ಅಂಕ-ಅಂಶ ತಿಳಿದು ಮಾತನಾಡುವುದು ಒಳಿತು: ರಾಹುಲ್ ಗಾಂಧಿಗೆ ಬಸವರಾಜ ಬೊಮ್ಮಾಯಿ ತಿರುಗೇಟು
ಕೆ.ಆರ್.ಪೇಟೆ: ಇಡೀ ಭಾರತದಲ್ಲೇ ನಡೆಯದ ಭ್ರಷ್ಟಾಚಾರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯಲ್ಲಿ ನಡೆದಿದೆ. ಈ ಬಗ್ಗೆ ಅಂಕಿ-ಅಂಶಗಳನ್ನು ತಿಳಿದು ಮಾತನಾಡುವುದು ಒಳಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ಯುವ ಮುಖಂಡ ರಾಹುಲ್ಗಾಂಧಿಯವರಿಗೆ ತಿರುಗೇಟು ನೀಡಿದರು.
ತಾಲ್ಲೂಕಿನ ಅಂಬಿಗರಹಳ್ಳಿಯಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯಲ್ಲೇ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ. ನಿಮ್ಮ ಆಡಳಿತದಲ್ಲಿ ನಡೆದಿರುವುದನ್ನು ನೋಡಿಕೊಳ್ಳಿ, ನಂತರ ಮಾತನಾಡಿ ಎಂದು ಛೇಡಿಸಿದರು.
ಅತಿ ಧೀರ್ಘ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಕರು, ಪೊಲೀಸರು, ಅಭಿಯೋಜಕರು ಸೇರಿದಂತೆ ಎಲ್ಲ ನೇಮಕಾತಿಗಳಲ್ಲೂ ಭಾರೀ ಭ್ರಷ್ಟಾಚಾರ ನಡೆದಿದೆ. ಈ ವಿಚಾರವನ್ನು ತಿಳಿಯದೆ ಮಾತನಾಡುವುದು ನಿಮಗೆ ಶೋಭೆ ತರುವುದಿಲ್ಲ ಎಂದರು.
ಕಾAಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಎಲ್ಲ ಪ್ರಕರಣಗಳೂ ತನಿಖೆ ಹಂತದಲ್ಲಿವೆ. ಪಿಯುಸಿ ಪ್ರಶ್ನೆ ಪತ್ರಿಕೆಗಳೂ ಸಹ ಸೋರಿಕೆಯಾಗಿದ್ದವು. ಎಲ್ಲದರ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡುವುದು ಒಳಿತು. ಅದು ಬಿಟ್ಟು ಜನರಲ್ಲಿ ಗೊಂದಲ ಮೂಡಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಹೇಳಿದ್ದು ಸತ್ಯವಾಗಿಲ್ಲ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈವರೆಗೆ ಹೇಳಿರುವುದೆಲ್ಲವೂ ಸತ್ಯವಾಗಿಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಾವು ೧೩೦ಕ್ಕೂ ಹೆಚ್ಚು ಸ್ಥಾನ ಗಳಿಸಿ ಅಧಿಕಾರ ಹಿಡಿಯುತ್ತೇವೆ ಎಂದಿದ್ದರು. ೭೦ ರಿಂದ ೮೦ ಸ್ಥಾನಕ್ಕಿಂತಲೂ ಹೆಚ್ಚು ಕಾಂಗ್ರೆಸ್ ಗೆಲ್ಲಲಿಲ್ಲ ಎಂದು ವ್ಯಂಗ್ಯವಾಡಿದರು.
ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪ ಅವರಪ್ಪನಾಣೆಗೂ ಮುಖ್ಯಮಂತ್ರಿಯಾಗಲ್ಲ ಎಂದಿದ್ದರು. ಕುಮಾರಸ್ವಾಮಿಯ ನಂತರ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದನ್ನು ರಾಜ್ಯದ ಜನತೆ ನೋಡಿದ್ದಾರೆ. ಹೀಗಾಗಿ ಅವರು ಹೇಳುವುದೆಲ್ಲವೂ ಸತ್ಯವಾಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಶಾಶ್ವತ ಕ್ರಮಕ್ಕೆ ಚಿಂತನೆ
ರಾಜ್ಯದಲ್ಲಿ ಮತ್ತೆ ಮಳೆಯಾಗುತ್ತಿದೆ. ಇದರಿಂದ ಸಾಕಷ್ಟು ಆಸ್ತಿ ಪಾಸ್ತಿಗಳಿಗೆ ನಷ್ಟ ಉಂಟಾಗಿದೆ. ಕೆರೆ ಕಟ್ಟೆಗಳು ತುಂಬಿ ಹರಿದು ಒಡೆದುಹೋಗಿವೆ. ಇದಕ್ಕೆ ಧೀರ್ಘಕಾಲದ ಶಾಶ್ವತ ಹಾಗೂ ತಕ್ಷಣದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತಂತೆ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಈಗಾಗಲೇ ೬೦೦ ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಧೀರ್ಘ ಕಾಲಕ್ಕೆ ಏನು ಬೇಕೋ ಅದನ್ನೂ ಮಾಡುತ್ತೇವೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದಿದ್ದು, ಮಂಡ್ಯ ಜಿಲ್ಲೆಯಲ್ಲೂ ಸಹ ಹತ್ತಾರು ಕೆರೆಗಳು ತುಂಬಿ ಒಡೆದಿರುವುದನ್ನು ಗಮನಿಸಿದ್ದೇನೆ. ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ನಾಳೆ ಸೋಮವಾರ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳ ಜತೆ ವೀಡಿಯೋ ಕಾನ್ಫರೆನ್ಸ್ ನಡೆಸಲಾಗುವುದು. ಎಲ್ಲೆಲ್ಲಿ ತುರ್ತು ಅಗತ್ಯವಿದೆಯೋ ಅಲ್ಲಿ ತಕ್ಷಣದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.