ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಒಲವು ವ್ಯಕ್ತಪಡಿಸಿದಂತೆ, ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ದೇವನಹಳ್ಳಿ ಕ್ಷೇತ್ರದಿಂದ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣಕ್ಕೆ ಮರಳಲು ಕಸರತ್ತು ನಡೆಸಿದ್ದಾರೆ. ಆದರೆ ದೇವನಹಳ್ಳಿ ಕ್ಷೇತ್ರದಿಂದ ಮುನಿಯಪ್ಪ ಸ್ಪರ್ಧೆಗೆ ಕಾಂಗ್ರೆಸ್ನಲ್ಲೇ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಕೆ.ಹೆಚ್.ಮುನಿಯಪ್ಪ ಅವರಿಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದು, ಸ್ಥಳೀಯರಿಗೆ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಅಲ್ಲದೇ ಕೆ.ಹೆಚ್.ಮುನಿಯಪ್ಪ ಸ್ಪರ್ಧೆ ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ಮುಖಂಡರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಕೆ.ಹೆಚ್ ಮುನಿಯಪ್ಪಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಪಕ್ಷ ಸೋಲುವ ಭೀತಿ ಇದೆ. ಅಲ್ಲದೇ ಎಡಗೈ ಸಮುದಾಯದ ಮತ ಚದುರುವ ಸಾಧ್ಯತೆ ಇದೆ. ಹೀಗಾಗಿ ಕೆ.ಹೆಚ್. ಮುನಿಯಪ್ಪಗೆ ಟಿಕೆಟ್ ನೀಡದಂತೆ ಒತ್ತಾಯಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಸ್ಥಳಿಯರು ಟಿಕೆಟ್ ಆಕಾಂಕ್ಷಿಗಳಾಗಿ ಕೆಲಸ ಮಾಡಿದ್ದಾರೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡದೆ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಪುರಸಭೆ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಪಕ್ಷದ ಮುಖಂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಮಾನ ನಿಲ್ದಾಣವಿರುವ ದೇವನಹಳ್ಳಿಯತ್ತ ರಾಜ್ಯ ದಲಿತ ನಾಯಕರ ಚಿತ್ತ ಕೇಂದ್ರೀಕೃತವಾಗುತ್ತಿದೆ. ದಲಿತ ಮತಗಳ ಪ್ರಾಬಲ್ಯ ಹೊಂದಿರುವ ಮೀಸಲು ಕ್ಷೇತ್ರದಲ್ಲಿ ದಶಕಗಳಿಂದ ಕಾಂಗ್ರೆಸ್, ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ. 2008 ರ ಬಳಿಕ ಜೆಡಿಎಸ್ ಭದ್ರಕೋಟೆಯಾಗಿ ಪರಿವರ್ತನೆಯಾಗಿದೆ.
2013 ಮತ್ತು 2018ರಲ್ಲಿ ಜೆಡಿಎಸ್ ಗೆಲುವಿನ ನಾಗಾಲೋಟ ಬೀರಿದೆ. 2008ರಲ್ಲಿ ಕಾಂಗ್ರೆಸ್ನ ವೆಂಕಟಸ್ವಾಮಿ ಗೆಲುವು ಸಾಧಿಸಿದ್ದರೆ, 2013ರಲ್ಲಿ ಪಿಳ್ಳಮುನಿಶಾಮಪ್ಪ, 2018ರಲ್ಲಿ ನಿಸರ್ಗ ನಾರಾಯಣಸ್ವಾಮಿ ಜೆಡಿಎಸ್ನಿಂದ ಶಾಸಕರಾಗಿ ಆಯ್ಕೆಯಾದ್ದರು. ಕಳೆದ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಜೆಡಿಎಸ್ನ ಪಿಳ್ಳಮುನಿಶಾಮಪ್ಪ ಪ್ರಸ್ತುತ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್ನಿಂದ ಹಾಲಿ ಶಾಸಕರೇ ಅಖಾಡದಲ್ಲಿದ್ದಾರೆ. ಆದರೆ, ಕಾಂಗ್ರೆಸ್ನಲ್ಲಿ 6ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದು, ಬಣ ರಾಜಕೀಯ ಆಟಗಳು ಹೆಚ್ಚಿವೆ. ಕಾಂಗ್ರೆಸ್ನಿಂದ ರಾಜ್ಯಮಟ್ಟದ ನಾಯಕರೊಬ್ಬರಿಗೆ ಟಿಕೆಟ್ ಸಿಕ್ಕರೆ ಜೆಡಿಎಎಸ್ ಗೆ ನೇರ ಸ್ಪರ್ಧೆ ಏರ್ಪಡುವ ನಿರೀಕ್ಷೆಇದೆ.