ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳಿಬಂದ ಭ್ರಷ್ಟಾಚಾರಗಳು, ಆರೋಪಗಳನ್ನು ತನಿಖೆಗೊಳಪಡಿಸಲು ಹೊಂದಾಣಿಕೆ ರಾಜಕಾರಣ ಮಾಡಬಾರದು ಎಂದು ಕಾಂಗ್ರೆಸ್ ಶಾಸಕರು ಒತ್ತಡ ಹೇರುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಂಚಖಾತ್ರಿಗಳನ್ನು ನೀಡುವ ಜೊತೆಗೆ ಪ್ರಮುಖವಾಗಿ ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಪ್ರಸ್ತಾಪಿಸಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸ್ವಚ್ಚ ಹಾಗೂ ಭ್ರಷ್ಟಾಚಾರಮುಕ್ತ ಆಡಳಿತ ನೀಡುವುದಾಗಿ ಭರವಸೆ ನೀಡಲಾಗಿದೆ. ಅದನ್ನು ಮರೆಯಬಾರದು ಎಂದು ಕಾಂಗ್ರೆಸ್ ಶಾಸಕರು ಒತ್ತಾಯಿಸುತ್ತಿದ್ದಾರೆ.
ಕೋವಿಡ್ ವೇಳೆ ವೈದ್ಯಕೀಯ ಸಾಮಗ್ರಿಗಳ ಖರೀದಿ ಹಾಗೂ ಇತರ ಅವ್ಯವಹಾರಗಳು, ಬಿಟ್ ಕಾಯಿನ್ ಹಗರಣ, ಪಿಎಸ್ಐ ಸಹಾಯಕ ಪ್ರಾಧ್ಯಾಪಕರು, ಸಹಕಾರ ಇಲಾಖೆ ಸೇರಿದಂತೆ ವಿವಿಧ ನೇಮಕಾತಿ ಹಗರಣಗಳ ಕುರಿತು ಕಾಂಗ್ರೆಸ್ ಭಾರಿ ಪ್ರಮಾಣದಲ್ಲಿ ಚರ್ಚೆ ಮಾಡಿತ್ತು.
ಕೃಷಿ, ತೋಟಗಾರಿಕೆ ಇಲಾಖೆಗಳಲ್ಲಿ ಸಹಾಯಧನ ಬಿಡುಗಡೆ ವೇಳೆಯಲ್ಲಿ ನಡೆದಿರುವ ಹಗರಣಗಳ ಕುರಿತು ದಾಖಲಾತಿಗಳನ್ನು ಬಿಡುಗಡೆ ಮಾಡಿತ್ತು. ಸಮಾಜಕಲ್ಯಾಣ ಇಲಾಖೆಯ ಗಂಗಾಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಅವ್ಯವಹಾರಗಳು ನಡೆದಿರುವುದನ್ನು ಹಿಂದಿನ ಸರ್ಕಾರವೇ ಒಪ್ಪಿಕೊಂಡು ತನಿಖೆಗೆ ಒಪ್ಪಿಸಿದೆ. ಆದರೆ ಬಹುತೇಕ ತನಿಖೆಗಳು ಹಳ್ಳ ಹಿಡಿದಿವೆ.
ತಪ್ಪಿತಸ್ಥರನ್ನು ರಕ್ಷಣೆ ಮಾಡಲು ಅಥವಾ ಕೆಳಹಂತದ ಅಕಾರಗಳನ್ನಷ್ಟೇ ಹೊಣೆ ಮಾಡಿ ಉನ್ನತ ಮಟ್ಟದಲ್ಲಿರುವವರನ್ನು ಪಾರು ಮಾಡಲು ಹುನ್ನಾರಗಳು ನಡೆದಿವೆ. ಇದಕ್ಕೆ ಅವಕಾಶವಾಗದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬುದು ಶಾಸಕರ ಆಗ್ರಹವಾಗಿದೆ.
ಬಿಜೆಪಿ ಇತ್ತೀಚೆಗೆ ಜನಪರ ಯೋಜನೆಗಳ ವಿಷಯದಲ್ಲಿ ರಾಜಕೀಯ ಮಾಡುತ್ತಾ ಅಪಪ್ರಚಾರ ನಡೆಸುತ್ತಿದೆ. ಸರ್ಕಾರದ ವಿರುದ್ಧ ಷಡ್ಯಂತ್ರ ರೂಪಿಸಿ ಜನಾಭಿಪ್ರಾಯವನ್ನು ದಿಕ್ಕು ತಪ್ಪಿಸುತ್ತಿದೆ. ತಪ್ಪು ಮಾಡಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿಗೆ ಪಾಠ ಕಲಿಸುವ ವಿಷಯದಲ್ಲಿ ಕಾಂಗ್ರೆಸ್ ನುಣುಚಿಕೊಳ್ಳುವ ಪ್ರಯತ್ನ ಮಾಡಬಾರದು. ನಿರ್ದಾಕ್ಷಿಣ್ಯವಾಗಿ ವರ್ತಿಸದೇ ಇದ್ದರೆ ಲೋಕಸಭೆ ಚುನಾವಣೆಯಲ್ಲಿ ಜನರಿಗೆ ಉತ್ತರ ನೀಡಲು ಕಾಂಗ್ರೆಸ್ಗೆ ಮುಖವಿಲ್ಲದಂತಾಗುತ್ತದೆ ಎಂಬ ಅಭಿಪ್ರಾಯವನ್ನು ಶಾಸಕರು ವ್ಯಕ್ತಪಡಿಸುತ್ತಿದ್ದಾರೆ.
ಪಿಎಸ್ಐ ಹಗರಣದಲ್ಲಿ ಎಡಿಜಿಪಿಯ ಬಂಧನಕ್ಕೆ ತನಿಖೆ ನಿಂತುಹೋಗಿದೆ. ಬಂತ ಆರೋಪಿಗಳಿಗೆ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಅವಕಾಶ ಮಾಡಿಕೊಡಬೇಕೆಂಬುದು ಕಾಂಗ್ರೆಸ್ನ ಪ್ರಮುಖ ಬೇಡಿಕೆಯಾಗಿತ್ತು. ಈಗ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದೆ. ತನಿಖಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಬಂಧಿತ ಎಡಿಜಿಪಿ ಅಮೃತ್ಪಾಲ್ ಹಾಗೂ ಇತರ ಅಧಿಕಾರಿಗಳು ನ್ಯಾಯಾೀಧಿಶರ ಮುಂದೆ ಹೇಳಿಕೆ ನೀಡಲು ಅವಕಾಶ ಮಾಡಿಕೊಡಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.
ಪಿಎಸ್ಐ ಹಗರಣದಲ್ಲಿ ಉನ್ನತ ಮಟ್ಟದ ಹಸ್ತಕ್ಷೇಪವಿದೆ. 300 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಣದ ವಹಿವಾಟು ನಡೆದಿದೆ ಎಂಬ ಆರೋಪಗಳನ್ನು ಕಾಂಗ್ರೆಸ್ ಮಾಡಿತ್ತು. ಆದರೆ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಬಗ್ಗೆ ಚಕಾರವೆತ್ತದೆ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ ಎಂಬ ಹೇಳಿಕೆ ನೀಡಿ ಜಾರಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಈ ರೀತಿಯ ದ್ವಿಮುಖ ಹಾಗೂ ಗೊಂದಲದ ನೀತಿಗಳು ಟೀಕೆಗೆ ಗುರಿಯಾಗಲಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಮುಲಾಜಿಗೆ ಒಳಗಾಗದಂತೆ ಕಠಿಣ ಕ್ರಮ ಜರುಗಿಸಬೇಕೆಂದು ಶಾಸಕರು ಒತ್ತಾಯಿಸಿದ್ದಾರೆ.
ಇತ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನಡೆದ ಅವ್ಯವಹಾರಗಳ ತನಿಖೆಗೆ ಮೀನಾಮೇಷ ಎಣಿಸಲಾಗುತ್ತಿದೆ. ಆರೋಗ್ಯ ಕವಚ ಸೇರಿದಂತೆ ಎಲ್ಲಾ ಟೆಂಡರ್ಗಳನ್ನು ಸರ್ಕಾರ ರದ್ದುಗೊಳಿಸಿದೆ. ಆದರೆ ಅವ್ಯವಹಾರದ ಬಗ್ಗೆ ತನಿಖೆಗೆ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ. ಈಗಲೂ ಪರಿಶೀಲನೆ, ಚರ್ಚೆ ಎಂದು ಕಾಲಾಹರಣ ಮಾಡಲಾಗುತ್ತಿದೆ ಎಂಬ ಆಕ್ಷೇಪಗಳು ಕೇಳಿಬಂದಿವೆ.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಲೋಪದೋಷಗಳ ಬಗ್ಗೆ ಕಾಂಗ್ರೆಸ್ ದೊಡ್ಡ ದನಿಯಲ್ಲಿ ಸದ್ದು ಮಾಡಿತ್ತು. ಆದರೆ ಈಗ ತಣ್ಣಗಾಗಿ ಹೋಗಿದೆ. ಬಿಟ್ಕಾಯಿನ್ ಹಗರಣದಲ್ಲಿ ಸಾವಿರಾರು ಕೋಟಿ ರೂ.ಗಳ ಹಗರಣ ಆಗಿದೆ ಎಂಬ ಆರೋಪಗಳನ್ನು ಮೆಗಾ ಧಾರಾವಾಹಿಗಳ ಮಾದರಿಯಲ್ಲಿ ಮಾಡಿದ್ದ ಕಾಂಗ್ರೆಸ್ ಈಗ ಅದನ್ನು ಮರೆತಂತೆ ವರ್ತಿಸುತ್ತಿದೆ.
ಹಿಂದಿನ ಸರ್ಕಾರವೇ ಬಿಟ್ ಕಾಯಿನ್ ಹಗರಣದಲ್ಲಿ ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಪ್ರಕರಣವನ್ನು ಮುಚ್ಚಿ ಹಾಕಿದೆ. ಕೆಲವು ಸಾಕ್ಷಿಗಳು ನಾಶವಾಗಿದೆ ಎಂಬ ಆರೋಪಗಳಿವೆ. ಆದರೆ ಹಗರಣದಲ್ಲಿ ಬಂತನಾಗಿದ್ದ ಪ್ರಮುಖ ಆರೋಪಿ ಶ್ರೀಕಿ ಬಿಟ್ಕಾಯಿನ್ ವಂಚನೆಯ ಜೊತೆಗೆ ಈ ಪ್ರಕ್ಯೂರ್ಮೆಂಟ್ ಪೋರ್ಟಲ್ಗೆ ಕನ್ನ ಹಾಕಿ ಒಂದಿಷ್ಟು ಹಣ ಕಳವು ಮಾಡಿದ್ದಾನೆ ಎಂಬ ಆರೋಪ ದಾಖಲಾಗಿತ್ತು. ಕನಿಷ್ಟ ಆ ಪ್ರಕರಣವನ್ನಾದರೂ ತನಿಖೆ ಆರಂಭಿಸಬೇಕು ಎಂಬುದು ಕಾಂಗ್ರೆಸಿಗರ ಆಗ್ರಹವಾಗಿದೆ.