ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರಮನೆ ನಗರದ ವಾರ್ಡ್ ನಲ್ಲಿ ಸ್ಥಳೀಯ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಶನಿವಾರ ಪಾದಯಾತ್ರೆ ನಡೆಸಿ, ಜನರ ಅಹವಾಲು ಆಲಿಸಿದರು.

ಬೆಳಿಗ್ಗೆ 8 ಗಂಟೆಗೇ ಪಾದಯಾತ್ರೆ ಹೊರಟ ಅವರು ಸ್ಥಳೀಯರ ಸಮಸ್ಯೆಗಳಿಗೆ ಕಿವಿಯಾದರು.
ಯೋಗಕ್ಷೇಮ ವಿಚಾರಿಸುತ್ತಲೇ ಸ್ಥಳೀಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿದರು. ಸ್ವಚ್ಛತೆಗೆ ಆದ್ಯತೆ ನೀಡಬೇಕೆನ್ನುವ ಸೂಚನೆಯನ್ನೂ ಅಧಿಕಾರಿಗಳಿಗೆ ನೀಡಿದರು. ಚಿಕ್ಕಮಾರನಹಳ್ಳಿಯಲ್ಲಿ ಪಾದಯಾತ್ರೆ ನಡೆಸುವಾಗ ಸೈಕಲ್ ನಲ್ಲಿ ಮಾರಾಟ ಮಾಡುತ್ತಿದ್ದ ಚಹಾವನ್ನು ಸ್ಥಳೀಯ ಜನರ ಜತೆ ಸೇವಿಸಿದರು.
ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳಾದ ಸುಷ್ಮಾ, ರೇಖಾ, ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಘು, ಜಲಮಂಡಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶೇಖ್ , ಪಾಲಿಕೆ ಮಾಜಿ ಸದಸ್ಯೆ ಸುಮಂಗಲಿ ಕೇಶವ, ವಾರ್ಡ್ ಬಿಜೆಪಿ ಅಧ್ಯಕ್ಷ ಪ್ರೇಮ್, ಭೀಮಣ್ಣ ಮುಂತಾದವರು ಇದ್ದರು.