ಬೆಂಗಳೂರು: ಗಡಿಗಳಲ್ಲಿ ಗಾಳಿ, ಮಳೆ, ಚಳಿ ಎನ್ನದೆ ದೇಶದ ಸಾರ್ವಭೌಮತೆ ಹಾಗೂ ನಾಗರಿಕರ ಆಸ್ತಿ ಪಾಸ್ತಿ, ಪ್ರಾಣ ರಕ್ಷಣೆಗೆ ತಮ್ಮ ಜೀವವನ್ನೇ ತ್ಯಾಗ ಮಾಡುವ ಸೈನಿಕರ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರ ಪುನರ್ವಸತಿ ಹಾಗೂ ಅಭಿವೃದ್ದಿಗೆ ಶ್ರಮಿಸುವುದು ಎಲ್ಲ ನಾಗರಿಕರ ಕರ್ತವ್ಯವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ರಾಜಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಶಸ್ತ್ರ ಪಡೆಗಳ ದಿನಾಚರಣೆ ಸಮಾರಂಭದಲ್ಲಿ ಮಾಜಿ ಸೈನಿಕರು ಹಾಗೂ ಅವರ ಕುಟುಂಬ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.ಸಶಸ್ತ್ರ ಪಡೆಗಳ ಯೋಧರು ಗಡಿಗಳಲ್ಲಿ ಅನನ್ಯ ಸೇವೆ ಮಾಡುತ್ತಾ ಅಗತ್ಯ ಸಂದರ್ಭದಲ್ಲಿ ದೇಶದ ಆಂತರಿಕ ಭದ್ರತೆ ಹಾಗೂ ನೈಸರ್ಗಿಕ ವಿಕೋಪ ಸಂದರ್ಭ ಗಳಲ್ಲಿಯೂ ನಾಗರಿಕರ ರಕ್ಷಣೆಗೆ ಧಾವಿಸುತ್ತಾರೆ ಎಂದರು.ಕರ್ನಾಟಕ ಸರ್ಕಾರವು ಯೋಧರ ಹಾಗೂ ಅವರ ಕುಟುಂಬ ಸದಸ್ಯರ ನೆರವಿಗೆ ಯಾವಾಗಲೂ ಸಿದ್ಧವಿದೆ ಎಂದು ಭರವಸೆ ನೀಡಿದರು.
ಸಚಿವರು ಹಾಗೂ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ದೇಶದ ರಕ್ಷಣಾ ಕಾರ್ಯದಲ್ಲಿ ವೀರ ಮರಣ ಹೊಂದಿದ ಕುಟುಂಬದ ಸದಸ್ಯರಿಗೆ ಪರಿಹಾರದ ಚೆಕ್ಕನ್ನು ವಿತರಿಸಿದರು.ಜತೆಗೆ ಆರ್ಮ್ಸ್ ಫ್ಲ್ಯಾಗ್ ಫಂಡ್ ಗಾಗಿ ತಮ್ಮ ಕಾಣಿಕೆ ನೀಡಿದರು. ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಹಾಗೂ ಸಚಿವರು, ಫ್ಲ್ಯಾಗ್ ಡೇ ಫಂಡ್ ಗಾಗಿ ಅತ್ಯಂತ ಹೆಚ್ಚು ಕಾಣಿಕೆ ಸಂಗ್ರಹಿಸಿದ ವರಿಗೆ ಪ್ರೋತ್ಸಾಹಕ ಪಾರಿತೋಷಕ ವನ್ನು ವಿತರಿಸಿದರು.