ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿ ಫಾರಂ ಪಡೆಯುವ ಸಲುವಾಗಿ ೫೦೦ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ೧೦ ದಿನಗಳಿಂದ ಸುಮಾರು ೧೧೦೦ಕ್ಕೂ ಹೆಚ್ಚು ಮಂದಿ ೫ ಸಾವಿರ ರೂ. ಶುಲ್ಕ ಪಾವತಿಸಿ ಅರ್ಜಿಗಳನ್ನು ಖರೀದಿಸಿದ್ದಾರೆ. ಅವರಲ್ಲಿ ೫೦೦ ಮಂದಿ ಠೇವಣಿ ಬಾಂಡ್ನೊಂದಿಗೆ ಅರ್ಜಿ ಸಲ್ಲಿಸಿದ್ದಾರೆ.
ಕೆಪಿಸಿಸಿಯ ಈ ಬಾರಿ ಸ್ಪಷ್ಟ ನಿಯಮಾವಳಿ ರಚನೆಯಾಗಿದ್ದು, ಬಿ ಫಾರಂ ಪಡೆಯಬೇಕಾದರೆ ಎಷ್ಟೇ ಪ್ರಭಾವಿ ನಾಯಕರಾಗಿದ್ದರು ಅರ್ಜಿ ಸಲ್ಲಿಕೆ ಕಡ್ಡಾಯ ಎಂಬ ಷರತ್ತು ವಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಅರ್ಜಿ ಸಲ್ಲಿಸಬೇಕಾಗಿದೆ.
ಆದರೆ ಈವರೆಗೂ ೪೦ ಮಂದಿ ಶಾಸಕರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಸುಮಾರು ೨೦ಕ್ಕೂ ಹೆಚ್ಚು ಶಾಸಕರು ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ಸಮಯ ಅವಕಾಶವನ್ನು ಮತ್ತೊಂದು ವಾರ ವಿಸ್ತರಣೆ ಮಾಡುವ ಸಾಧ್ಯತೆ ಇದೆ.
ಠೇವಣಿ ಬಾಂಡ್ ಸಲ್ಲಿಕೆ ಸಾಮಾನ್ಯ ಕಾರ್ಯಕರ್ತರಿಗೆ ತಲೆ ಬಿಸಿ ಉಂಟು ಮಾಡಿದೆ. ಪರಿಶಿಷ್ಟ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು ಒಂದು ಲಕ್ಷ ರೂ, ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳು ೨ ಲಕ್ಷ ರೂ. ಠೇವಣಿ ಬಾಂಡ್ ನೀಡಬೇಕಿದೆ.
ಕೆಲವು ಕ್ಷೇತ್ರಗಳಲ್ಲಿ ಐದಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕೆಲವು ಕಡೆ ಹಾಲಿ ಶಾಸಕರಿರುವ ಕ್ಷೇತ್ರಗಳಿಗೂ ಸ್ಥಳೀಯ ನಾಯಕರು ಅರ್ಜಿ ಹಾಕಿರುವುದು ಕುತೂಹಲ ಕೆರಳಿಸಿದೆ. ಕೆಲವು ನಾಯಕರು ತಾವು ಅರ್ಜಿ ಸಲ್ಲಿಸಿದ್ದು, ತಮ್ಮ ಕುಟುಂಬದ ಸದಸ್ಯರಿಂದಲೂ ಅರ್ಜಿ ಹಾಕಿಸಿದ್ದಾರೆ.
ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ಸ್ಪಷ್ಟ ನಿರ್ಧಾರವನ್ನು ಉದಯ್ಪುರ್ ಘೋಷಣೆಯಲ್ಲಿ ಮಾಡಲಾಗಿದೆ. ಅದರ ಹೊರತಾಗಿಯೂ ಕೆಲವು ನಾಯಕರು ಯಾವುದಕ್ಕೂ ಇರಲಿ ಎಂಬ ಮುಂದಾಲೋಚನೆಯಿಂದ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅಂತಿಮ ಗಡುವು ಮುಗಿದ ಬಳಿಕ ಡಿಸೆಂಬರ್ ವೇಳೆಗೆ ಅರ್ಜಿಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಮೂಲಗಳ ಪ್ರಕಾರ ಠೇವಣಿ ಬಾಂಡ್ನೊಂದಿಗೆ ಸಲ್ಲಿಕೆಯಾಗಿರುವ ಅರ್ಜಿಗಳು ಮಾತ್ರ ಪರಿಗಣಿಸಲ್ಪಡುತ್ತದೆ ಎಂದು ಹೇಳಲಾಗಿದೆ.
ಅನ್ಯ ಪಕ್ಷಗಳಿಂದ ವಲಸೆ ಬರುವ ಪ್ರಭಾವಿ ನಾಯಕರಿಗೆ ಗ್ರೀನ್ ಕಾರ್ಡ್ ಎಂಟ್ರಿ ಎಂಬಂತೆ ವಿಶೇಷ ಅವಕಾಶ ಕಲ್ಪಿಸಿ ಟಿಕೆಟ್ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಅರ್ಜಿ ಖರೀದಿಸಿದ್ದವರು ೧,೧೦೦ ಮಂದಿ
ಹಾಲಿ ೪೦ ಶಾಸಕರಿಂದ ಮಾತ್ರ ಅರ್ಜಿ
ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ ಸಾಧ್ಯತೆ