ಪಠ್ಯ ಪರಿಷ್ಕರಣೆ ವಿವಾದ : ಸರ್ಕಾರದ ನಿಲುವುಗಳನ್ನು ಸಮರ್ಥಿಸಿಕೊಂಡ ಅಶೋಕ್‌

ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿವಾದ ತಣ್ಣಗಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಇದೇ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್  ಸುದ್ದಿಗೋಷ್ಠಿ ನಡೆಸಿ ಸರ್ಕಾರದ ನಿಲುವುಗಳನ್ನು ಸಮರ್ಥಿಸಿಕೊಂಡರು. ವಿಪಕ್ಷಗಳು ವಿನಾಕಾರಣ ವಿವಾದ ಮಾಡಿದವರು ಎಂದು ಆರೋಪಿಸಿದರು.  ಹಿಂದೆ ತಮಗೆ ಬೇಕಾದಂತೆ ಅಜೆಂಡಾಗಳನ್ನು ತುರುಕಿದ್ದರು. ಆಗ ಯಾವುದೇ ಚರ್ಚೆ ಆಗುತ್ತಿರಲಿಲ್ಲ, ಈ ಬಾರಿ ಮಾತ್ರ ವಿವಾದ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಪಠ್ಯ ಚರ್ಚೆಗೆ ಒಳಗಾಗಿದೆ. ಹೆಡೆಗೇವಾರ್ ವಿಚಾರ ಸೇರಿಸಿರುವುದು ಚರ್ಚೆಗೆ ಒಳಗಾಗಿದೆ. ಹಿಡನ್ ಅಜೆಂಡಾ ಇರುವ ಕೆಲವು ಸಾಹಿತಿಗಳು ಹಿಂದೂ ಮಲಗಿದರೆ ದೇಶ ಮಲಗೀತು ಎಂಬ‌ ಭ್ರಮೆಯಲ್ಲಿದ್ದಾರೆ. ನಾವೆಲ್ಲಾ ವಿವೇಕಾನಂದರ ಫಾಲೋವರ್ಸ್. ಹಿಂದೂ ಎದ್ದರೆ ದೇಶ ಎದ್ದೀತು ಎಂದು ವಿವೇಕಾನಂದ ಹೇಳಿದ್ದರು ಎಂದು ಸಚಿವ ಅಶೋಕ್ ವಿರೋಧಿಗಳಿಗೆ ತಿರುಗೇಟು ನೀಡಿದರು.

ಹಿಂದೆ ವಿಶ್ವೇಶ್ವರ ಹೆಗಡೆ ಕಾಗೇರಿ ಸಚಿವರಾಗಿದ್ದಾಗ ಪಠ್ಯ ಪುಸ್ತಕ ಸಮಿತಿ ರಚನೆ ಆಗಿತ್ತು. ನಂತರ ಮುಂದೆ ಎರಡು ವರ್ಷದಲ್ಲಿ ಬರಗೂರು ಸಮಿತಿ ಕೆಲವು ಬದಲಾವಣೆ ಮಾಡಿತು. ಯಾಕೆಂದರೆ ಬಹಳ ಕಡೆ ಹಿಂದೂ ಮಹಾಸಾಗರದ ಹಿಂದೂ‌ ಎಂಬ ಹೆಸರಿತ್ತು, ರಾಮ, ಈಶ್ವರ, ಶಿವಾಜಿ ಹೆಸರಿತ್ತು. ಇದು ಯಾವುದೂ ಅವರಿಗೆ ಇಷ್ಟವಾಗದ ಹೆಸರುಗಳು. ಅದಕ್ಕೆ ಸಮಿತಿ ಮಾಡಿ ಆ ಹೆಸರುಗಳನ್ನು ತೆಗೆದಿದ್ದಾರೆ. ಕಾಂಗ್ರೆಸ್ ಸರ್ಕಾರದ ಸಂದರ್ಭದಲ್ಲಿ  ತಪ್ಪುಗಳಾಗಿವೆ ಎಂದು ಆರೋಪಿಸಿ ಅದಕ್ಕೆ ಪುಸ್ತಕ ರೂಪದಲ್ಲಿ ದಾಖಲೆ ಕೊಟ್ಟರು. ಸಿದ್ದರಾಮಯ್ಯ ಕಾಲದಲ್ಲಿ ಕುವೆಂಪು ಅವರ 8 ಗದ್ಯ ಪದ್ಯ ಪೈಕಿ ಒಂದನ್ನು ತೆಗೆದು ಹಂಸಲೇಖ ಅವರ ಬಣ್ಣದ ಬುಗುರಿ ಪದ್ಯ ಸೇರಿಸಲಾಯ್ತು. ಈಗ ಕಾಂಗ್ರೆಸ್ ನವರು ಕುವೆಂಪು ಬಗ್ಗೆ ನಮ್ಮ ಸರ್ಕಾರ ತಾರತಮ್ಯ ಮಾಡಿದೆ ಎಂದು ಹೇಳುತ್ತಿದ್ದಾರೆ. ಈಗ ನಮ್ಮ ಸರ್ಕಾರ ಕುವೆಂಪು ಅವರ 10 ಗದ್ಯ ಪದ್ಯ ಮಾಡಿದೆ. ಸಿದ್ದರಾಮಯ್ಯ ಸರ್ಕಾರದ ಬದಲಾವಣೆ ಮಾಡಿದಾಗ ಈ ಸಾಹಿತಿಗಳು ಯಾಕೆ ಧ್ವನಿ ಎತ್ತಲಿಲ್ಲ? ಈಗ ಯಾಕೆ ಮಾತಾಡ್ತಿದ್ದಾರೆ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಕಾಲದಲ್ಲಿ ಬೆಂಗಳೂರು ಪರಿಚಯಿಸುವ ಪಾಠದಲ್ಲಿ ಕೆಂಪೇಗೌಡರ ಉಲ್ಲೇಖ ಇರಲಿಲ್ಲ. ನಾಡಿನ ಅಭಿಮಾನದ ಗೀತೆ ಚೆಲುವ ಕನ್ನಡ ನಾಡಿದು ಗೀತೆ ತೆಗೆಯಲಾಗಿದೆ. ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ಪದ್ಯ ತೆಗೆಯಲಾಗಿದೆ. ಮೈಸೂರು ಮನೆತನದ ಅಧಿದೇವತೆ ಎಂಬ ಅಂಶ ತೆಗೆಯಲಾಗಿದೆ. ಸಿದ್ದರಾಮಯ್ಯಗೆ ಟಿಪ್ಪು ಅಂದರೆ ಮೈ ಮೇಲೆ ಬಂದು ಬಿಡುತ್ತದೆ. ಈ ಎಲ್ಲಾ ವಿಷಯಗಳಲ್ಲಿ ಕಡೆಗಣಿಸಿದ್ದಾರೆ.

ಕಾಂಗ್ರೆಸ್​ ವಿರುದ್ಧ ಸಚಿವ ಅಶೋಕ್​ ಆರೋಪಗಳು

  • ಟಿಪ್ಪು ವರ್ಣನೆ ಮಾಡಿ ಮೈಸೂರು ಒಡೆಯರ ಕಡೆಗಣನೆ ಮಾಡಲಾಗಿದೆ. ಈ ಮೂಲಕ ಮೈಸೂರು ಒಡೆಯರಿಗೆ ಸಿದ್ದರಾಮಯ್ಯ ಕಾಲದಲ್ಲಿ ಅಪಮಾನ ಆಗಿದೆ.
  • ಮಥುರಾ ಶ್ರೀಕೃಷ್ಣ ಮಂದಿರ, ಸೋಮನಾಥ ದೇವಾಲಯದ ಅಂಶ ಕೈ ಬಿಡಲಾಗಿದೆ.
  • ಭಾರತದ ಮಹಾರಾಜರ ಕೊಡುಗೆಗಳನ್ನು ಕಡೆಗಣನೆ ಮಾಡಲಾಗಿದೆ.
  • ಖಿಲ್ಜಿ ಕಾಲದ ಗುಲಾಮಗಿರಿ ಅಂಶ ಕೈಬಿಡಲಾಗಿದೆ.
  • ವಿಜಯನಗರ ಮರೆಯಲಾಗದ ಸಾಮ್ರಾಜ್ಯ ಎಂಬ ಪಾಠದ ಹೆಸರು ಮತ್ತು ಕೆಲವು ಅಂಶಗಳಿಗೆ ಕತ್ತರಿ ಹಾಕಿದ್ದಾರೆ.
  • ಗಾಂಧೀಜಿ ಭಾರತ ಪಾಕಿಸ್ತಾನ ವಿಭಜನೆ ನಂತರ ಮತೀಯ ಗಲಭೆ ನಿಯಂತ್ರಿಸಲು ಕಲ್ಕತ್ತಾದಲ್ಲಿ ಗೀತೆಯನ್ನು ಪಠಿಸುತ್ತಿದ್ದರು ಎಂಬ ಅಂಶಕ್ಕೆ ಕತ್ತರಿ ಹಾಕಿದ್ದಾರೆ.
  • ಮತೀಯ ಯುದ್ಧಗಳ ಕುರಿತಾದ ಅಂಶಗಳು, ಶಿವಾಜಿ ಮಹಾರಾಜರ ಉಲ್ಲೇಖಕ್ಕೆ ಕತ್ತರಿ ಹಾಕಿದ್ದಾರೆ.
  • ಚಂಗೀಸ್ ಖಾನ್ ಮತ್ತು ತೈಮೂರು ದಾಳಿಗಳ ಅಂಶ ತೆಗೆಯಲಾಗಿದೆ.
  • ರಜಪೂತರ ಗುಣ ಧರ್ಮಗಳನ್ನು ಕೈ ಬಿಟ್ಟು ಮೊಘಲರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು.
  • ಟಿಪ್ಪುವಿನ ಅತಿಯಾದ ವೈಭವೀಕರಣ ಮಾಡಲಾಗಿದೆ
  • ಸರ್ವಾಧಿಕಾರದಿಂದ ರಾಷ್ಟ್ರಪ್ರೀತಿ ಹೆಚ್ಚುತ್ತದೆ ಎಂಬ ಅಂಶವನ್ನು ಸಮಾಜ ವಿಜ್ಞಾನ ಪಾಠದಲ್ಲಿ ಸೇರಿಸಲಾಗಿದೆ.

ವಾಗ್ದಾಳಿ ಮುಂದುವರೆಸಿದ ಸಚಿವ ಅಶೋಕ್​, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಠ್ಯಪುಸ್ತಕ ಹರಿದು ಹಾಕಿದರು. ಅವರು ಪಠ್ಯಪುಸ್ತಕ ಹರಿದು ಹಾಕಬಾರದಿತ್ತು. ಯಾಕೆಂದರೆ ಅದರಲ್ಲಿ ಕೆಂಪೇಗೌಡರ ಉಲ್ಲೇಖ ಇತ್ತು.  ಕೆಂಪೇಗೌಡರ ಉಲ್ಲೇಖ ಇದ್ದ ಪುಸ್ತಕವನ್ನು ಶಿವಕುಮಾರ್ ಹರಿದು ಹಾಕಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಹೊಸದಾಗಿ ಪಠ್ಯಪುಸ್ತಕಕ್ಕೆ ಸೇರಿಸಿರುವ ಅಂಶಗಳು

  •  ಭಾರತ ನಮ್ಮ ಹೆಮ್ಮೆ ಎಂದು ಆರನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಸೇರಿಸಿದ್ದೇವೆ, ಇದ್ರಲ್ಲಿ ತಪ್ಪೇನಿದೆ?
  • ಕೆ ಎಸ್ ನರಸಿಂಹಸ್ವಾಮಿರವರ ಭಾರತೀಯತೆ ಕವನವನ್ನ ಸೇರಿಸಿದ್ದೇವೆ.
  • ಸ್ವಾತಂತ್ರ್ಯ ಹೋರಾಟಗಾರರಾದ ನಿಟ್ಟೂರು ಶ್ರೀನಿವಾಸರಾಯರ ಪಾಠ ಮರು ಸೇರ್ಪಡೆ ಮಾಡಿದ್ದೇವೆ.
  • ಚೆನ್ನಾಭೈರಾದೇವಿ ಕನ್ನಡ ರಾಣಿಯ ಬಗ್ಗೆ ಪಠ್ಯ ಸೇರ್ಪಡೆಯಾಗಿದೆ.
  • ಏಣಗಿ ಬಾಳಪ್ಪನವರ ಜೀವನ ಪರಿಚಯವನ್ನ ಮರು ಮರು ಸೇರ್ಪಡೆ ಮಾಡಿದ್ದೇವೆ.
  • ವಿವೇಕಾನಂದರ ಜನ್ಮದಿನದ ಕುರಿತ ಪಠ್ಯ ಸೇರ್ಪಡೆ ಆಗಿದೆ. ಎಸ್ ಎಲ್ ಭೈರಪ್ಪ ಬರೆದ ಯಾವುದೇ ಪಠ್ಯ ಪುಸ್ತಕ ಇರಲಿಲ್ಲ.
  • ೯ನೇ ತರಗತಿಯ ಪಠ್ಯದಲ್ಲಿ ನಾನು ಕಂಡಂತೆ ಬಿಜಿಎಲ್ ಸ್ವಾಮಿ ಎಂಬ ಬರಹವನ್ನ ಸೇರಿಸಿದ್ದೇವೆ.  ಸನಾತನ ಧರ್ಮ ಪಾಠವನ್ನ ೮ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಸೇರಿಸಿದ್ದೇವೆ.
  • ಮಂಜೇಶ್ವರ್ ಗೋವಿಂದ ಪೈ ಬರಹ ಮರು ಸೇರ್ಪಡೆ, ಪಂಜೆ ಮಂಗೇಶರಾಯರ ಸೀಗಡಿ ಯಾಕೆ ಒಣಗಲಿಲ್ಲ ಪಠ್ಯ ಸೇರ್ಪಡೆ.

ಬರಗೂರು ಸಮಿತಿಯವರು ಮೊಘಲರು, ದೆಹಲಿ ಸುಲ್ತಾನರ ಬಗ್ಗೆ ವಿಷಯ ಹೆಚ್ಚಿತ್ತು. ನಮ್ಮ‌ ನೆಲದ ರಾಜರ ಪರಿಚಯ ಹಿಂದಿನ ಪಠ್ಯಪುಸ್ತಕಗಳಲ್ಲಿ ಇರಲಿಲ್ಲ.  ಕ್ರೈಸ್ತ,ಇಸ್ಲಾಂ ಧರ್ಮವನ್ನ ಪಾಶ್ಚಾತ್ಯ ರಿಲಿಜಿನ್ ಗಳನ್ನ ಬದಲಾಯಿಸಿ ಯಹೂದಿ, ಪಾರ್ಸಿ,ಧರ್ಮಗಳ ವಿಷಯಗಳನ್ನ ಸೇರಿಸಿದ್ದೇವೆ ಎಂದು ಆರ್ ಅಶೋಕ್ ತಿಳಿಸಿದರು.

ಭಗತ್ ಸಿಂಗ್, ನಾರಾಯಣ ಗುರು ಪಾಠ ತೆಗೆದು ಹಾಕಿದ್ದಾರೆ ಎಂಬ ಸುಳ್ಳು ಸುದ್ದಿ ಹರಡಿಸಿದರು. ಆದರೆ ನಮ್ಮ ಸರ್ಕಾರ ತೆಗೆದು ಹಾಕಿಲ್ಲ. ಸಿದ್ದರಾಮಯ್ಯ ಕಾಲದಲ್ಲಿ ಸಿಂಧೂ ಸಂಸ್ಕೃತಿ ಕುರಿತ ಪಾಠ, ನಿಟ್ಟೂರು ಶ್ರೀನಿವಾಸ ರಾಯರ ಪಾಠ ತೆಗೆದು ಹಾಕಲಾಯಿತು. ನಮ್ಮ‌ ಸರ್ಕಾರ ಪೋರ್ಚುಗೀಸರ ವಿರುದ್ದ ಹೋರಾಡಿದ ಕನ್ನಡದ ರಾಣಿ ಚನ್ನಬೈರಾದೇವಿ ಪಾಠ ಸೇರಿಸಿದ್ದೇವೆ.  ನಮ್ಮ ಸರ್ಕಾರ ವಿವೇಕಾನಂದರ ಕುರಿತ ಪಾಠ ಸೇರಿಸಿದೆ ಎಂದು ಸಮರ್ಥಿಸಿಕೊಂಡರು.