ಪಿರಿಯಾಪಟ್ಟಣ: ವಿವಿಧ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತರಾಗಬೇಕು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ನೋಂದಾಯಿತ ಕಟ್ಟಡ ಹಾಗೂ ಇತರೆ ಕಾರ್ಮಿಕರಿಗೆ ಟೂಲ್ ಕಿಟ್ ವಿತರಿಸಿ ಅವರು ಮಾತನಾಡಿದರು.
ಅಸಂಘಟಿತ ವಲಯದ ಕಟ್ಟಡ ಹಾಗೂ ಇತರೆ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಸರ್ಕಾರ ೨೦ ಸಾವಿರ ರೂ. ಮೌಲ್ಯದ ಉಪಕರಣಗಳನ್ನು ನೀಡಲಾಗಿದ್ದು, ಈ ಸೌಲಭ್ಯವನ್ನು ಪಡೆಯಲು ಕಾರ್ಮಿಕರು ನೋಂದಾಯಿತ ಸಂಘದ ಸದಸ್ಯರಾಗಿರಬೇಕು ಎಂದರು.
ಗಾರೆಕೆಲಸ, ಕೊಳಾಯಿ ರಿಪೇರಿ, ಮರಗೆಲಸ, ಬಾರ್ ಬೆಂಡಿಂಗ್, ಪೇಂಟಿಂಗ್, ಶೆಟರಿಂಗ್, ಟೈಲಿಂಗ್, ವಾಲ್ ಪೈಂಟಿಂಗ್, ಅರ್ಥ್ ವರ್ಕಿಂಗ್, ಎಲೆಕ್ಟ್ರಿಷಿಯನ್, ವೆಲ್ಡಿಂಗ್, ಸ್ಟೀಲ್ ಫ್ಯಾಬ್ರಿಕೇಟಿಂಗ್, ಇತ್ಯಾದಿ ಕೌಶಲ ಅಭಿವೃದ್ಧ್ದಿಯ ತರಬೇತಿಯನ್ನು ಮಂಡಳಿಯಿಂದ ಅಂಗೀಕೃತವಾದ ಕೌಶಲಾಭಿವೃದ್ಧಿ ಕೇಂದ್ರಗಳಿಂದ ಪಡೆದಿರಬೇಕು. ಕಾರ್ಮಿಕರ ಇಲಾಖೆಯ ವತಿಯಿಂದ ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ ಅಗತ್ಯವಾದ ಕೌಶಲ್ಯತೆಯನ್ನು ನೀಡುತ್ತದೆ. ಆದ್ದರಿಂದ ಮಂಡಳಿಯು ಕಾರ್ಮಿಕರಿಗೆ ತರಬೇತಿ ನೀಡಲು ನುರಿತ ತರಬೇತುದಾರರು, ಮಾಸ್ಟರ್ ತರಬೇತಿದಾರರು, ಊಟ ಮತ್ತು ವಸತಿ ಸೌಕರ್ಯ, ವೇತನ ನಷ್ಟ ಪರಿಹಾರ, ಉಪಕರಣ ಪೆಟ್ಟಿಗೆೊಂಂದಿಗೆ ರಕ್ಷಣಾತ್ಮಕ ಕಿಟ್, ಕೋರ್ಸ್ ಸಾಮಗ್ರಿ ಮತ್ತು ಆರೋಗ್ಯದ ಪ್ರಮಾಣಪತ್ರ ಮತ್ತು ತರಬೇತಿದಾರರ ಫಿಟ್ನೆಸ್, ಟ್ರೇನಿಗಾಗಿ ವೆಬ್-ಸಕ್ರಿಯಗೊಳಿಸಿದ ಡೇಟಾಬೇಸ್ ಗೆ ತಗಲುವ ವೆಚ್ಚವನ್ನು ಭರಿಸುತ್ತದೆ.
ಮಂಡಳಿಯಿಂದ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಪರಿಷ್ಕ ೃತ ಕೌಶಲ್ಯತೆ ಹಾಗೂ ಇತರೆ ಸೌಲಭ್ಯಗಳನ್ನು ತರಬೇತಿ ಪಡೆಯುವವನಿಗೆ ನೀಡಲಾಗುತ್ತದೆ. ಕಾರ್ಮಿಕ ಮಂಡಳಿಯ ನೋಂದಾಯಿತ ಫಲಾನುಭವಿಗೆ ಅವನ ಸದಸ್ಯತ್ವ ಅವಧಿಯಲ್ಲಿ ಒಂದು ಬಾರಿಗೆ ಮಾತ್ರ ಈ ತರಬೇತಿ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದ್ದರಿಂದ ತಾಲ್ಲೂಕಿನ ಎಲ್ಲಾ ವರ್ಗದ ಕಾರ್ಮಿಕರು ಸರ್ಕಾರದಿಂದ ಮಂಜೂರಾದ ಸೌಲಭ್ಯವನ್ನು ಪಡೆಯಲು ಆನ್ ಲೈನ್ ತಂತ್ರಾಂಶಗಳ ಮೂಲಕ ನೋಂದಾಯಿಸಿಕೊಳ್ಳಬೇಕು ಎಂದರು.
ಇದೇ ವೇಳೆ ವಿವಿಧ ವರ್ಗದ ಕಾರ್ಮಿಕರಿಗೆ ಟೂಲ್ ಕಿಟ್ ಸಾಮಗ್ರಿಗಳನ್ನು ವಿತರಿಸಲಾಯಿತು. ಕಾರ್ಮಿಕ ಇಲಾಖೆ ನಿರೀಕ್ಷಕ ಲಕ್ಮೀಶ್, ಪುರಸಭಾ ಅಧ್ಯಕ್ಷ ಮಹೇಶ್, ಮುಖಂಡರಾದ ಅಣ್ಣಯ್ಯ ಶೆಟ್ಟಿ, ರಘುನಾಥ್, ಕೃಷ್ಣೇಗೌಡ, ಚಂದ್ರು, ಕಾರ್ಮಿಕ ಇಲಾಖೆ ಸಹಾಯಕ ಅಧಿಕಾರಿ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ತಾಲ್ಲೂಕಿನ ಎಲ್ಲಾ ವರ್ಗದ ಕಾರ್ಮಿಕರು ಸರ್ಕಾರದಿಂದ ಮಂಜೂರಾದ ಸೌಲಭ್ಯವನ್ನು ಪಡೆಯಲು ಆನ್ ಲೈನ್ ತಂತ್ರಾಂಶಗಳ ಮೂಲಕ ನೋಂದಾಯಿಸಿಕೊಳ್ಳಬೇಕು. ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಹೊಂದಿ ಪಡೆದುಕೊಳ್ಳಲು ಮುಂದಾಗಬೇಕು. -ಕೆ.ಮಹದೇವ್, ಶಾಸಕರು.