ಹಳೇ ಮೈಸೂರು ಭಾಗದಲ್ಲಿ ಚಿರತೆಗಳದ್ದೇ ಸುದ್ದಿ, ಕೆಆರ್ ಎಸ್ ಗೂ ಚಿರತೆ ಕಾಟ
ಲೋಕೇಶ್ ಕಾಯರ್ಗ
ಮೈಸೂರು: ತಾಲ್ಲೂಕಿನ ದೂರ ಗ್ರಾಮದಲ್ಲಿ ಗ್ರಾಮಸ್ಥರಿಗೆ ಹಲವು ದಿನಗಳಿಂದ ಕಾಟ ನೀಡುತ್ತಿದ್ದ ಚಿರತೆ ಭಾನುವಾರ ಕೊನೆಗೂ ಬೋನಿಗೆ ಬಿದ್ದಿದೆ. ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿ ಸಾಕುಪ್ರಾಣಿಗಳು ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಒಂದೂವರೆ ವರ್ಷದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
ಹಳೇ ಮೈಸೂರು ಭಾಗದ ಜನರಿಗೆ ಈಗ ಚಿರತೆ ತೀರಾ ಪರಿಚಿತ ಪ್ರಾಣಿಯಾಗಿದ್ದು ಜಾನುವಾರುಗಳ ಮೇಲೆ ದಾಳಿ ಸಾಮಾನ್ಯವಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ ಭಾಗಗಳಲ್ಲಿ ಚಿರತೆ ಪ್ರತಿದಿನ ವೆಂಬಂತೆ ಕಾಣಿಸಿಕೊಳ್ಳುತ್ತಿದೆ. ಎಷ್ಟರ ಮಟ್ಟಿಗೆ ಎಂದರೆ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಲ್ಲಿ ವಿಶ್ವವಿಖ್ಯಾತ ಕೃಷ್ಣರಾಜಸಾಗರ ಬೃಂದಾವನವನ್ನು ಎರಡು ಬಾರಿ ಮುಚ್ಚಲಾಗಿದೆ. ಅಕ್ಟೋಬರ್ 22ಕ್ಕೆ ಮೊದಲ ಬಾರಿಗೆ ಕಾಣಿಸಿಕೊಂಡ ಚಿರತೆ ಅಕ್ಟೋಬರ್ 28ರಂದು ಮತ್ತೆ ಸಿಸಿಟಿವಿಯಲ್ಲಿ ಪತ್ತೆಯಾಗಿದೆ.
ಕರ್ನಾಟಕ ಕೈಗಾರಿಕಾ ಭದ್ರತೆ ಪಡೆಯ 75ಕ್ಕೂ ಹೆಚ್ಚು ಸಶಸ್ತ್ರ ಸಿಬ್ಬಂದಿ ಮತ್ತು ಅಷ್ಟೇ ಪ್ರಮಾಣದ ಸಿಸಿಟಿವಿ ಕಾವಲು ಇದ್ದರೂ ಎಲ್ಲ ಭದ್ರತೆಯನ್ನು ಭೇದಿಸಿ ಈ ಚಿರತೆ ಕನ್ನಂಬಾಡಿ ಕಟ್ಟೆಯತ್ತ ಬಂದಿದೆ. ಚಿರತೆಯನ್ನು ಸೆರೆ ಹಿಡಿಯಲು ಇನ್ನೂ ಸಾಧ್ಯವಾಗಿಲ್ಲ. ದಿನವೊಂದಕ್ಕೆ ಸಾವಿರಾರು ಜನರು ಭೇಟಿ ಕೊಡುವ ಪ್ರವಾಸಿ ತಾಣ ಬಂದ್ ಆದ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮವೂ ಲಕ್ಷಾಂತರ ರೂ. ನಷ್ಟ ಅನುಭವಿಸಿದೆ.
ಅಕ್ಟೋಬರ್ 24ರಂದು ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕೆವಿಎನ್ ದೊಡ್ಡಿಯಲ್ಲಿ ಚಿರತೆಯೊಂದು ಸೆರೆ ಸಿಕ್ಕಾಗ ಜನರು ನಿಟ್ಟುಸಿರು ಬಿಟ್ಟಿದ್ದರು. ಕೆವಿಎನ್ ದೊಡ್ಡಿ ಮತ್ತು ಕೆಂಚಯ್ಯನ ದೊಡ್ಡಿ ಗ್ರಾಮದಲ್ಲಿ ಹಲವು ಸಾಕುಪ್ರಾಣಿಗಳು ಮತ್ತು ಜಾನುವಾರುಗಳನ್ನು ಭಕ್ಷಿಸಿದ್ದ ಈ ಚಿರತೆ ಸರಿಯಾಗಿ ಒಂದು ತಿಂಗಳ ಹಿಂದೆ ( ಸೆ.24) ದನಗಾಹಿ ಗೋವಿಂದಯ್ಯ ಎಂಬವರನ್ನು ಬಲಿ ಪಡೆದಿತ್ತು.
ಸೆಪ್ಟೆಂಬರ್ ತಿಂಗಳ ಮೊದಲ ಎರಡು ವಾರ ಮೈಸೂರು ನಗರದ ಮೇಟಗಳ್ಳಿಯಲ್ಲಿರುವ ಕೇಂದ್ರಿಯ ವಿದ್ಯಾಲಯದ ಶಾಲಾ ಮಕ್ಕಳಿಗೆ ರಜೆ ಘೋಷಿಸಲಾಗಿತ್ತು. ಇದಕ್ಕೆ ಕಾರಣವಾಗಿದ್ದು ಚಿರತೆ ಹಾವಳಿ. ಇಲ್ಲಿನ ರಿಸರ್ವ್ ಬ್ಯಾಂಕ್ ಆವರಣದಲ್ಲಿ ನಾಲ್ಕೈದು ಬಾರಿ ಕಾಣಿಸಿಕೊಂಡ ಚಿರತೆಯನ್ನು ಸೆರೆ ಹಿಡಿಯಲು ಇನ್ನೂ ಸಾಧ್ಯವಾಗಿಲ್ಲ. ಆದರೆ ಚಿರತೆ ಆಗಾಗ ಕಾಣಿಸಿಕೊಂಡು ಆತಂಕ ಮೂಡಿಸುತ್ತಲೇ ಇದೆ.
ಅಕ್ಟೋಬರ್ 27ರಂದು ಪಾಂಡವಪುರದ ಬೇಬಿ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ನಿಂಗೇಗೌಡ ಎಂಬವರ ಮೇಕೆಯನ್ನು ತಿಂದು ಹಾಕಿತ್ತು. ಅಕ್ಟೋಬರ್ 13ರಂದು ರಾತ್ರಿ ಗುಂಡ್ಲುಪೇಟೆ ಬೇಗೂರಿನ ಮರಳಾಪುರದಲ್ಲಿ ವೀರಪ್ಪ ಎಂಬವರ ಹಸುವಿನ ಮೇಲೆ ಚಿರತೆ ದಾಳಿ ಮಾಡಿತ್ತು. ಅಕ್ಟೋಬರ್ ಆರರಂದು ಹುಣಸೂರು ತಾಲ್ಲೂಕಿನ ಹನಗೋಡು ಹಳೆವಾರಂಚಿ ಗ್ರಾಮದಲ್ಲಿ ಹಾಡಹಗಲೇ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು.
ಮೈಸೂರಿನ ಚಾಮುಂಡಿ ಬೆಟ್ಟ, ವಿಮಾನ ನಿಲ್ದಾಣ, ಬೆಮೆಲ್ ಕಾರ್ಖಾನೆ ಪ್ರದೇಶ, ಇಲವಾಲ ಮುಂತಾದ ಕಡೆಗಳಲ್ಲಿ ಈ ಹಿಂದೆಯೂ ಚಿರತೆ ಕಾಣಿಸಿಕೊಂಡಿದೆ. ಆದರೆ ಬೀದಿನಾಯಿಗಳನ್ನು ತಿಂದಿರುವುದನ್ನು ಬಿಟ್ಟರೆ ಮನುಷ್ಯರ ಮೇಲೆ ದಾಳಿ ಮಾಡಿದ ಪ್ರಕರಣ ನಡೆದಿಲ್ಲ. ಅಂಕಿ ಅಂಶಗಳನ್ನು ಗಮನಿಸಿದರೆ ಇತ್ತೀಚಿನ ದಿನಗಳಲ್ಲಿ ಮೈಸೂರು ಭಾಗ ಮಾತ್ರವಲ್ಲ ನಾನಾ ಜಿಲ್ಲೆಗಳಲ್ಲಿ ಚಿರತೆ ನಾಡಿನತ್ತ ಮುಖ ಮಾಡಿರುವ ನಿದರ್ಶನಗಳು ಸಿಗುತ್ತಿವೆ.
ಇತ್ತೀಚೆಗೆ ಬೆಳಗಾವಿ ನಗರದ ಗಾಲ್ಫ್ ಕ್ಲಬ್ ನಲ್ಲಿ ಕಾಣಿಸಿಕೊಂಡ ಚಿರತೆ ಸುಮಾರು ಒಂದು ತಿಂಗಳ ಕಾಲ ಹಾಹಾಕಾರ ಸೃಷ್ಟಿಸಿತ್ತು. ದಾವಣಗೆರೆಯ ನ್ಯಾಮತಿಯಲ್ಲಿ ಮಹಿಳೆಯೊಬ್ಬರನ್ನು ಬಲಿ ಪಡೆದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸುಮಾರು ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಬೇಕಾಯಿತು. ಕೊಪ್ಪಳ, ಚಿಕ್ಕಬಳ್ಳಾಪುರ, ಉಡುಪಿ ಮತ್ತಿತರ ಜಿಲ್ಲೆಗಳಲ್ಲೂ ಇತ್ತೀಚಿನ ದಿನಗಳಲ್ಲಿ ಚಿರತೆ ಹಾವಳಿ ನಡೆಸಿದೆ.
ಸಾಮಾನ್ಯವಾಗಿ ಕಾಡಿನಲ್ಲಿ ಆಹಾರ ಅರಸುವ ಚಿರತೆ ಸುಲಭದ ಬೇಟೆಗಾಗಿ ಕಾಡಂಚಿನ ಗ್ರಾಮಗಳಿಗೆ ದಾಳಿ ಮಾಡುತ್ತದೆ. ಬೇಟೆಗೆ ಅಡ್ಡಿಯಾದಾಗ ಮನುಷ್ಯರ ಮೇಲೆ ದಾಳಿ ಮಾಡಿದ ಉದಾಹರಣೆಗಳೂ ನಮ್ಮ ಕಣ್ಣ ಮುಂದಿವೆ. ಪ್ರತೀ ವರ್ಷ ವನ್ಯಜೀವಿ ಮತ್ತು ಮಾನವ ಸಂಘರ್ಷದಲ್ಲಿ ಪ್ರಾಣ ಕಳೆದುಕೊಳ್ಳುವ ಮಾಂಸಾಹಾರಿ ಪ್ರಾಣಿಗಳ ಪೈಕಿ ಚಿರತೆಗೆ ಅಗ್ರಸ್ಥಾನ. ಕಳೆದ ಎಂಟು ವರ್ಷಗಳಲ್ಲಿ 250ಕ್ಕೂ ಹೆಚ್ಚು ಚಿರತೆಗಳು ನಾಡಿಗೆ ಬಂದು ಪ್ರಾಣ ಕಳೆದುಕೊಂಡಿವೆ. ಎಂಟು ವರ್ಷಗಳಲ್ಲಿ ಚಿರತೆಯ ಪ್ರಮಾಣ ಶೇ.60ರಷ್ಟು ಹೆಚ್ಚಾಗಿರುವುದೂ ಹಾವಳಿ ಹೆಚ್ಚಾಗಲು ಕಾರಣವಿರಬಹುದು.
ಜನರು ತಮ್ಮ ಮನೆಯಲ್ಲಿ ಉಳಿದ ಆಹಾರ ಪದಾರ್ಥ, ಕೋಳಿ ಮಾಂಸದಂತಹ ಪದಾರ್ಥಗಳನ್ನು ಹೊರಗೆ ಎಸೆಯುವುದು ಕಾಡು ಪ್ರಾಣಿಗಳು ನಾಡಿಗೆ ಬರಲು ಪ್ರೇರಣೆಯಾಗಿದೆ. ಕಾಡು ಪ್ರಾಣಿಗಳನ್ನು ಕಂಡ ಕೂಡಲೇ ಅವುಗಳಿಗೆ ತೊಂದರೆ ಮಾಡದೆ ನಮಗೆ ಮಾಹಿತಿ ನೀಡಿ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ಮಾತು.
ಅರಣ್ಯದೊಳಗೆ ಒಳ್ಳೆಯ ಆಹಾರ ಸಿಕ್ಕಿಲ್ಲ ಎಂದರೆ ಪ್ರಾಣಿಗಳು ಹೊರಗೆ ಬರುವುದು ಸಹಜ. ಕಾಡಂಚಿನಲ್ಲಿ ಬದುಕುವ ಚಿರತೆಗಳಿಗೆ ಸಾಕು ಪ್ರಾಣಿಗಳ ರಕ್ತದ ರುಚಿ ಸಿಕ್ಕಿದರೆ ಮತ್ತೆ ಮತ್ತೆ ದಾಳಿ ಮಾಡುತ್ತವೆ. ನಾಡಿನೊಳಗೆ ದೊಡ್ಡ ಪೊದೆಗಳಿದ್ದರೂ ಇವುಗಳು ವಾಸ ಮಾಡುತ್ತವೆ. ಒಮ್ಮೆ ನಾಡಿನೊಳಗೆ ಬಂದ ಚಿರತೆಗಳನ್ನು ಮತ್ತೆ ಕಾಡಿಗಟ್ಟುವುದು ಕಷ್ಟದ ಕೆಲಸ.
ಎ.ಸಿ. ಲಕ್ಷ್ಮಣ
ಅರಣ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ.