Massive protest by farmers against Bhadra Nala cutting project
ಬೆಂಗಳೂರು : ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಭದ್ರಾ ಜಲಾಶಯದ ಬಲದಂಡೆ ನಾಲೆಯನ್ನು ಸೀಳಿ ಪಕ್ಕದ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಅವೈಜ್ಞಾನಿಕ ಕಾಮಗಾರಿಯನ್ನು ವಿರೋಧಿಸಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ರೈತ ಮುಖಂಡರುಗಳು ಬೆಂಗಳೂರಿನಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಮಾಜಿ ಶಾಸಕ ಬಸವರಾಜ ನಾಯಕ್, ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜು, ಬಿ.ಜಿ. ಅಜಯ್‌ಕುಮಾರ್, ಚಂದ್ರಶೇಖರ ಪೂಜಾರಿ ಸೇರಿದಂತೆ ಹಲವು ರೈತ ಮುಖಂಡರುಗಳು ಭಾಗಿಯಾಗಿ ಭದ್ರಾ ಬಲದಂಡೆ ಕಾಲುವೆಯನ್ನು ಸೀಳಿ ನಡೆಸುತ್ತಿರುವ ಕಾಮಗಾರಿಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಭದ್ರಾ ಬಲದಂಡೆ ನಾಲೆ ಸೀಳಿ ನಡೆಸುತ್ತಿರುವ ಕಾಮಗಾರಿಯನ್ನು ವಿರೋಧಿಸಿ ದಾವಣಗೆರೆ ಜಿಲ್ಲಾ ರೈತ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ನಗರದ ಸ್ವಾತಂತ್ರ್ಯಉದ್ಯಾನನವದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಲಾಯಿತು.
ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಜಿಲ್ಲೆಯಿಂದ ಆಗಮಿಸಿದ್ದ ಸಾವಿರಾರು ರೈತರು ಸಿ.ಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಿವಾಸಿಗಳಿಗೆ ಮುತ್ತಿಗೆ ಹಾಕಲು ಯತ್ನಿಸಿದರಾದರೂ ಮಾರ್ಗಮಧ್ಯದಲ್ಲೇ ಪೊಲೀಸರು ತಡೆಹಿಡಿದು ವಶಕ್ಕೆ ಪಡೆದರು. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿ ನುಗ್ಗಲು ಯತ್ನಿಸಿದರು. ಈ ಹಂತದಲ್ಲಿ ಪೊಲೀಸರು ಹಾಗೂ ಪ್ರತಿಭಟನಾನಿರತ ರೈತರ ನಡುವೆ ಮಾತಿವ ಚಕಮಕಿ ನಡೆಯಿತು. ಭದ್ರಾ ನೀರು ನಮ್ಮ ಹಕ್ಕು, ಅವೈಜ್ಞಾನಿಕ ಕಾಮಗಾರಿ ಸ್ಥಗಿತಗೊಳಿಸಿ ಎಂದು ಘೋಷಣೆ ಕೂಗಿದ ಪ್ರತಿಭಟನಕಾರರು ಧರಣಿ ಕುಳಿತು ವಾಹನ ಸಂಚಾರ ತಡೆದರು. ಬೇಡಿಕೆ ಈಡೇರಿಸುವ ಲಿಖಿತ ಭರವಸೆ ನೀಡುವಂತೆ ಪಟ್ಟು ಹಿಡಿದರು.
ಭದ್ರಾ ಜಲಾಶಯದ ಬಲದಂಡೆ ನಾಲೆಯನ್ನು ಸೀಳಿ ಸರ್ಕಾರ ದಾವಣಗೆರೆ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡುತ್ತಿದೆ. ಈ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದನ್ನು ಕೈ ಬಿಡುವಂತೆ ಆಗ್ರಹಿಸಿ ಹಲವು ಬಾರಿ ದಾವಣಗೆರೆ, ಶಿವಮೊಗ್ಗ ಭದ್ರಾ ಜಲಾಶಯಗಳಲ್ಲಿ ನಾವು ಪ್ರತಿಭಟನೆಗಳನ್ನು ಮಾಡಿದ್ದರೂ ಸರ್ಕಾರ ನಮ್ಮ ಸ್ಪಂದಿಸಿಲ್ಲ.ಈ ಕೂಡಲೇ ಈ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಿವಾಸಗಳ ಮುತ್ತಿಗೆಗೆ ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಮಾಜಿ ಸಚಿವ ರೇಣುಚಾಕಾರ್ಯ ಅವರು ರೈತ ಮುಖಂಡರು ಹಾಗೂ ನೂರಾರು ಮಂದಿ ರೈತರೊಂದಿಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ನಡೆಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕುಡಿಯುವ ನೀರಿಗೆ ವಿರೋಧವಿಲ್ಲ: ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು, ಕುಡಿಯುವ ನೀರು ಯೋಜನೆಗೆ ನಮ್ಮದು ಯಾವುದೇ ವಿರೋಧ ಇಲ್ಲ. ಆದರೆ ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ ಮಾಡುವುದಕ್ಕೆ ವಿರೋಧವಿದೆ. ಹಗಲು ರಾತ್ರಿ ಕಾಮಗಾರಿ ನಡೀತಿದೆ, ತಕ್ಷಣ ಕಾಮಗಾರಿ ನಿಲ್ಲಿಸಲು ಈ ವೇಳೆ ಆಗ್ರಹಿಸಿದರು.
ಭದ್ರಾ ಬಲದಂಡೆ ಸೀಳುವ ಕಾಮಗಾರಿಯನ್ನು ವಿರೋಧಿಸಿ ಬೆಳಿಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತಾದರೂ ಪೊಲೀಸರು ನಮ್ಮ ರೈತರು ಮತ್ತು ಮುಖಂಡರುಗಳನ್ನು ಟೋಲ್‌ಗಳಲ್ಲೇ ತಡೆದು ಬಂಧಿಸುವ ಪ್ರಯತ್ನ ನಡೆಸಿದರು. ನನ್ನನ್ನೂ ನನ್ನ ನಿವಾಸದಲ್ಲೇ ಬಂಧಿಸುವ ಪ್ರಯತ್ನ ನಡೆಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಭದ್ರಾ ಬಲದಂಡೆ ನಾಲೆ ಸೀಳಿ ರೈತರಿಗೆ ಮರಣ ಶಾಸನ ಬರೆಯಲು ಹೊರಟಿದೆ. ನಮ್ಮ ಭಾಗದ ರೈತರಿಗೆ ಅನ್ಯಾಯ ಮಾಡಲು ಹೊರಟಿದೆ. ಈಗಾಗಲೇ ಹಲವು ಹಂತದ ಹೋರಾಟಗಳನ್ನು ಮಾಡಿದರೂ, ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ರೈತರ ಕಣ್ಣಿಗೆ ಮಣ್ಣೆರಚಿ ಪೊಲೀಸ್ ಭದ್ರತೆಯಲ್ಲಿ ಹಗಲು? ರಾತ್ರಿ ಕಾಮಗಾರಿ ನಡೆಸಲಾಗುತ್ತಿದೆ. ಇದು ಪ್ರಜಾತಂತ್ರದ ಕಗ್ಗೊಲೆ ಅಲ್ಲವಾ ಎಂದು ಪ್ರಶ್ನಿಸಿದರು.
ಭದ್ರಾ ಬಲದಂಡೆ ಅಚ್ಚುಕಟ್ಟು ಪ್ರದೇಶದ ರೈತರಿಗಾಗಿ ಹೋರಾಟ ನಡೆಸಲಾಗುತ್ತಿದೆಯೋ ಹೊರತು, ಸ್ವಾರ್ಥಕ್ಕಾಗಿ ಅಲ್ಲ. ಪ್ರತೀ ವರ್ಷ ಜುಲೈ ೧೦ಕ್ಕೆ ನಾಲೆಗೆ ನೀರು ಬಿಡಲಾಗುತ್ತದೆ. ಆದರೆ, ಈ ವರ್ಷ ಇನ್ನೂ ಬಿಟ್ಟಿಲ್ಲ. ವರುಣನ ಕೃಪೆಯಿಂದ ಜಲಾಶಯದಲ್ಲಿ ೧೭೪ ಅಡಿ ನೀರು ಸಂಗ್ರಹವಾಗಿದೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಲ್ಲ’ ಎಂದರು.
‘ಭದ್ರಾ ಜಲಾಶಯ ದಾವಣಗೆರೆ ಜಿಲ್ಲೆಯ ಜೀವನಾಡಿ. ಜಿಲ್ಲೆಯ ರೈತರ ಬದುಕನ್ನೇ ಮುಳುಗಿಸುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಪ್ರತಿ ವರ್ಷದಂತೆ ಜುಲೈ ಮೊದಲ ವಾರದಲ್ಲಿ ನೀರು ಹರಿಸಬೇಕಿತ್ತು. ಆದರೆ, ನಾಲೆಯನ್ನು ಸೀಳಿರುವುದರಿಂದ ನೀರು ಹರಿಸಿಲ್ಲ. ರೈತರು ಸಸಿ ಮಡಿ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗದ ರೈತರ ಹೊಲಗಳಿಗೆ ನೀರಿನ ಲಭ್ಯತೆ ಕಡಿಮೆ ಆಗಲಿದೆ. ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇಲ್ಲ’ ಎಂದು ಆರೋಪಿಸಿದರು.
‘ಕುರ್ಚಿ ಕದನದ ನಡುವೆ ರೈತರ ಸಮಸ್ಯೆ ಸರ್ಕಾರಕ್ಕೆ ಕಾಣುತ್ತಿಲ್ಲ. ಜಲಾಶಯದ ೭೦ ಅಡಿ ಆಳದಲ್ಲಿ ೪ ಅಡಿ ವ್ಯಾಸದ ಪೈಪ್ ಕೂರಿಸಲು ಸಿದ್ಧತೆ ನಡೆದಿದೆ. ಈಗಾಗಲೇ ಇಲ್ಲಿ ಗೇಟ್ ಕೂರಿಸಲು ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ. ಇದರಿಂದ, ಜಲಾಶಯ ಅರ್ಧದಷ್ಟು ಖಾಲಿ ಆಗಲಿದೆ. ಮುಂಬರುವ ದಿನದಲ್ಲಿ ಸಮರ್ಪಕ ಮಳೆ ಆಗದೇ ಇದ್ದರೆ, ರೈತರ ಪಾಡೇನು’ ಎಂದು ಪ್ರಶ್ನಿಸಿದ ಪ್ರತಿಭಟನಕಾರರು, ರೈತರ ಹೊಟ್ಟೆ ಮೇಲೆ ಹೊಡೆಯಲು ಸರ್ಕಾರ ಸಂಚು ರೂಪಿಸಿದೆ ಎಂದು ದೂರಿದರು.
೧೦೦ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದರು. ದಾವಣಗೆರೆ ಜಿಲ್ಲೆಯ ಸುತ್ತಮುತ್ತಲಿನ ೧೫೦೦ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…
ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…