ಬೆಂಗಳೂರು : ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಖಾಸಗಿ ಹೊಟೇಲ್ನಿಂದ ಒಂದೇ ಬಸ್ನಲ್ಲಿ ಕಾಂಗ್ರೆಸ್ನ ಗಣ್ಯ ನಾಯಕರು ಪ್ರಯಾಣಿಸುವ ಮೂಲಕ ಮತ್ತೊಮ್ಮೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ದೆಹಲಿಯಿಂದ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಹಲವರು ಬೆಳಗ್ಗೆ ಶಾಂಘ್ರೀಲಾ ಹೊಟೇಲ್ನಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದರು.
ಡಿ.ಕೆ.ಶಿವಕುಮಾರ್ ವಿಮಾನ ನಿಲ್ದಾಣದಿಂದಲೂ ಗಣ್ಯರನ್ನು ಸ್ವಾಗತಿಸಿ ಕರೆತಂದು ಹೊಟೇಲ್ಗೆ ಬಿಟ್ಟು ಅಲ್ಲಿ ಆತಿಥ್ಯ, ಉಪಚಾರಗಳ ಮೇಲುಸ್ತುವಾರಿ ನೋಡಿಕೊಂಡರು. ನಂತರ ಕಂಠೀರವ ಕ್ರೀಡಾಂಗಣಕ್ಕೆ ಬಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು. ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಟೇಲ್ಗೆ ತೆರಳಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಅಭಿನಂದಿಸಿದರು. ಅಲ್ಲಿಂದ ಎಲ್ಲ ಕಾಂಗ್ರೆಸಿಗರು ಒಟ್ಟಾಗಿ ಒಂದೇ ಬಸ್ನಲ್ಲಿ ಕಂಠೀರವ ಕ್ರೀಡಾಂಗಣಕ್ಕೆ ಪ್ರಯಾಣಿಸಿದ್ದಾರೆ.
ಪ್ರತ್ಯೇಕವಾಗಿ ಖಾಸಗಿ ವಾಹನಗಳಲ್ಲಿ ಆಗಮಿಸುವುದರಿಂದ ಸಂಚಾರ ದಟ್ಟಣೆ ಹಾಗೂ ತಪಾಸಣೆಯ ಕಿರಿಕಿರಿಗಳಾಗಬಹುದು ಎಂಬ ಕಾರಣಕ್ಕೂ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಗಣ್ಯರು ಒಟ್ಟಾಗಿ ಪ್ರಯಾಣಿಸಿದ್ದಾರೆ.