ಮೈಸೂರಿಗೆ ಹೊಸ ಇಮೇಜ್ ತಂದು ಕೊಟ್ಟ ಮೋದಿ ಯೋಗಾಭ್ಯಾಸ

ವಿದೇಶಗಳಲ್ಲಿ ಮತ್ತಷ್ಟು ಆಕರ್ಷಿಸಿದ ಅರಮನೆ ಸೌಂದರ್ಯ; ದಣಿವರಿಯದಂತೆ ಕೆಲಸ ಮಾಡಿದ ಜನಪ್ರತಿನಿಧಿಗಳು, ಅಧಿಕಾರಿ ವರ್ಗ

ಮೈಸೂರು: ದೇಶ, ವಿದೇಶಗಳ ಪ್ರವಾಸಿಗರ ಕಣ್ಮನ ಸೆಳೆದಿದ್ದ ವಿಶ್ವ ವಿಖ್ಯಾತ ಅರಮನೆ ಆವರಣದಲ್ಲಿ ನಡೆದ ಪ್ರಧಾನಿ ಮೋದಿ ಯೋಗಾಭ್ಯಾಸದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಖ್ಯಾತಿ ಹೊಂದುವ ಜತೆಗೆ ಭವಿಷ್ಯದಲ್ಲಿ ಯೋಗ ಬ್ರ್ಯಾಂಡ್ ಆಗಿ ರೂಪುಗೊಳ್ಳಲು ಸಹಾಯವಾಯಿತು.

ಮೈಸೂರು ಯೋಗದ ತವರೂರು ಎನ್ನುವ ಜತೆ ಜತೆಗೆ ಬ್ರ್ಯಾಂಡ್ ಆಗಿ ಹೊರ ಹೊಮ್ಮುವ ಮೂಲಕ ಮುಂದೆ ಪಠ್ಯಕ್ರಮ ಸೇರಿದಂತೆ ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಕಲಿಕೆಗೂ ಅವಕಾಶ ಸಿಗುವ ದಾರಿಯಾಗಲಿದೆ. ಈಗಾಗಲೇ ಕೇಂದ್ರ ಆಯುಷ್ ಮಂತ್ರಾಲಯವು ಯೋಗದ ಮಹತ್ವಕ್ಕೆ ಹೆಚ್ಚಿನ ಗಮನಹರಿಸಿರುವುದರಿಂದ ಭವಿಷ್ಯದಲ್ಲಿ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ.

ದಣಿವರಿಯದಂತೆ ಕೆಲಸ ಮಾಡಿದ ಮುಖ್ಯಸ್ಥರು: ದಕ್ಷಿಣ ಪದವೀಧರರ ಕ್ಷೇತ್ರದ ಜತೆಗೆ ಪ್ರಧಾನಮಂತ್ರಿಗಳ ಕಾರ್ಯಕ್ರಮ ಬಂದಿದ್ದರಿಂದ ಒಂದು ತಿಂಗಳಿಂದ ಅಧಿಕಾರಿಗಳು ಹಗಲು- ರಾತ್ರಿ ಎನ್ನದೆ ಕೆಲಸ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್, ಸಂಸದ ಪ್ರತಾಪ್ ಸಿಂಹ ಅವರಲ್ಲದೆ ಇತರ ಜನಪ್ರತಿನಿಧಿಗಳು ಯೋಗ ಕಾರ್ಯದಲ್ಲಿ ಕೆಲಸ ಮಾಡಿದ್ದರು. ವಿಶೇಷವಾಗಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥ್ ಸ್ವಾಮಿ, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ನಗರಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಮುಡಾ ಆಯುಕ್ತ ಜಿ.ಟಿ.ದಿನೇಶ್ ಕುಮಾರ್, ಆಯುಷ್ ಉಪ ನಿರ್ದೇಶಕಿ ಡಾ.ಸೀತಾಲಕ್ಷ್ಮೀ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಹಗಲಿರುಳು ಕೆಲಸ ಮಾಡಿದ್ದರು.

ಯೋಗ ದಿನಾಚರಣೆ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಯೋಗಪಟುಗಳನ್ನು ಆಯ್ಕೆ ಮಾಡುವುದು, ಕರೆತರುವುದು, ಊಟ-ತಿಂಡಿ, ವೇದಿಕೆ, ಪ್ರಧಾನಿ ವಾಸ್ತವ್ಯ, ಭದ್ರತೆ, ಸ್ವಚ್ಛತೆ, ಫಲಾನುಭವಿಗಳನ್ನು ಕರೆತರುವುದು ಸೇರಿದಂತೆ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಶಹಬ್ಬಾಸ್‌ಗಿರಿ ಪಡೆದುಕೊಂಡಿದ್ದಾರೆ.

ನಿಟ್ಟುಸಿರು ಬಿಟ್ಟ ಜನತೆ

ಕಳೆದ ಎರಡು-ಮೂರು ದಿನಗಳಿಂದ ಸಂಚಾರದ ಒತ್ತಡದಲ್ಲಿ ಸಿಲುಕಿದ್ದ ಜನರು ನಿಟ್ಟುಸಿರುಬಿಟ್ಟರು. ಸೋಮವಾರ ಬೆಳಿಗ್ಗೆಯಿಂದ ಮಂಗಳವಾರ ಹತ್ತು ಗಂಟೆಯ ತನಕ ಬಹುತೇಕ ಮಾರ್ಗಗಳನ್ನು ಬಂದ್ ಮಾಡಿದ್ದಲ್ಲದೆ, ಬೇರೆ ಬೇರೆ ಮಾರ್ಗಗಳಲ್ಲಿ ಸಂಚಾರ ಮಾಡುವಂತೆ ಹೇಳಿದ್ದರಿಂದ ಸವಾರರು ಪರದಾಡಿದ್ದರು. ಅದರಲ್ಲೂ ಹೃದಯ ಭಾಗದ ರಸ್ತೆಗಳ ಸಂಚಾರ ಮಾರ್ಗವನ್ನು ಬದಲಿಸಿದ್ದರಿಂದ ಸವಾರರು ಬೇರೆಡೆಗೆ ತೆರಳಲು ಪರದಾಡುವ ಜೊತೆಗೆ ಸುಸ್ತಾಗಿ ಹೋದರು. ಅರಮನೆ, ಚಾಮುಂಡಿ ಬೆಟ್ಟ ವೀಕ್ಷಿಸಲು ಬಂದಿದ್ದ ಪ್ರವಾಸಿಗರು ಪ್ರಧಾನಿ ಭೇಟಿಯಿಂದ ಪ್ರವೇಶ ಸಿಗದೆ ನಿರಾಶೆಯಿಂದ ಹಿಂತಿರುಗಿದ್ದರು.