್ತಾಯಿಸಿದ್ದಾರೆ. ಹೀಗಾಗಿ ಇದರ ಸತ್ಯಾಸತ್ಯತೆ ಹೊರಬೀಳಬೇಕೆಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ವಸತಿ ಇಲಾಖೆಯು ಉಳ್ಳವರು, ಸಾಹುಕಾರರಿಗೆ ಸೈಟ್ ಹಂಚಲು ಇರುವುದಲ್ಲ. ಬದಲಿಗೆ ಬಡವರು, ಮನೆ ಇಲ್ಲದವರು, ನಿರಾಶ್ರಿತರಿಗೆ ಸೂರು ಕೊಡುವುದು ಹೌಸಿಂಗ್ ಬೋರ್ಡ್ ಕೆಲಸ. ಹಿಂದುಳಿದವರಿಗೆ ಮನೆ ಸಿಗಬೇಕು. ಆದರೆ, ವಸತಿ ಇಲಾಖೆಯಲ್ಲಿ ರಕ್ತ ಹೀರುವ ಜಿಗಣೆಗಳು ಸೇರಿಕೊಂಡಿವೆ. ಬಡವರಿಗೆ ಮನೆಗಳನ್ನು ಕೊಡುವ ಬದಲು ಮಾರಾಟ ಮಾಡಲಾಗುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.

ಟಿಪ್ಪು ವಂಶಜರಿಗೆ ಶೇ.15 ರಷ್ಟು ಮೀಸಲಾತಿ
ಬಳ್ಳಾರಿಯಲ್ಲಿ ಸಂಕಲ್ಪ ಸಮಾವೇಶ ಮಾಡಿದರು. ಆದರದು ಅಭಿವೃದ್ಧಿ ಸಂಕಲ್ಪ ಸಮಾವೇಶವಲ್ಲ. ಬಡವರನ್ನು ನಾಶ ಮಾಡುವ ಸಂಕಲ್ಪ ಸಮಾವೇಶವಾಗಿದೆ. ಮನೆ ಪಡೆಯಲು ಅರ್ಜಿ ಬೇಡ, ಮುಖ್ಯಮಂತ್ರಿ ಮರ್ಜಿ ಇದ್ದರಷ್ಟೇ ಸಾಕು. ಇದು ಶೇ.60ರಷ್ಟು ಕಮೀಷನ್ ಸರಕಾರ. ಬೇಕಿದ್ದರೆ ದಾಖಲೆಗಳನ್ನು ಕೊಡುತ್ತೇನೆ. ವಸತಿ ಇಲಾಖೆಯಲ್ಲೂ ಮುಸ್ಲಿಂರಿಗೆ ಶೇ.15 ರಷ್ಟು ಮೀಸಲು ತರಲಾಗಿದೆ. ಟಿಪ್ಪು ವಂಶಜರಿಗೆ ಶೇ.15 ರಷ್ಟು ಮೀಸಲಾತಿ. ನಮ್ಮವರಿಂದ ಶೇ. 60 ರಷ್ಟು ಕಮೀಷನ್. ಇದೇ ಸರಕಾರದ ಸಾಧನೆ ಎಂದು ಟೀಕಿಸಿದರು.

“ನಾನು ಬಾಯಿ ಬಿಟ್ಟರೆ ಈ ಸರಕಾರ 3 ದಿನ ಉಳಿಯೋದಿಲ್ಲ” ಎಂದು ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ. ಸರಕಾರಕ್ಕೆ ಇದಕ್ಕಿಂತಲೂ ಛೀಮಾರಿ ಬೇಕೆ? ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇವರಿಗೆ ಸರಕಾರ ನಡೆಸುವ ನೈತಿಕತೆ ಎಲ್ಲಿದೆ? ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ತಾಕತ್ತಿದ್ದರೆ ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿರುವ ಪಾಟೀಲರ ವಿರುದ್ಧ ಕ್ರಮ ಕೈಗೊಳ್ಳಲಿ. ಇಲ್ಲವೇ ತಾವೇ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದರು. ನಮ್ಮ ಸರಕಾರದ ಬಗ್ಗೆ 40% ಕಮೀಷನ್ ಸರಕಾರ ಎಂದು ಆರೋಪಿಸಿದ್ದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 3 ತಿಂಗಳಲ್ಲಿ ನಮ್ಮನ್ನೆಲ್ಲಾ ಜೈಲಿಗೆ ಹಾಕುತ್ತೇನೆ ಎಂದಿದ್ದರು. ಈಗ ಸರಕಾರ ಬಂದು 2 ವರ್ಷವಾಗಿದೆ. ಏನು ಮಾಡಿದ್ದಾರೆ? ಶೇ.60 ರಷ್ಟು ಕಮಿಷನ್ ದಂಧೆಯಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.

ಬಿಹಾರ ಚುನಾವಣೆಗಾಗಿ ಕರ್ನಾಟಕದಲ್ಲಿ ಕಲೆಕ್ಷನ್ ಮಾಡಲಾಗುತ್ತದೆ. ದೊಡ್ಡ ಮಟ್ಟದ ಭ್ರಷ್ಟಾಚಾರಕ್ಕೆ ರಾಜ್ಯದ ಕಾಂಗ್ರೆಸ್ ಸರಕಾರ ಮುಂದಾಗಿದೆ. ಗ್ಯಾರಂಟಿಗಳಿಗೂ ಗ್ಯಾರಂಟಿ ಇಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಲಾಗುತ್ತಿದೆ. 6 ತಿಂಗಳಿಂದ ಹಾಲಿನ ಪ್ರೋತ್ಸಾಹಧನ ನೀಡಿಲ್ಲ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ನಿಲುವಳಿ ಮಂಡಿಸಿ ಚರ್ಚಿಸಲಾಗುವುದು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.

ವಸತಿ ಯೋಜನೆ ಭ್ರಷ್ಟಾಚಾರದ ಬಗ್ಗೆ ರಾಜ್ಯ ಸರಕಾರ ಸಿಬಿಐ ತನಿಖೆ ನಡೆಸಬೇಕು. ಇಲ್ಲದಿದ್ದರೆ ಹೈಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತನಿಖಾ ತಂಡ ರಚಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂಕರಾಗಿರದೆ ಬಾಯಿ ಬಿಟ್ಟು ಮಾತನಾಡಬೇಕು. ಮಾತೆತ್ತಿದರೆ ಮೋದಿ ವಿರುದ್ಧ ಮಾತನಾಡುವವರು ಈಗ ತಮ್ಮದೇ ಸರಕಾರದ ಹುಳುಕಿನ ಬಗ್ಗೆಯೂ ಮಾತನಾಡಲಿ ಎಂದು ಆಗ್ರಹಿಸಿದರು.

ಮಂಡ್ಯದ ಬೀಡಿ ಕಾರ್ಮಿಕರ ಕಾಲನಿಯಲ್ಲಿ ತಮಿಳುಕಾಲನಿ ನಿವಾಸಿಗಳಿಗೆ ನಿರ್ಮಿಸಿದ ಮನೆಗಳಿಗೆ ಏಕಾಏಕಿ ಅಲ್ಪಸಂಖ್ಯಾತರನ್ನು ಕಳುಹಿಸಲಾಗಿದೆ. ಮನೆ ಖಾಲಿ ಇವೆ ಎಂದ ಮಾತ್ರಕ್ಕೆ ಯಾರು ಬೇಕಾದರೂ ಹೋಗಿ ಇರಬಹುದಾ? ಇದೆಲ್ಲವೂ ಜಿಲ್ಲೆಯ ಕಾಂಗ್ರೆಸ್ ಸಚಿವರು, ಶಾಸಕರ ಕುತಂತ್ರ. ಅವರ ಪ್ರೇರಣೆಯಿಂದಲೇ ಮುಸ್ಲಿಂರು ಖಾಲಿ ಮನೆಗಳನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ಆರ್.ಅಶೋಕ್ ಆರೋಪಿಸಿದರು.

ಶಾಸಕರ ಅನುಮತಿ ಇಲ್ಲದೆ ಹೇಗೆ ಮುಸ್ಲಿಂರು ಖಾಲಿ ಮನೆಗಳಿಗೆ ಹೋಗಲು ಸಾಧ್ಯ? ಅಧಿಕಾರಿಗಳು, ಜಿಲ್ಲಾಡಳಿತ ಕತ್ತೆ ಕಾಯುತ್ತಿದೆಯೇ? ಈ ಘಟನೆಯನ್ನು ಜಿಲ್ಲಾಡಳಿತ, ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ, ಕ್ರಮ ವಹಿಸಬೇಕು. ಆಸ್ಪತ್ರೆಗೆ ಸೇರಿದ ತಮಿಳುಕಾಲನಿ ಜಾಗದ ಒತ್ತುವರಿಯನ್ನು ತೆರವುಗೊಳಿಸಬೇಕು. ಯಾವುದೇ ಪಕ್ಷದವರಾದರೂ ಇರಲಿ, ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕೆಆರ್ಎಸ್ನಲ್ಲಿ ರಾಜ್ಯ ಸರ್ಕಾರದಿಂದ ಕಾವೇರಿ ಆರತಿ ನಡೆಸುವ ವಿಚಾರವಾಗಿ ಮಾತನಾಡಿದ ಅವರು, ಕಾವೇರಿ ಆರತಿ ಹೆಸರಲ್ಲಿ ಇವರು ಕೀರ್ತಿ ಪಡೆಯೋಕೆ ಹೋಗುತ್ತಿದ್ದಾರೆ. ಸರ್ಕಾರ ಅಲ್ಲಿನ ಜನರ ಜೀವನ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಅಲ್ಲಿ ಆರತಿಗೆ ನೂರು ಕೋಟಿ ಖರ್ಚು ಮಾಡ್ತಿರೋದು ಯಾಕೆ? ಇದರಲ್ಲಿ ಕಾಂಗ್ರೆಸ್ ಖರ್ಚು ಮಾಡುವುದು 30 ರಿಂದ 40 ಕೋಟಿ ರೂ. ಅಷ್ಟೇ. ಇನ್ನುಳಿದ ಹಣ ತಮ್ಮ ಜೇಬಿಗೆ ಹಾಕಿಕೊಳ್ಳುತ್ತಾರೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಜೊತೆಗೆ ಸದನದೊಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತಿದ್ದೇವೆ ಎಂದರು.

ಆಂದೋಲನ ಡೆಸ್ಕ್

Recent Posts

ಹೆಣ್ಣು ಮಗು ಮಾರಾಟ ; ಐವರ ಬಂಧನ

ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…

6 hours ago

ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ : ಗಡಿ ಜಿಲ್ಲೆಯಲ್ಲಿ ಅಮಾನವೀಯ ಘಟನೆ

ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…

7 hours ago

ಹಾಸನದಲ್ಲಿ ಜಾ.ದಳ ಶಕ್ತಿ ಪ್ರದರ್ಶನ : ಚುನಾವಣೆಗೆ ತಯಾರಾಗುವಂತೆ ಕಾರ್ಯಕರ್ತರಿಕೆ ಎಚ್‌ಡಿಕೆ ಕರೆ

ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…

7 hours ago

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ; 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…

8 hours ago

ನಂಜನಗೂಡು | ಶ್ರೀಕಂಠೇಶ್ವರ ದೇವಾಲಯದ ಮುಂದಿನ ಅನಧಿಕೃತ ಅಂಗಡಿ ತೆರವು

ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…

8 hours ago

ಚಿನ್ನ ಕಳ್ಳ ಸಾಗಾಣಿಕೆ ಪತ್ತೆ : 2.89 ಕೋಟಿ ರೂ. ಮೌಲ್ಯದ ಚಿನ್ನ ವಶ

ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…

9 hours ago