ಬೆಂಗಳೂರು : ಶಿವಮೊಗ್ಗದಲ್ಲಿ ದೇಶಭಕ್ತರ ಫ್ಲೆಕ್ಸ್ ತೆರವು ಮಾಡಿರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಎಸ್ಡಿಪಿಐ ಕೃತ್ಯ ಹಾಗೂ ಯುವಕನ ಮೇಲೆ ಚೂರಿ ಇರಿತವನ್ನು ಖಂಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾತನಾಡಿದರು. ಶ್ರೇಷ್ಠ ರಾಷ್ಟ್ರಭಕ್ತ ಸಾವರ್ಕರ್ ಅವರ ಬಗ್ಗೆ ಕಾಂಗ್ರೆಸ್ ಟೀಕಿಸುತ್ತಿತ್ತು. ಇದೇ ಕಾಂಗ್ರೆಸ್ನವರ ಬೆಂಬಲದಿಂದ ಎಸ್ಡಿಪಿಐ ಪಕ್ಷದವರು ಇವತ್ತು ಶಿವಮೊಗ್ಗದಲ್ಲಿ ಅವರ ಭಾವಚಿತ್ರದ ಫ್ಲೆಕ್ಸ್ ತೆರವುಗೊಳಿಸಿದ್ದಲ್ಲದೆ, ರಾಷ್ಟ್ರಧ್ವಜವನ್ನು ಕೆಳಗೆ ಹಾಕಿದ್ದಾರೆ. ಇದೊಂದು ರಾಷ್ಟ್ರವಿರೋಧಿ ಕೃತ್ಯ. ಈ ದುಷ್ಕತ್ಯದಲ್ಲಿ ಭಾಗವಹಿಸಿದವರನ್ನು ರಾಷ್ಟ್ರವಿರೋಧಿಗಳು ಮತ್ತು ಭಯೋತ್ಪಾದಕರೆಂದು ಸರ್ಕಾರ ಗುರುತಿಸಿ ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಲು ಆಗ್ರಹಿಸಿದರು. ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಈ ಘಟನೆ ಹಿಂದಿರುವವರನ್ನು ಕೂಡಲೇ ಬಂಧಿಸುವಂತೆ ತಿಳಿಸಿದ್ದಾಗಿ ಹೇಳಿದರು.
ದೇಶದ ಸ್ವಾತಂತ್ರ್ಯ ಸಂಗ್ರಾಮ ಹೋರಾಟದಲ್ಲಿ ಕ್ರಾಂತಿಕಾರಿಯಾಗಿ ಅತಿ ಹೆಚ್ಚು ಶಿಕ್ಷೆಯನ್ನು ವೀರ ಸಾವರ್ಕರ್ ಅವರು ಅನುಭವಿಸಿದ್ದರು. ಅವರ ಇಡೀ ಮನೆತನವೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿತ್ತು. ಎರಡು ಬಾರಿ ಕರಿನೀರಿನ ಶಿಕ್ಷೆಗೆ ಒಳಗಾದರೂ ತನ್ನ ಆತ್ಮಸ್ಥೈರ್ಯದ ಮೂಲಕ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿದವರು ಎಂದು ವಿವರಿಸಿದರು.
ಕಾಂಗ್ರೆಸ್ನವರು ಸಾವರ್ಕರ್ ಅವರ ಕುರಿತು ಬಹಳಷ್ಟು ಟೀಕೆ ಮಾಡುತ್ತಿದ್ದಾರೆ. ಸ್ವಾತಂತ್ರ್ಯದ ಬಳಿಕ ದೇಶಭಕ್ತ ಸಾವರ್ಕರ್ ಅವರನ್ನು ಕಾಂಗ್ರೆಸ್ ಆಡಳಿತದಲ್ಲಿ ನೆಹರೂ ಪ್ರಧಾನಿಯಾಗಿದ್ದಾಗ ಎರಡು ಬಾರಿ ಬಂಧಿಸಲಾಗಿತ್ತು. ಕಾಂಗ್ರೆಸ್ ಪಕ್ಷದವರು ತಮ್ಮ ಆಡಳಿತದ ಇತಿಹಾಸವನ್ನು ಓದಿ ತಿಳಿದುಕೊಳ್ಳಬೇಕು. ಗಾಂಧಿ ಹತ್ಯೆ ಆದಾಗ ಸಾವರ್ಕರ್ ಮನೆಗೆ ಕಲ್ಲು ಹೊಡೆಯಲಾಗಿತ್ತು. ಅವರ ಸೋದರನಿಗೆ ಗಾಯಗಳಾಗಿದ್ದವು ಎಂದು ತಿಳಿಸಿದರು. ಎರಡು ಬಾರಿ ಬಂಧನ ಆದಾಗಲೂ ಪತ್ರಕರ್ತರು ಪ್ರಶ್ನಿಸಿದಾಗ ಸಾವರ್ಕರ್ ಅವರು ಪ್ರಧಾನಿ, ದೇಶದ ಬಗ್ಗೆ ಟೀಕೆ ಮಾಡಿರಲಿಲ್ಲ ಎಂದು ತಿಳಿಸಿದರು.
ಆರೆಸ್ಸೆಸ್ನಲ್ಲಿರುವ ಪ್ರತಿಯೊಬ್ಬರೂ ದೇಶವನ್ನು ಭಾರತಮಾತೆ ಎಂದು ಪೂಜಿಸುತ್ತಾರೆ. ಅಧಿಕಾರ, ಲಾಭಕ್ಕಾಗಿ ಕಾಂಗ್ರೆಸ್ ಸೇರಿದ ಹಾಗೂ ಹಿರಿಯ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡಿದ, ಅಧಿಕಾರವನ್ನು ಹಿಡಿದುಕೊಂಡು ಆಟವಾಡುವ ಸಮಾಜವಾದಿಗಳಿಗೆ ಸೋನಿಯಾ ಮಾತೆ ಆಗಿದ್ದಾರೆ. ಸೋನಿಯಾ ಮಾತೆಯನ್ನು ಆರಾಧಿಸುವವರು ಬೇಕೇ ಅಥವಾ ಭಾರತಮಾತೆಯನ್ನು ಪೂಜಿಸುವವರು ಬೇಕೇ ಎಂದು ಜನರು ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು.
ಇಂಥ ಘಟನೆ ಮರುಕಳಿಸದಂತೆ ಸರಕಾರ ಕ್ರಮ ಕೈಗೊಳ್ಳಬೇಕಿದೆ ಮತ್ತು ತೆಗೆದುಕೊಳ್ಳಲಿದೆ ಎಂದು ಅವರು ವಿಶ್ವಾಸದಿಂದ ನುಡಿದರು. ಡಿ.ಜೆ.ಹಳ್ಳಿ ಕೆಜೆ ಹಳ್ಳಿಯಲ್ಲಿ ಬೆಂಕಿ ಹಾಕುವ ಕೆಲಸವನ್ನು ಕಾಂಗ್ರೆಸ್ ಬೆಂಬಲದಿಂದ ಎಸ್ಡಿಪಿಐ ಮಾಡಿತ್ತು. ಗಲಭೆ ಸೃಷ್ಟಿಯಲ್ಲಿ ಎಸ್ಡಿಪಿಐ ಜೊತೆ ಕಾಂಗ್ರೆಸ್ ಸೇರುತ್ತಿದೆ. ಡಿ.ಜೆ.ಹಳ್ಳಿ ಕೆಜೆ ಹಳ್ಳಿಯಲ್ಲಿ ಎರಡೇ ಗಂಟೆಗಳಲ್ಲಿ ಘಟನೆಯನ್ನು ನಿಯಂತ್ರಿಸುವ ಕೆಲಸವನ್ನು ಸರಕಾರ ಮಾಡಿತ್ತು ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
ಹುಬ್ಬಳ್ಳಿಯಲ್ಲಿ ಗಲಭೆ ನಡೆದಾಗ ಕೇವಲ ಎರಡು ಗಂಟೆಗಳಲ್ಲಿ ಅದನ್ನು ನಿಯಂತ್ರಿಸಲಾಗಿತ್ತು. ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ನಮ್ಮ ಕರಾವಳಿ ಜಿಲ್ಲೆಯಲ್ಲಿ ಗಲಭೆ ನಡೆದಿತ್ತು. 65 ದಿನಗಳ ಕಾಲ ನಿಷೇಧಾಜ್ಞೆ ವಿಧಿಸಿದರೂ ಗಲಭೆ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ ಎಂದು ವಿವರಿಸಿದರು.
ಗಲಭೆ ಸೃಷ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕು ಎಂದು ಬಯಸುವವರು ಇದ್ದಾಗ ಇಂಥ ಘಟನೆ ನಿರಂತರವಾಗಿರುತ್ತದೆ. ಅತಂತ್ರ ಸ್ಥಿತಿ ನಿರ್ಮಿಸಿ ರಾಜ್ಯದಲ್ಲಿ ಅರಾಜಕತೆ ತರಲು ಪ್ರಯತ್ನದಲ್ಲಿದ್ದಾಗ ಹೀಗಾಗುತ್ತದೆ. ಈ ಗಲಭೆಗಳ ಹಿಂದೆ ಕಾಂಗ್ರೆಸ್ ಇದೆ; ಎಸ್ಡಿಪಿಐ ಸೇರಿಕೊಂಡಿದೆ. ಆದರೆ ಇದೆಲ್ಲವನ್ನು ನಿಯಂತ್ರಿಸಲು ನಮ್ಮ ಸರಕಾರ ಶಕ್ತವಾಗಿದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು.
ಸಿದ್ರಾಮಣ್ಣನ ಸರಕಾರ ಇದ್ದಾಗ ಯಾಕೆ 24 ಹತ್ಯೆಗಳಾದವು? ಒಟ್ಟು 36 ಹತ್ಯೆ ಯಾಕಾಯಿತು? ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಯಾಕೆ ಕೋಮುಗಲಭೆ ಆಗಿದ್ದವು? ಎಂದು ಪ್ರಶ್ನಿಸಿದ ಅವರು, ಗಲಭೆ ಹಿಂದೆ ರಾಜಕಾರಣ ಮಾಡಿದಾಗ ಹೀಗಾಗುತ್ತದೆ ಎಂದು ಅವರು ತಿಳಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮತ್ತಿತರರು ಇದ್ದರು.