ರಾಮನಗರ: ಸತತ ಮಳೆಯಿಂದ ಜಿಲ್ಲೆಯಲ್ಲಿ 178 ಮನೆಗಳಿಗೆ ಹಾನಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 1.14 ಕೋಟಿ ರೂಪಾಯಿ ಪರಿಹಾರ ವಿತರಿಸಲಾಗಿದೆ. ಜೊತೆಗೆ ಜಿಲ್ಲೆಯ 70 ಸಂತ್ರಸ್ತರಿಗೆ 15 ಲಕ್ಷ ರೂ. ಒದಗಿಸಲಾಗಿದೆ ಎಂದು ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಸೋಮವಾರವಿಡೀ ಜಿಲ್ಲೆಯ ಹಲವು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಬಳಿಕ ಅಧಿಕಾರಿಗಳ ಜತೆ ಇಲ್ಲಿ ಸಭೆ ನಡೆಸಿದರು.

ನಂತರ, ತುಂಬಿ ತುಳುಕುತ್ತಿರುವ ಮಾಯಸಂದ್ರ ಕೆರೆಗೆ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಅವರು ಮನೆ ಕಳೆದುಕೊಂಡಿರುವ ಯಲ್ಲಾಪುರ, ಮುತ್ತುಗದಹಳ್ಳಿ, ಕೆಂಚನಪಾಳ್ಯಗಳ ಒಟ್ಟು 7 ಮಂದಿಗೆ ಒಟ್ಟು 5 ಲಕ್ಷ ರೂ. ಪರಿಹಾರ ವಿತರಿಸಿದರು. ಈ ಪೈಕಿ ಮನೆ ವಿಪರೀತ ಹಾನಿಗೊಳಗಾಗಿರುವ ಮೂವರಿಗೆ ತಲಾ 95 ಸಾವಿರ ರೂ. ನೀಡಲಾಯಿತು.ಬಳಿಕ, ಈಡಿಗರ ಪಾಳ್ಯಕ್ಕೆ ಸಚಿವರು ತೆರಳಿ, ಉಕ್ಕಿ ಹರಿಯುತ್ತಿರುವ ಕಾಲುವೆಯನ್ನು ವೀಕ್ಷಿಸಿದರು.

ಆಗ ಊರಿನ ಜನರು, ಸರಿಯಾದ ಸೇತುವೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಆದಷ್ಟು ಬೇಗ ಸೇತುವೆ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿದರು. ಹುಳ್ಳೇನಹಳ್ಳಿಗೆ ಭೇಟಿ ಕೊಟ್ಟ ಅವರು, ಹಾನಿಗೀಡಾಗಿರುವ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡ ವೀಕ್ಷಿಸಿ, ತುರ್ತು ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಇಲ್ಲಿಂದ ಸಂಕೀಘಟ್ಟಕ್ಕೆ ತೆರಳಿದ ಸಚಿವರು, ಕೆರೆ ಕೋಡಿಯನ್ನು ವೀಕ್ಷಿಸಿ, ಬಾಗಿನ ಸಮರ್ಪಿಸಿದರು.
ತಿಪ್ಪಸಂದ್ರ ಹೋಬಳಿಯಲ್ಲಿ ಅಪಾರ ಮಳೆಯಿಂದ ಹಾನಿಗೀಡಾಗಿರುವ ಮನೆಗಳಿಗೆ ತೆರಳಿ, ಆಗಿರುವ ನಷ್ಟದ ಚಿತ್ರಣವನ್ನು ಕಣ್ಣಾರೆ ಕಂಡರು.