ಮಡಿಕೇರಿ: ಖದೀಮನೊಬ್ಬ ವೈದ್ಯರ ೭ ಬ್ಯಾಗ್ಗಳನ್ನು ಕಳವು ಮಾಡಿ, ಬ್ಯಾಗ್ನಲ್ಲಿದ್ದ ಕೀಯಿಂದ ದ್ವಿಚಕ್ರ ವಾಹನವನ್ನೂ ಕಳವು ಮಾಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಭಾನುವಾರ ಸಂಜೆ ೭ ಗಂಟೆಗೆ ಘಟನೆ ಆಸ್ಪತ್ರೆಯ ಸಿಬ್ಬಂದಿಯಂತೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ, ಸುಮಾರು ೧ ಗಂಟೆಗಳ ಕಾಲ ಆಸ್ಪತ್ರೆಯೊಳಗೆ ಓಡಾಡಿ ವೈದ್ಯರು ಬ್ಯಾಗ್ ಇಡುವುದನ್ನು ನೋಡಿದ್ದಾನೆ. ಕೊಠಡಿಯ ಸುತ್ತ ಮುತ್ತ ಓಡಾಡಿದ ಆರೋಪಿ, ಯಾರು ಇಲ್ಲದ ಸಮಯ ನೋಡಿಕೊಂಡು ಕೊಠಡಿಯಲ್ಲಿದ್ದ ಏಳು ಬ್ಯಾಗುಗಳನ್ನ ಎಗರಿಸಿದ್ದಾನೆ. ಬ್ಯಾಗ್ಗಳನ್ನು ತಡಕಾಡಿ ಅದರಲ್ಲಿದ್ದ ಎಟಿಎಂ ಹಾಗೂ ಗಾಡಿಗಳ ಕೀ ಎಗರಿಸಿದ ಭೂಪ, ಬ್ಯಾಗ್ನಲ್ಲಿ ಸಿಕ್ಕ ಕೀಯಿಂದ ವೈದ್ಯರೊಬ್ಬರ ದ್ವಿಚಕ್ರ ವಾಹನದಲ್ಲೇ ಪರಾರಿಯಾಗಿದ್ದಾನೆ.
ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸಮಯದಲ್ಲೂ ಕೂಡ ಈ ರೀತಿಯ ಕಳ್ಳತನ ಪ್ರಕರಣಗಳು ನಡೆದಿತ್ತು. ಇದೀಗ ಮತ್ತೆ ಕಳ್ಳತನ ಪ್ರಕರಣಗಳು ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸ್ ವೃತ್ತ ನಿರೀಕ್ಷಕ ಶೀನಿವಾಸ್, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾ ಆಸ್ಪತ್ರೆಗೆ ಮಡಿಕೇರಿ ಸೇರಿದಂತೆ ಜಿಲ್ಲೆಯ ಬೇರೆ ಬೇರೆ ಭಾಗದಿಂದ ಜನರು ಆಗಮಿಸುತ್ತಾರೆ. ಈ ಸಮಯದಲ್ಲಿ ಆಸ್ಪತ್ರೆಯ ಮುಂಭಾಗದಲ್ಲೆ ನೂರಾರು ವಾಹನಗಳನ್ನ ಕೂಡ ನಿಲ್ಲಿಸುತ್ತಾರೆ. ಕಳವು ಪ್ರಕರಣ ಹೆಚ್ಚುತ್ತಿರುವುದು ಆಸ್ಪತ್ರೆಗೆ ಆಗಮಿಸುವವರು ಆತಂಕಕ್ಕೊಳಗಾಗುವಂತೆ ಮಾಡಿದೆ.