ಬಿಟ್ ಕಾಯಿನ್ ಪ್ರಕರಣದಲ್ಲಿ ಪ್ರಭಾವಿಗಳ ಮಕ್ಕಳಿರುವುದನ್ನು ಸಾಬೀತುಪಡಿಸಲಿ : ಶಾಸಕ ರಾಜೀವ್

ಬೆಂಗಳೂರು: ಡ್ರಗ್ಸ್ ಹಾಗೂ ಬಿಟ್ ಕಾಯಿನ್‌ನಲ್ಲಿ ಪ್ರಭಾವಿ ರಾಜಕಾರಣಿ ಮಕ್ಕಳಿದ್ದಾರೆಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಅವರ ಹೇಳಿಕೆ ಯಾರೂ ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆ ಆರೋಪವನ್ನು ಸಾಬೀತುಪಡಿಸಲು ಸಿದ್ದರಾಮಯ್ಯಗೆ ಸಾಧ್ಯವಿದೆಯೇ ಎಂದು ಕುಡುಚಿ ಶಾಸಕ‌ ರಾಜೀವ್ ಪ್ರಶ್ನಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಎಲ್ಲಾ ಪಕ್ಷದ ರಾಜಕಾರಣಿಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದರು. ತನಿಖಾ ಸಂಸ್ಥೆ ವರದಿ ಬಂದಿದೆ ಎಂದು ಹೇಳಿದ್ದೀರಿ. ಯಾವ ನ್ಯಾಯಾಲಯ, ಯಾವ ಸಂಸ್ಥೆ, ಯಾವ ತನಿಖಾ ಸಂಸ್ಥೆ ವರದಿ ನೀಡಿದೆ ಹೇಳಿ? ನೀವು ಹೇಳಿದ ಹೇಳಿಕೆ ಎಲ್ಲಾ ಪಕ್ಷದ ಸದಸ್ಯರು ಮೇಲೆ ‘ನಾನಲ್ಲ’ ಅಂತ ಹೇಳಬೇಕಾದ ಪರಿಸ್ಥಿತಿ ಇದೆ. ಈಗ ಸಿದ್ದರಾಮಯ್ಯ ಅವರೇ ಯಾರಿದ್ದಾರೆ ಅಂತ ಸ್ಪಷ್ಟಪಡಿಸಬೇಕಿದೆ ಎಂದರು.

ಹಾವಿದೆ ಹಾವಿದೆ ಅಂತ ಕಾಂಗ್ರೆಸ್ ನವರು ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಬುಟ್ಟಿ ತೋರಿಸಿದ್ದೇ ತೋರಿಸಿದ್ದು, ಪ್ರಿಯಾಂಕ್ ಖರ್ಗೆ ಪುಂಗಿ ಊದಿದ್ದೇ ಊದಿದ್ದು. ಯಾವ ಹಾವೂ ಕೂಡ ಹೊರಗೆ ಬರಲಿಲ್ಲ. ನಿಮ್ಮಂತಹ ಮುತ್ಸದ್ದಿ ರಾಜಕಾರಣಿ‌ ಈ ರೀತಿ ಹೇಳಿಕೆ ನೀಡಬಾರದು. ನಿಮ್ಮ ಟ್ವೀಟನ್ನು ವಾಪಸ್ ಪಡೆಯಬೇಕು. ಅಪರಾಧಗಳ ಬಗ್ಗೆ ಕ್ರಮ ಕೈಗೊಳ್ಳೋದು ನಮ್ಮ ಬಿಜೆಪಿ ಪಕ್ಷದ ಬದ್ದತೆ ಎಂದ ರಾಜೀವ್, ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.

18-2- 2018ರಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗುತ್ತದೆ. ಶ್ರೀಕಿಯನ್ನು ಅಂದು ಬಂಧನ ಮಾಡಿದರೆ ಅಪರಾಧವನ್ನು ತಡೆಯಬಹುದಿತ್ತು. ಇದು ಕಾಂಗ್ರೆಸ್ ಸರ್ಕಾರದ ಬಹು ದೊಡ್ಡ ವೈಫಲ್ಯ. ಚಾರ್ಜ್ ಶೀಟ್ ತಯಾರಿಸಿ ಪರಾರಿ ಎಂದು ತೋರಿಸಿದರು. ಶ್ರೀಕಿಗೆ ನ್ಯಾಯಾಲಯ ಕಂಡೀಷನ್ ಬೇಲ್ ಕೊಡುತ್ತದೆ. ಜಾಮೀನು ತಗೊಂಡು ಬಂದ ಬಳಿಕ ಪೊಲೀಸರ ಮುಂದೆ ಶರಣಾಗಬೇಕು. ಕರೆದಾಗ ತನಿಖಾ ಸಂಸ್ಥೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಇದ್ದದ್ದು ಕೇವಲ 20 ನಿಮಿಷ ಮಾತ್ರ. ಅಂದು ಆತನ ಸ್ವಇಚ್ಚಾ ಹೇಳಿಕೆ ಪಡೆದಿದ್ದರೆ ಅವನ ದಾಖಲೆ ಸಿಗುತ್ತಿತ್ತು ಎಂದರು.

× Chat with us