ಎಷ್ಟು ಶೌಚಾಲಯ ಪರಿಶೀಲನೆ ನಡೆಸಿದ್ದೀರಿ? ಅಫಿಡೆವಿಟ್ ಸಲ್ಲಿಸಿ
ಬೆಂಗಳೂರು: ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿದ ನ್ಯಾಯಪೀಠ, ನಗರಸಭೆಯ ಎಷ್ಟು ಶೌಚಾಲಯ ಪರಿಶೀಲನೆ ನಡೆಸಿದ್ದೀರಿ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಪ್ರಮಾಣ ಪತ್ರ ಸಲ್ಲಿಸುವಂತೆ ನಿರ್ದೇಶನ ನೀಡಿತು.
ಅಲ್ಲದೆ, ಮಡಿಕೇರಿ ಟೌನ್ ಠಾಣಾ ಪೊಲೀಸರು ಮತ್ತು ದೂರುದಾರರಾದ ನಗರಸಭಾ ಅಧ್ಯಕ್ಷೆ ಅವರನ್ನು ಅಕ್ರಮವಾಗಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ ಆರೋಪ ಸಂಬಂಧ ಕಾಂಗ್ರೆಸ್ನ ೧೩ ಮುಖಂಡರ ವಿರುದ್ಧ ದಾಖಲಿಸಿದ್ದ ಎಫ್ಐಆರ್ಗೆ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಮಳೆಹಾನಿ ಪ್ರದೇಶಗಳ ಪರಿಶೀಲನೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿದ್ದ ವೇಳೆ ಸಾರ್ವಜನಿಕ ಶೌಚಾಲಯಗಳ ಪರಿಶೀಲನೆಗೆ ಮುಂದಾಗಿದ್ದ ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರನ್ನು ಕಾಂಗ್ರೆಸ್ ಸದಸ್ಯರು ತಡೆದಿದ್ದರು. ಈ ಸಂಬಂಧ ಮಡಿಕೇರಿ ಟೌನ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಈ ಸಂಬಂಧ ತಮ್ಮ ವಿರುದ್ಧ ಪೋಲೀಸರು ದಾಖಲಿಸಿರುವ ಎಫ್ಐಆರ್ ಹಾಗೂ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಚಂದ್ರಶೇಖರ್, ಎ.ಎಸ್. ಪೊನ್ನಣ್ಣ ಸೇರಿದಂತೆ ಕಾಂಗ್ರೆಸ್ನ ೧೩ ನಾಯಕರು ಉಚ್ಚ ನ್ಯಾಯಾಲಯಕ್ಕೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಪ್ರಕರಣ ಕುರಿತ ಅರ್ಜಿದಾರರ ವಿರುದ್ಧದ ಎಫ್ಐಆರ್ ಮತ್ತು ಮಡಿಕೇರಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ವಿಚಾರಣೆಗೆ ತಡೆಯಾಜ್ಞೆ ನೀಡಿತು.
ಪ್ರಕರಣವೇನು?
ನಗರಸಭೆ ಉಪಾಧ್ಯಕ್ಷರು, ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷರು ಜತೆಗೂಡಿ ಕಳೆದ ಆ.೧೮ರಂದು ಮಡಿಕೇರಿ ನಗರದ ಮೂರ್ನಾಡು ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಅಶುಚಿತ್ವದ ಬಗ್ಗೆ ವೀಕ್ಷಿಸಲು ತೆರಳುತ್ತಿದ್ದಾಗ ಜಿ.ಟಿ. ವೃತ್ತದ ಬಳಿ ಪೊಲೀಸರು ತಡೆದು ಮುಂದಕ್ಕೆ ತೆರಳದಂತೆ ಸೂಚಿಸಿದರು. ಕಾರಣ ಕೇಳಿದ್ದಕ್ಕೆ ಈ ರಸ್ತೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬರುತ್ತಿರುವ ಕಾರಣ ಸಂಚಾರ ತಡೆಹಿಡಿಯಲಾಗಿದೆ ಎಂದು ತಿಳಿಸಿದರು. ಅದೇ ವೇಳೆ ಮಂಗಳೂರು ರಸ್ತೆಯಿಂದ ಜಿ.ಟಿ. ವೃತ್ತದ ಕಡೆಗೆ ಮೆರವಣಿಗೆಯಲ್ಲಿ ಬಂದ ಅರ್ಜಿದಾರರು ತಮ್ಮನ್ನು ಕಂಡು ಅಕ್ರಮ ಕೂಟ ಕಟ್ಟಿಕೊಂಡು ಬಂದು ಹಲ್ಲೆ ಯತ್ನ ನಡೆಸಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದರು ಎಂದು ಆರೋಪಿಸಿ ಆ.೧೯ರಂದು ದೂರು ನೀಡಿದ್ದರು.