ಮೈಸೂರು: ನಾಡಿನ ಹಿರಿಯ ವಿದ್ವಾಂಸರು, ಜಾನಪದ ತಜ್ಞರು ಮತ್ತು ವಿಶ್ರಾಂತ ಪ್ರಾಧ್ಯಾಪಕರೂ ಆದ ಡಾ.ರಾಮೇಗೌಡ (ರಾಗೌ) ರವರ ಧರ್ಮಪತ್ನಿ ಶ್ರೀಮತಿ ಯಶೋಧರಾಗೌ(73 ವರ್ಷ)ರವರು ಅನಾರೋಗ್ಯದ ನಿಮಿತ್ತ ದಿನಾಂಕ 05.08.2022 ರಂದು ಬೆಳಿಗ್ಗೆ 9.00 ಘಂಟೆ ಸಮಯದಲ್ಲಿ ನಿಧನ ಹೊಂದಿದರು. ನಗರದ ಒಂಟಿಕೊಪ್ಪಲಿನ ಕಾಳಿದಾಸ ರಸ್ತೆಯಲ್ಲಿರುವ ನಿವಾಸದಲ್ಲಿ ಡಾ.ರಾಗೌ ಅವರೊಂದಿಗೆ ವಾಸವಾಗಿದ್ದ ಯಶೋಧ ರವರು ಹಲವಾರು ವರ್ಷಗಳಿಂದಲೂ ಸಹ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು ಇಂದು ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು.
ಮೂಲತಹ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಅಂಕನಹಳ್ಳಿ ಗ್ರಾಮದವರಾದ ಯಶೋಧರವರು ಡಾ.ರಾಗೌರವರನ್ನು ವಿವಾಹವಾದ ದಿನಗಳಿಂದಲೂ ಸಹ ರಾಗೌರವರ ಸಾಹಿತ್ಯ ಮತ್ತು ಕನ್ನಡ ಭಾಷೆಯ ಅಭಿವೃದ್ಧಿಯ ಕೆಲಸ ಕಾರ್ಯಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತಿದ್ದರು. ಡಾ.ರಾಗೌರವರು ಸ್ಥಾಪಿಸಿದ್ದ ಯಶೋಧ ರಾಗೌ ಟ್ರಸ್ಟಿನ ವತಿಯಿಂದ ಬಹಳ ವರ್ಷಗಳಿಂದಲೂ ಸಹ ಹಮ್ಮಿಕೊಳ್ಳುತ್ತಿದ್ದ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಅವರೊಂದಿಗೆ ಸಕ್ರೀಯವಾಗಿ ಎಲ್ಲಾ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಿದ್ದ ಯಶೋಧ ರವರು ಪತಿ ಡಾ.ರಾಗೌ, ಪುತ್ರ ಆರ್.ರವೀಂದ್ರ, ಸೊಸೆಯಂದಿರಾದ ರೂಪ, ಉರ್ಮಿಳ, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಗೋಕುಲಂ ರುದ್ರ ಭೂಮಿಯಲ್ಲಿ ಸಂಜೆ 6.00 ಘಂಟೆಗೆ ನೆರವೇರಿತು. ನಾಡಿನ ಹಿರಿಯ ಸಾಹಿತಿಗಳಾದ ಡಾ.ಸಿ.ಪಿ.ಕೆ., ಪಂಡಿತಾರಾಧ್ಯ, ಪ್ರೊ.ಎಂ..ಕೃಷ್ಣೇಗೌಡರು (ಹಾಸ್ಯ), ಶಾಸಕರಾದ ಎಲ್.ನಾಗೇಂದ್ರ, ಮಾಜಿ ಶಾಸಕರಾದ ವಾಸು, ಎಂ.ಸಿ.ಡಿ.ಸಿ.ಸಿ. ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಸಿ.ಬಸವೇಗೌಡ, ಮಾಜಿ ಮೈಮುಲ್ ಅಧ್ಯಕ್ಷರಾದ ಎ.ಟಿ.ಸೋಮಶೇಖರ್, ಕಾಂಗ್ರೆಸ್ ಮುಖಂಡರಾದ ಕೆ.ಹರೀಶ್ ಗೌಡ, ವಿಜಯನಗರ ಸಾಂಸ್ಕೃತಿಕ ಸಂಸ್ಥೆಯ ಪತ್ರಿಕಾ ಕಾರ್ಯದರ್ಶಿ ಪಡುವಾರಹಳ್ಳಿ.ಬಿ.ಶ್ರೀನಿವಾಸ್, ಕಾರ್ಯದರ್ಶಿ ರಾಮಕೃಷ್ಣ, ಮಾಜಿ ನಗರ ಪಾಲಿಕೆ ಸದಸ್ಯರಾದ ವಸಂತ ಶ್ರೀಕಂಠ, ಮಂಡ್ಯದ ಕನ್ನಡ ಸಂಘದ ಅಧ್ಯಕ್ಷರಾದ ಜಯಪ್ರಕಾಶಗೌಡ, ಸಂವಹನ ಪ್ರಕಾಶನದ ಲೋಕಪ್ಪ, ಪ್ರೊ.ಕಾಳಚನ್ನೇಗೌಡ ಸೇರಿದಂತೆ ಇನ್ನೂ ಅನೇಕ ಮಂದಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಅಂತಿಮ ನಮನಗಳನ್ನು ಸಲ್ಲಿಸಿದರು.