ರಾಜ್ಯ

ವೈವಿಧ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಭಾರತ ನಿರ್ಮಾಣ ನಾರಾಯಣಗುರುಗಳ ಗುರಿಯಾಗಿತ್ತು: ಸಿಎಂ ಸಿದ್ದರಾಮಯ್ಯ

ಕೇರಳ(ತಿರುವನಂತಪುರ): ವೈವಿದ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಸಹೃದಯಿ ಭಾರತ ನಿರ್ಮಾಣ ನಾರಾಯಣಗುರುಗಳ ಗುರಿಯಾಗಿತ್ತು. ನೈತಿಕತೆ ಇಲ್ಲದ ಅಹಂಕಾರದ ಭಾಷೆಯಲ್ಲಿ ಕೋಮುವಾದ ಮಾತಾಡುವ ಬಗ್ಗೆ ನಾರಾಯಣಗುರುಗಳು ಎಚ್ಚರಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.

ಕೇರಳ ತಿರುವನಂತಪುರದ 93ನೇ ಶಿವಗಿರಿ ತೀರ್ಥಯಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾರಾಯಣ ಗುರುಗಳು ಕೇವಲ‌ ಒಬ್ಬ ಸಂತ ಮಾತ್ರ ಆಗಿರಲಿಲ್ಲ. ಸಮಾನತೆ ಮತ್ತು ನೈತಿಕತೆಯ ಚಳವಳಿಯಾಗಿದ್ದರು. ಹೀಗಾಗಿ ಶಿವಗಿರಿ ತೀರ್ಥಯಾತ್ರೆ ಕೂಡ ಚಳವಳಿಯ ಸ್ವರೂಪ ಪಡೆದು ಜಾತಿ ದೌರ್ಜನ್ಯವನ್ನು ಅಳಿಸಿ ಸಮಾಜವನ್ನು ಸಾಮಾಜಿಕ ನ್ಯಾಯದ ಕಡೆ ಮುನ್ನಡೆಸಬೇಕು. ಇದೇ ನಾರಾಯಣ ಗುರುTಗಳು ಕಂಡ ಭಾರತ. ಇದೇ ಶಿವಗಿರಿ ಪ್ರತಿಪಾದಿಸುವ ಭಾರತ. ಇಂಥಾ ಭಾರತವನ್ನು ನಾವು ಒಟ್ಟಾಗಿ ಗಟ್ಟಿಗೊಳಿಸಬೇಕಿದೆ ಎಂದರು.

ಶಿವಗಿರಿ ಮಠವು ಕೇವಲ ಒಂದು ಯಾತ್ರಾ ಕೇಂದ್ರವಾಗಿರದೇ,ಭಾರತದ ಆತ್ಮಸಾಕ್ಷಿಯ ನೈತಿಕ ವಿಶ್ವವಿದ್ಯಾಲಯವಾಗಿದೆ. ಈ ಪವಿತ್ರ ಕ್ಷೇತ್ರದಲ್ಲಿ ನಿಮ್ಮ ಮುಂದೆ ನಿಂತಿರುವುದು ನನ್ನ ಸೌಭಾಗ್ಯ. ಇದು ಬೌದ್ಧಿಕ ಮತ್ತು ವಿಶ್ವದ ಮಾನವಕುಲದ ಚಳವಳಿಯಾಗಿದೆ. ಇದು ಭೌಗೋಳಿಕವಲ್ಲ, ನೈತಿಕತೆಯ ಪ್ರವಾಸ ಎಂದು ಮೆಚ್ಚುಗೆ ಸೂಚಿಸಿದರು.‌

ರಾಜಕಾರಣ ನೈತಿಕತೆಯಿಂದ ದೂರವಾಗುತ್ತಾ, ಧರ್ಮವು ನೈತಿಕತೆಗಿಂತ ಹೆಚ್ಚಾಗಿ ಅಧಿಕಾರಕ್ಕಾಗಿ ಆಯುಧವಾಗುತ್ತಿರುವ ಅಪಾಯದ ದಿನಗಳಲ್ಲಿ ಶಿವಗಿರಿ ಒಂದು ನೈತಿಕ ಚಳವಳಿಯಾಗಿ ನಮಗೆ ಆದರ್ಶವಾಗಬೇಕು.ಶಿವಗಿರಿ ಮಠ ‘ಜೀವಂತ ಸಂವಿಧಾನ’ದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಶಿವಗಿರಿ ತೀರ್ಥಯಾತ್ರೆಯು ಭಾರತದ ಮೂಲ ‘ಕೋಮು-ವಿರೋಧಿ’ ಯೋಜನೆಯಾಗಿದೆ. ಸಮಾಜವು ಕೃತಕವಾಗಿ ಸೃಷ್ಟಿಸಲ್ಪಟ್ಟ ದ್ವೇಷದಿಂದ ಧ್ರುವೀಕರಣಗೊಳ್ಳುತ್ತಿರುವಾಗ, ಶಿವಗಿರಿಯು ಪ್ರಾಬಲ್ಯಕ್ಕಿಂತ ‘ಸಂವಾದ’ವನ್ನು, ಶ್ರೇಣೀಕೃತ ವ್ಯವಸ್ಥೆಗಿಂತ ‘ಸಮಾನತೆ’ಯನ್ನು ಮತ್ತು ಸಾಂಕೇತಿಕತೆಗಿಂತ ‘ನೈತಿಕತೆ’ಯನ್ನು ಎತ್ತಿ ಹಿಡಿಯುತ್ತದೆ. “ಆಧುನಿಕ ರಾಷ್ಟ್ರ ನಿರ್ಮಾಣದಲ್ಲಿ ಶಿವಗಿರಿ ತೀರ್ಥಯಾತ್ರೆಯ ಪಾತ್ರ” ಎನ್ನುವುದು ಕೇವಲ ಸಾಂಕೇತಿಕವಲ್ಲ. ಇದು ಇಂದಿನ ತುರ್ತು ಅಗತ್ಯ ಮತ್ತು ನಮ್ಮ ಕಾಲದ ಬಿಕ್ಕಟ್ಟುಗಳಿಗೆ ನೇರ ಉತ್ತರ. ಇದರ ಹಿಂದಿರುವ ಶಕ್ತಿ ಶ್ರೀ ನಾರಾಯಣ ಗುರುಗಳು ಕೇವಲ ಒಬ್ಬ ಸಂತನಲ್ಲ, ಬದಲಾಗಿ ಭಾರತದ ಶ್ರೇಷ್ಠ ಸಾಮಾಜಿಕ ದಾರ್ಶನಿಕರಲ್ಲಿ ಒಬ್ಬರು. ನಾರಾಯಣ ಗುರುಗಳು ಅನ್ಯಾಯದ ಚೌಕಟ್ಟಿನೊಳಗೆ ಸುಧಾರಣೆಯನ್ನು ಬಯಸಲಿಲ್ಲ. ಅವರು ಅನ್ಯಾಯದ ಬೇರುಗಳನ್ನೇ ಕಿತ್ತೆಸೆದರು.
ಕೇರಳವು ಜಾತಿ ತಾರತಮ್ಯ, ಮೌಢ್ಯಾಚರಣೆ ಮತ್ತು ಅಸಮಾನತೆಯಿಂದ ಉಸಿರುಗಟ್ಟುತ್ತಿದ್ದಾಗ, “ಮಾನವಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು” ಎಂಬ ಸತ್ಯವನ್ನು ಘೋಷಿಸಿದರು.

ಇದು ಕೇವಲ ಕಾವ್ಯಾತ್ಮಕ ಹೇಳಿಕೆಯಲ್ಲ. ಇದು ಜಾತಿ ತಾರತಮ್ಯ ಸೋಂಕಿನ ಮನುಸ್ಮೃತಿ ಆಧಾರಿತ ಶ್ರೇಣೀಕೃತ ವ್ಯವಸ್ಥೆ, ಧಾರ್ಮಿಕ ಏಕಸ್ವಾಮ್ಯತೆ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ನೀಡಿದ ನೇರ ಸವಾಲಾಗಿತ್ತು‌ ಎಂದರು.

ನಾರಾಯಣ ಗುರುಗಳ ತತ್ವಜ್ಞಾನವು ಕನ್ನಡದ ರಾಷ್ಟ್ರಕವಿ ಕುವೆಂಪು ಅವರು ನಂತರ ಪ್ರತಿಪಾದಿಸಿದ ‘ವಿಶ್ವಮಾನವ’ ಪರಿಕಲ್ಪನೆಯನ್ನು ಒಳಗೊಂಡಿತ್ತು. ಇದು ಜಾತಿರಹಿತ, ಭಯರಹಿತ ಮತ್ತು ಮಾನವೀಯ ಸಮಾಜ ನಿರ್ಮಾಣದ ದೂರದೃಷ್ಟಿಯಾಗಿತ್ತು. ಹಿಂದುಳಿದ ಸಮುದಾಯಗಳು ತಮ್ಮದೇ ಆದ ದೇವಾಲಯಗಳನ್ನು ಸ್ಥಾಪಿಸಬೇಕೆಂದು ಕರೆ ನೀಡಿ, ದೇವಾಲಯಗಳಲ್ಲಿ ವಿಗ್ರಹದ ಬದಲು ಕನ್ನಡಿಯನ್ನು ಪ್ರತಿಷ್ಠಾಪಿಸಿದರು. ದೈವತ್ವವು ಪ್ರತಿ ಮನುಷ್ಯನೊಳಗೆ ನೆಲೆಸಿದ್ದು, ಆತ್ಮಸಾಕ್ಷಾತ್ಕಾರ, ಸಮಾನತೆ ಹಾಗೂ ಯಾರಿಗೂ ಕೇಡು ಬಯಸದಿರುವುದೇ ನಿಜವಾದ ಆರಾಧನೆ ಎಂದು ತಿಳಿಸುವುದು ಇದರ ಉದ್ದೇಶವಾಗಿತ್ತು. ಶಾಲೆಗಳು, ದೇವಾಲಯಗಳು ಮತ್ತು ಸಾಮಾಜಿಕ ಸಂಘಟನೆಗಳನ್ನು ಸ್ಥಾಪಿಸುವ ಮೂಲಕ, ನಾರಾಯಣ ಗುರುಗಳು ಶೋಷಿತರಿಗೆ ಸ್ವಾಭಿಮಾನ, ಜ್ಞಾನ ಮತ್ತು ನಾಯಕತ್ವದ ಗುಣವನ್ನು ಮರುಸ್ಥಾಪಿಸುವ ವೇದಿಕೆಯನ್ನು ಸೃಷ್ಟಿಸಿದರು.

ನಾರಾಯಣ ಗುರುಗಳನ್ನು ಭೇಟಿಯಾದ ನಂತರವೇ ಗಾಂಧೀಜಿಯವರು ಅಸ್ಪೃಶ್ಯತೆ, ಸರಳತೆ ಮತ್ತು ಅಂತರ್ಜಾತಿ ವಿವಾಹಗಳ ಬಗ್ಗೆ ತಮ್ಮ ನಿಲುವನ್ನು ಗಟ್ಟಿಗೊಳಿಸಿದರು. ಅಂತರ್ಜಾತಿ ವಿವಾಹವಲ್ಲದ ಮದುವೆಗಳಿಗೆ ತಾವು ಹಾಜರಾಗುವುದಿಲ್ಲ ಎಂದು ಗಾಂಧೀಜಿಯವರು ನಿರ್ಧರಿಸಿದ್ದು ಕಾಕತಾಳೀಯವಲ್ಲ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

 

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸೇರಿದ ಟೇಲ್ಸ್ ಬೈ ಪರಿ ಕೃತಿಯ ಪುಟ್ಟ ಲೇಖಕಿ ಪರಿಣಿತಾ

ಬೆಂಗಳೂರು: ಸಣ್ಣ ವಯಸ್ಸಿನಿಂದಲೇ ಬರವಣಿಗೆ ರೂಢಿಸಿಕೊಂಡು 9ನೇ ವಯಸ್ಸಿಗೆ 'ಟೇಲ್ಸ್ ಬೈ ಪರಿ' ಪುಸ್ತಕವನ್ನು ಬರೆದು ಹೆಸರು ಮಾಡಿರುವ ನಮ್ಮ…

12 mins ago

ಅಕ್ರಮ ನಿವಾಸಿಗಳಿಗೆ ಮನೆ: ಸರ್ಕಾರದ ವಿರುದ್ಧ ವಿ.ಸೋಮಣ್ಣ ಆಕ್ರೋಶ

ನವದೆಹಲಿ: ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ದಡ್ಡತನದ ಪರಮಾವಧಿ ಎಂದು ಕೇಂದ್ರ ಸಚಿವ…

29 mins ago

ಗುಂಡ್ಲುಪೇಟೆ: ಬರಗಿ ಗ್ರಾಮದಲ್ಲಿ ಕಾಡು ಬೆಕ್ಕು ಪತ್ತೆ

ಗುಂಡ್ಲುಪೇಟೆ: ತಾಲ್ಲೂಕಿನ ಬರಗಿ ಗ್ರಾಮದಲ್ಲಿ ಕಾಣಿಸಿಕೊಂಡಿ ಕಾಡುಬೆಕ್ಕನ್ನು ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ತಾಲ್ಲೂಕಿನ ಬರಗಿ ಗ್ರಾಮದಲ್ಲಿ…

36 mins ago

ಗುಂಡ್ಲುಪೇಟೆ: ಚಿರತೆ ದಾಳಿಗೆ ಮೇಕೆ ಹಾಗೂ ಕರು ಬಲಿ

ಗುಂಡ್ಲುಪೇಟೆ: ಚಿರತೆ ದಾಳಿಗೆ ಮೇಕೆ ಬಲಿಯಾಗಿರುವ ಘಟನೆ ತಾಲ್ಲೂಕಿನ ಬೆಟ್ಟದಮಾದಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಂಕರ್‌ ಎಂಬುವವರು ತಮಗೆ ಸೇರಿದ…

39 mins ago

ಹೊಸ ವರ್ಷಾಚರಣೆ ನಡುವೆಯೇ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಬೆಂಗಳೂರು: ಹೊಸ ವರ್ಷಾಚರಣೆ ನಡುವೆಯೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…

50 mins ago

ಚಿತ್ರದುರ್ಗ ಬಸ್‌ ದುರಂತ ಪ್ರಕರಣ: ಮತ್ತೋರ್ವ ಗಾಯಾಳು ಸಾವು

ಚಿತ್ರದುರ್ಗ: ಚಿತ್ರದುರ್ಗ ಬಸ್‌ ದುರಂತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಗಾಯಾಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 8ಕ್ಕೇ ಏರಿಕೆಯಾಗಿದೆ. ಮೃತರನ್ನು…

52 mins ago