ಮಂಡ್ಯ : ಮಹತ್ವಕಾಂಕ್ಷೆ ಯೋಜನೆಯಾದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್.ಟಿ.ಇ) ಸಂಪೂರ್ಣ ಹಳ್ಳ ಹಿಡಿಯುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಆರ್ಟಿಇಯಡಿ ಶಾಲೆಗೆ ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ 300 ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆಶ್ಚರ್ಯದ ಸಂಗತಿ ಎಂದರೆ 300 ಸೀಟ್ಗೆ ಕೇವಲ 75 ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿದ್ದು, 74 ವಿದ್ಯಾರ್ಥಿಗಳಿಗೆ ಸೀಟುಗಳನ್ನು ಲಾಟರಿ ಮೂಲಕ ಹಂಚಿಕೆ ಮಾಡಲಾಗಿದೆ. ಈವರೆಗೂ 13 ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ.
ಆರ್ಟಿಇಯಡಿ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಶೇ.25 ರಷ್ಟು ಸೀಟುಗಳನ್ನು ಕಾಯ್ದಿರಿಸಲಾಗುವುದು. ಆರ್ಟಿಇಯಡಿ ಆಯ್ಕೆಯಾದ ವಿದ್ಯಾರ್ಥಿಗಳಿ ಸರ್ಕಾರವೇ ಶುಲ್ಕವನ್ನು ಭರಸಲಿದೆ.
ಜಿಲ್ಲೆಯಲ್ಲಿ ಒಟ್ಟು 48 ಅನುದಾನಿತ ಶಾಲೆಗಳ ಆರ್ಟಿಇ ವ್ಯಾಪ್ತಿಗೆ ಒಳಪಡಲಿದ್ದು, ಈ ಪೈಕಿ ಮೂರು ಖಾಸಗಿ ಶಾಲೆಗಳು ಸೇರಲಿವೆ.
ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 4, ಮದ್ದೂರು 8, ಮಳವಳ್ಳಿ 4, ಮಂಡ್ಯ ಉತ್ತರ ವಲಯ 5, ಮಂಡ್ಯ ದಕ್ಷಿಣ ವಲಯ 12, ನಾಗಮಂಗಲ 2. ಪಾಂಡವಪುರ 8 ಹಾಗೂ ಶ್ರೀರಂಗಪಟ್ಟಣ 5 ಶಾಲೆಗಳು ಸೇರಿ ಒಟ್ಟು 48 ಶಾಲೆಗಳನ್ನು ಆರ್ಟಿಇಯಡಿ ಪ್ರವೇಶಾತಿಗೆ ಗುರುತಿಸಲಾಗಿದೆ.
ಸರ್ಕಾರ ಇಷ್ಟೆಲ್ಲ ಸವಲತ್ತುಗಳನ್ನು ನೀಡುತ್ತಿದ್ದರೂ ಮಕ್ಕಳು ಆರ್ಟಿಇಯಡಿ ಶಾಲೆಗೆ ದಾಖಲಾಗಲು ಏಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಹಿತಿ ಪಡೆದು ಪರಿಶೀಲಿಸಿದಾಗ ಸರ್ಕಾರ ತೆಗೆದುಕೊಂಡ ಕೆಲ ನಿರ್ಧಾರಗಳೇ ಆರ್ಟಿಇ ಹಳ್ಳ ಹಿಡಿಯಲು ಕಾರಣ ಎಂಬ ಸತ್ಯಗಳು ಗೋಚರಿಸುತ್ತವೆ.
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಯಡಿ ಖಾಸಗಿ ಶಾಲೆಗಳನ್ನು ಕೈ ಬಿಟ್ಟಿರುವುದೇ ಪೋಷಕರು ತಮ್ಮ ಮಕ್ಕಳನ್ನು ಆರ್ಟಿಇಯಡಿ ಶಾಲೆಗೆ ಪ್ರವೇಶಾತಿ ಕಲ್ಪಿಸಲು ಹಿಂದೇಟು ಹಾಕಲು ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಅನುದಾನಿತ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಅವಕಾಶವೇ ಇರುವುದಿಲ್ಲ. ಆರ್ಟಿಇ ಇಲ್ಲಿ ಅನ್ವಯಿಸುವುದಿಲ್ಲ. ಹಾಗಾದರೆ ಆರ್ಟಿಇಯಡಿ ಅನುದಾನಿತ ಶಾಲೆಗೆ ನೀಡಿ ಏನು ಪ್ರಯೋಜನ ಎನ್ನುವುದು ಪೋಷಕರ ಆಕ್ರೋಶವಾಗಿದೆ.
2010ರಲ್ಲಿ ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೂ ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿ ಸಿಗಬೇಕೆಂಬ ನಿಟ್ಟಿನಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತ್ತು. ಪ್ರಾರಂಭದಲ್ಲಿ ತುಂಬಾ ಅಚ್ಚುಕಟ್ಟಾಗಿ ನಡೆದುಕೊಂಡು ಬಂತು. ಈ ಮೊದಲು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಸೀಟು ಪಡೆದುಕೊಳ್ಳಲು ಪೋಷಕರು ಇನ್ನಿಲ್ಲದ ಹರಸಾಹಸ ಪಡುತ್ತಿದ್ದರು. ಆದರೆ, ಇತ್ತೀಚೆಗೆ ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ರಾಜ್ಯ ಸರ್ಕಾರಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಮಾಡಿ ಕೂರಿಸಿವೆ.
ಎಲ್ಕೆಜಿ ಹಾಗೂ 1ನೇ ತರಗತಿಗೆ ಪ್ರವೇಶಾತಿ ಪಡೆಯಲು ಆರ್ಟಿಇಯಡಿ ಅವಕಾಶ ಕಲ್ಪಿಸಿದೆ. ಎಲ್ಕೆಜಿ. ಪ್ರವೇಶಾತಿ ಪಡೆಯುವ ಪ್ರತಿ ಮಗುವಿಗೆ ಸರ್ಕಾರವೇ ಗರಿಷ್ಠ 8 ಸಾವಿರ ಹಾಗೂ 1ನೇ ತರಗತಿ ಪ್ರವೇಶಾತಿ ಪಡೆಯುವ ಪ್ರತಿ ಮಗುವಿಗೆ 16 ಸಾವಿರ ಶುಲ್ಕವನ್ನು ಪಾವತಿಸುತ್ತದೆ.
ಆರ್ಟಿಇ ಕಾಯ್ದೆಯಡಿ ಈ ಮೊದಲು ಮಂಡ್ಯ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಟಿಇಯಡಿ ಸೇರಿಕೊಂಡಿದ್ದವು. ಆದರೆ, ಇತ್ತೀಚೆಗೆ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದೆ. ಅನುದಾನಿತ ಶಾಲೆಗಳಿಗೆ ಮಾತ್ರ ಆರ್ಟಿಇಯಡಿ ಪ್ರವೇಶಾತಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಅನುಮತಿ ನೀಡಿರುವ ಅನುದಾನಿತ ಶಾಲೆಗಳ ಪೈಕಿ ಕೆಲ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಇಲ್ಲದಿರುವುದು ತಮ್ಮ ಮಕ್ಕಳನ್ನು ದಾಖಲು ಮಾಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ಪ್ರತಿ ಪೋಷಕರಿಗೂ ತಮ್ಮ ಮಗುವಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕೆಂಬ ಹೆಬ್ಬಯಕ್ಕೆ ಇರುತ್ತದೆ. ಆರ್.ಟಿಇಯಡಿ ಅನುಮತಿ ನೀಡಿರುವ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಇಲ್ಲದಿರುವುದು ಪೋಷಕರನ್ನು ಗೊಂದಲಕ್ಕೀಡು ಮಾಡಿದ್ದು, ಆರ್ಟಿಇ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬಂದಂತಿದೆ.
ವರ್ಷದಿಂದ ವರ್ಷಕ್ಕೆ ಮಹತ್ವಕಾಂಕ್ಷೆ ಯೋಜನೆಯಾದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಹಳ್ಳ ಹಿಡಿಯುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ, ಮುಂದಿನ ವರ್ಷಗಳಲ್ಲಿ ಆರ್.ಟಿ.ಇ. ಕಾಯ್ದೆ ರದ್ದಾದರೂ ಪೋಷಕರು ಆಶ್ಚರ್ಯ ಪಡುವಂತಿಲ್ಲ.
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳಲ್ಲೂ ಆರ್ಟಿಇ ಯಡಿ ಪ್ರವೇಶಾತಿಗೆ ಅವಕಾಶ ಕಲ್ಪಿಸಿಕೊಡಲು ಮುಂದಾಗುವುದೇ ಎಂಬುದನ್ನು ನೋಡಬೇಕು.
ವಿದ್ಯಾರ್ಥಿಗಳು ವಾಸಿಸುವ ವಾರ್ಡ್ ಮತ್ತು ಜನವಸತಿ ಸ್ಥಳಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿರುವುದರಿಂದ ಖಾಸಗಿ ಶಾಲೆಗಳಿಗೆ ಶೇ.25ರಷ್ಟು ಆರ್ಟಿಇ ಸೀಟನ್ನು ನೀಡುತ್ತಿಲ್ಲ. ಆರ್ಟಿಇ 12(1) ಬಿ ಯಡಿ ಅನುದಾನಿತ ಶಾಲೆಗಳಿಗೆ ಶೇ.25 ರಷ್ಟು ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಂಡ್ಯ ಶಿಕ್ಷಣಾಧಿಕಾರಿಗಳಾದ ಬಿ.ಟಿ. ಚಂದ್ರಕಾಂತ್ ಹೇಳಿದ್ದಾರೆ.