ಮೈಸೂರು ವಿವಿಗೆ ‘ಸುಧಾರಿತ ಅಧ್ಯಯನ ಕೇಂದ್ರ’ ಮನ್ನಣೆ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯವು ಸಂತಾನೋತ್ಪತ್ತಿ, ಜೀವಶಾಸ್ತ್ರ ಮತ್ತು ಜೆನೆಟಿಕ್ಸ್ ಕ್ಷೇತ್ರದಲ್ಲಿನ ಅತ್ಯುತ್ತಮ ಸಂಶೋಧನಾ ಕೊಡುಗೆಗಳಿಂದಾಗಿ ‘ಸುಧಾರಿತ ಅಧ್ಯಯನ ಕೇಂದ್ರ’ ಎಂಬ ಮನ್ನಣೆಯನ್ನು ಸಾಧಿಸಿದೆ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಜೆನೆಟಿಕ್ಸ್ ಅಂಡ್ ಜೆನೋಮಿಕ್ಸ್ ವಿಭಾಗದ ವತಿಯಿಂದ ಮಂಗಳವಾರ ‘ರಿಪ್ರೊಡಕ್ಷನ್ ಅಂಡ್ ಎಂಡೋಕ್ರಿನೋಲಾಜಿ’ ಬಗ್ಗೆ ನಡೆದ ಮೂರು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಜೆನೆಟಿಕ್ಸ್ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆಗೆ ಮೈಸೂರು ವಿವಿಗೆ ಈ ಗರಿ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮೈಸೂರು ವಿಶ್ವವಿದ್ಯಾನಿಲಯವು ವಿವಿಧ ಕ್ಷೇತ್ರದಲ್ಲಿನ ತುಲನಾತ್ಮಕ ಸಂಶೋಧನೆಯಲ್ಲಿ ಉತ್ಕೃಷ್ಟತೆ ಪಡೆದುಕೊಂಡಿರುವ ಕೇಂದ್ರವಾಗಿದೆ. ಜೆನೆಟಿಕ್ಸ್ ಅಂಡ್ ಜೆನೋಮಿಕ್ಸ್ ವಿಭಾಗವು ಸಂಶೋಧನೆ ಹಾಗೂ ವೈಜ್ಞಾನಿಕ ಚರ್ಚೆ ವೇದಿಕೆ ಒದಗಿಸಿದೆ. ಈ ಮೊದಲು ಜೆನೆಟಿಕ್ಸ್ ಅಂಡ್ ಜೆನೋಮಿಕ್ಸ್ ಪ್ರಾಣಿಶಾಸ್ತ್ರ ವಿಭಾಗದಲ್ಲಿತ್ತು. ಇದು ಪ್ರತ್ಯೇಕ ವಿಭಾಗವಾಗಿ ಸ್ಥಾನ ಪಡೆದಿದೆ ಎಂದು ಹೇಳಿದರು.

ಇಂದು ಜೆನೆಟಿಕ್ಸ್ ಕ್ಷೇತ್ರದಲ್ಲಿ ನಾನಾ ಸಂಶೋಧನೆಗಳು ನಡೆಯುತ್ತಿದ್ದು , 1930ರ ಆರಂಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಭಾಗವಾಗಿದ್ದ ಸೆಂಟ್ರಲ್ ಕಾಲೇಜಿನಲ್ಲಿ ನಾನಾ ಪ್ರಯೋಗಗಳು ನಡೆದಿದ್ದವು. ವೈಜ್ಞಾನಿಕ ಸಂಶೋಧನೆಯಲ್ಲಿ ಮೈಸೂರು ವಿವಿ ಸದಾ ಮುಂಚೂಣಿಯಲ್ಲಿತ್ತು ಎಂಬುದಕ್ಕೆ ಇದು ನಿದರ್ಶನವಾಗಿದೆ ಎಂದರು.

ಮೂರು ದಿನದ ಸಮ್ಮೇಳನದಲ್ಲಿ ಸಾಕಷ್ಟು ವೈಜ್ಞಾನಿಕ ಚರ್ಚೆಗಳು ನಡೆಯಬೇಕು. ಅಲ್ಲದೆ, ಇದು ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಜನ ನೀಡುವ ಜೊತೆಗೆ ಉನ್ನತ ಮಟ್ಟದ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ನೆರವು ನೀಡುತ್ತದೆ. ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳು ಆಗಬೇಕು. ಇದರ ಲಾಭ ಸಮಾಜಕ್ಕೆ ಸಿಗಬೇಕು ಎಂದು ಆಶಿಸಿದರು.

ಬರೋಡ ವಿಶ್ವವಿದ್ಯಾಲಯದ ಪ್ರಾಣಿಶಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಮಚಂದ್ರನ್ ಎ.ವಿ. ಅವರು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ನಾನಾ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಎಸ್‌ಆರ್‌ಬಿಸಿಇ ಉಪಾಧ್ಯಕ್ಷ ಪ್ರೊ.ಸುರೇಶ್ ಯೆನುಗು, ಕಾರ್ಯದರ್ಶಿ ಪ್ರೊ.ಮೈಕಲ್ ಅರುಲ್ಡಾಸ್ ಹಾಗೂ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ಸುತ್ತೂರು ಎಸ್. ಮಾಲಿನಿ ಸೇರಿದಂತೆ ಇತರರು ಹಾಜರಿದ್ದರು.

× Chat with us