ವಿಭಿನ್ನ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಹಾಡಿ ನಲಿಯುತ್ತಿರುವ ಚಿಣ್ಣರು
ಆರ್.ಎಸ್.ಆಕಾಶ್
ಮೈಸೂರು: ಅರಮನೆಯ ದಸರಾ ಅನೆಗಳು ತಂಗಿರುವ ಜಾಗದ ಪಕ್ಕದಲ್ಲಿ ಈಗ ಹೊಸಕಳೆ ಮೂಡಿದೆ. ಅಲ್ಲೇ ಇರುವ ಕೊಠಡಿಯಿಂದ ಅ ಆ ಇ ಈ ಎನ್ನುವ ಸ್ವರ ನಿನಾದ ಹೊರಡುತ್ತಿದೆ. ಇದರೊಂದಿಗೆ ಜಕ್ಕನಕ್ಕ ಜಕ…ಎನ್ನುವ ದೇಸಿ ನೃತ್ಯವೂ ಮುದಗೊಳಿಸುತ್ತದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಾವುತರ ಮಕ್ಕಳಿಗೆ ಅರಮನೆ ಆವರಣದಲ್ಲಿ ತೆರೆದಿರುವ ತಾತ್ಕಾಲಿಕ ಶಾಲೆಯಲ್ಲಿ ೨೦ ಮಕ್ಕಳು ವಿಭಿನ್ನ ಚಟುವಟಿಕೆಗಳ ಮೂಲಕ ಓದು-ಬರಹ ಕಲಿಯುತ್ತಿದ್ದಾರೆ.
೧ರಿಂದ ೮ನೇ ತರಗತಿ ಮಕ್ಕಳು ಇಲ್ಲಿ ಓದುತ್ತಿದ್ದು, ೫ ಜನ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ವಿಶೇಷ ಕಲಿಕಾ ಸಾಮಾಗ್ರಿಗಳು, ಪಠ್ಯ ಪುಸ್ತಕಗಳನ್ನು ನೀಡಲಾಗಿದೆ. ಜತೆಗೆ ಮಧ್ಯಾಹ್ನ ಬಿಸಿ ಊಟ, ಮೊಟ್ಟೆಯನ್ನೂ ನೀಡಲಾಗುತ್ತಿದೆ. ಗ್ರಂಥಾಲಯ ಇಲಾಖೆಯಿಂದ ಮಕ್ಕಳಿಗೆ ಕಥೆ ಪುಸ್ತಕ, ಚಂಪಕ, ದಿನಪತ್ರಿಕೆಗಳು ಮುಂತಾದ ೧೮೭ಕ್ಕೂ ಹೆಚ್ಚು ಪುಸ್ತಕಗಳನ್ನು ನೀಡಲಾಗಿದೆ.
ತರಗತಿ ತುಂಬಾ ಬಣ್ಣ ಬಣ್ಣಗಳ ಪೇಪರ್ಗಳಿಂದ ಅಲಂಕಾರಗೊಂಡಿದ್ದು, ಗೋಡೆಯ ಮೇಲೆ ಭಿತ್ತಿಚಿತ್ರಗಳು, ಪಾಠಕ್ಕೆ ಸಂಬಂಧಿಸಿದ ಚಾರ್ಟ್ಗಳು ತೂಗಾಡುತ್ತಿವೆ. ಮಕ್ಕಳು ಆಸಕ್ತಿಯಿಂದ ಪಾಠವನ್ನು ಕೇಳಿಸಿಕೊಳ್ಳುತ್ತಿದ್ದಾರೆ. ಶಿಕ್ಷಕರು ಅಷ್ಟೇ ಆಸಕ್ತಿಯಿಂದ ಮಕ್ಕಳಿಗೆ ಪಾಠವನ್ನು ಹೇಳಿಕೊಡುತ್ತಿದ್ದಾರೆ.
ಮಕ್ಕಳು ಸಂಗೀತ ಹಾಗೂ ನೃತ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಸಂಗೀತದ ಮೂಲಕ ಪಾಠ ಕಲಿಯಲು ಮುಂದಾಗುತ್ತಿದ್ದಾರೆ. ಮಕ್ಕಳು ತಮ್ಮ ಹಾಡಿಯಲ್ಲಿ ಹಾಡುವ ಹಾಡುಗಳನ್ನು ಹಾಡುತ್ತ ಉತ್ಸಾಹದಿಂದ ಪಾಠದ ಕಡೆ ಗಮನಹರಿಸುತ್ತಾರೆ. ಜತೆಗೆ ಕಲೆ, ಹ್ಯಾಂಡಿಕ್ರಾಫ್ಟ್, ರಂಗೋಲಿ, ಚಿತ್ರಕಲೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಶಿಕ್ಷಕರು ಮೆಚ್ಚುಗೆಯ ನುಡಿಗಳನ್ನಾಡುತ್ತಾರೆ.
ದಸರಾ ಉತ್ಸವ ಮುಗಿಯುವವರೆಗೂ ಮಕ್ಕಳಿಗೆ ಶಿಕ್ಷಣ ನೀಡಲಾಗುವುದು. ಈಗಾಗಲೇ ೨೦ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿವೆ.
– ರಾಮರಾಧ್ಯ, ಬಿಇಓ, ಮೈಸೂರು ದಕ್ಷಿಣ
ಮಕ್ಕಳಿಗೆ ಪಾಠಕ್ಕಿಂತ ಸಂಗೀತ ಹಾಗೂ ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ಇದೆ. ಸಂಗೀತ ಅಥವಾ ಚಿತ್ರಕಲೆ ಮೂಲಕ ಪಾಠ ಹೇಳಿಕೊಟ್ಟರೆ ಮಾತ್ರ ಕೇಳುತ್ತಾರೆ. ಈ ಮಕ್ಕಳಲ್ಲಿ ಗ್ರಹಿಕೆ ಶಕ್ತಿ ಹೆಚ್ಚಿದ್ದು ಕಲಿಕೆ ಕುರಿತು ಹೇಳಿದರೆ ಅದನ್ನು ಆಸಕ್ತಿ ವಹಿಸಿ ಮಾಡುತ್ತಾರೆ.
– ಸುಬ್ಬಲಕ್ಷ್ಮೀ, ಚಿತ್ರಕಲಾ ಶಿಕ್ಷಕಿ.
ಸರ್ಕಾರದಿಂದ ಮಾತ್ರವಲ್ಲದೆ ಅನೇಕ ಸಂಘ ಸಂಸ್ಥೆಗಳೂ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಿವೆ. ಮಕ್ಕಳ ಓದಿಗಾಗಿ ಬೇಕಾದ ಸಾಮಾಗ್ರಿಗಳನ್ನು ಕೊಡುಗೆಯಾಗಿದೆ ನೀಡಿದ್ದಾರೆ.
– ನೂರ್ ಫಾತಿಮಾ, ಶಿಕ್ಷಕಿ.