ಬೆಂಗಳೂರು :ವಸತಿ ಶಾಲೆಯಲ್ಲಿದ್ದ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ.
ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ಮುಖ್ಯಸ್ಥರಾದ ಎಸ್.ಆರ್.ರಾಘವೇಂದ್ರ ಅವರು ಈ ಪ್ರಕರಣದಲ್ಲಿ ಗೃಹ ಸಚಿವರು ಹಾಗೂ ಗೃಹ ಇಲಾಖೆಯವರು ಕಾನೂನಿಗೆ ವಿರುದ್ದವಾಗಿ ಕೆಲಸ ಮಾಡಿದ್ದಾರೆ ಎಂದು ದೂರುವ ಮೂಲಕ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಆರೋಪಿತರ ಸ್ಥಾನದಲ್ಲಿರುವ ಸ್ವಾಮೀಜಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸುವಂತೆ ಗೃಹ ಸಚಿವರು ಆದೇಶಿಸಬೇಕಿತ್ತು. ಆದರೆ, ಸ್ವತಃ ಸಚಿವರೇ ದೂರಿನ ಹಿಂದೆ ಪಿತೂರಿ ಇದೆ ಎಂದು ಶಂಕಿಸಿದ್ದಾರೆ. ಇವರ ಅಧೀನದಲ್ಲಿರುವ ಗೃಹ ಇಲಾಖೆಯ ತನಿಖೆಯಿಂದ ನ್ಯಾಯ ದೊರಕುವ ವಿಶ್ವಾಸವಿಲ್ಲ ಎಂದು ಶಂಕಿಸಿದ್ದಾರೆ.