ರಾಜ್ಯ

ಮಂಗಳೂರು | ಭಾರೀ ಮಳೆಗೆ ಗುಡ್ಡ ಕುಸಿತ ; ನಾಲ್ವರ ಸಾವು

ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಂಗಳೂರು ಸುತ್ತಮುತ್ತ ಗುಡ್ಡ ಕುಸಿದು ಎರಡು ಪ್ರತ್ಯೇಕ ಪ್ರಕರಣದಲ್ಲಿ ನಾಲ್ಕು ಜೀವಗಳು ಬಲಿಯಾಗಿವೆ.

ಮೊಂಟೆಪದವು ಗ್ರಾಮದಲ್ಲಿ ಕುಸಿದ ಮನೆಯ ಅವಶೇಷಗಳಡಿ ಸಿಲುಕಿ ತಾಯಿ-ಮಗು ಸುಮಾರು 8 ಗಂಟೆ ಜೀವನ್ಮರಣದೊಂದಿಗೆ ಹೋರಾಡಿದ ಘಟನೆ ವರದಿಯಾಗಿದೆ. ಕೊಣಾಜೆಯ ಮಂಜನಾಡಿ ಗ್ರಾಮದ ಮೊಂಟೆಪದವು ಇತ್ತಲಕೋಡಿ ಕೊಪ್ಪಲ ಗುಡ್ಡ ಕುಸಿದು ವಾಸದ ಮನೆ ಮೇಲೆ ಬಿದ್ದಿದೆ. ಮನೆಯಲ್ಲಿ ಕಾಂತಪ್ಪ, ಪತ್ನಿ ಪ್ರೇಮಪೂಜಾರಿ, ಸೀತಾರಾಮ ಪೂಜಾರಿ, ಇವರ ಪತ್ನಿ ಅಶ್ವಿನಿ, ಮಕ್ಕಳಾದ ಪುತ್ರ ಆರ್ಯನ್, ಪುತ್ರಿ ಅರುಷಾ ಇದ್ದರು. ಬೆಳಗಿನಜಾವ 4 ಗಂಟೆ ಸುಮಾರಿಗೆ ಗುಡ್ಡ ಕುಸಿದು ಎರಡು ಬೃಹತ್ ಮರಗಳ ಸಮೇತ ಮನೆಯ ಮೇಲೆ ಬಿದ್ದಿದೆ. ಸುಮಾರು 6 ಗಂಟೆ ವೇಳೆಗೆ ಇದು ಸ್ಥಳೀಯರ ಗಮನಕ್ಕೆ ಬಂದಿದೆ.

ಗುಡ್ಡ ಕುಸಿದು ಮನೆ ಮೇಲೆ ಬೀಳುವುದನ್ನು ಗ್ರಹಿಸಿದ ಮನೆಯ ಯಜಮಾನ ಕಾಂತಪ್ಪ ಹೊರಗೆ ಓಡಿಬರುವ ಹಂತದಲ್ಲಿ ಅವಶೇಷಗಳಡಿ ಸಿಲುಕಿದ್ದಾರೆ. ಅವರನ್ನು ಸ್ಥಳೀಯರು ಪತ್ತೆಹಚ್ಚಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾಂತಪ್ಪ ಅವರ ಪತ್ನಿ ಪ್ರೇಮ ಪೂಜಾರಿ(52) ಅವಶೇಷಗಳಡಿ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಶ್ವಿನಿ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಮಲಗಿದ್ದ ವೇಳೆ ಅವರ ಮೇಲೆ ಮನೆ ಕುಸಿದಿದ್ದು, ಮೇಲ್ಚಾವಣಿಯ ಬೀಮ್ ಅಶ್ವಿನಿಯವರ ಸೊಂಟದ ಭಾಗದ ಮೇಲೆ ಅಪ್ಪಳಿಸಿದೆ. ಹೀಗಾಗಿ ಆಕೆ ಹೊರಬರಲಾಗದೆ ಸಿಲುಕಿಕೊಂಡಿದ್ದರು. ಮನೆ ಕುಸಿಯುವ ವೇಳೆಯಲ್ಲಿ ಮಕ್ಕಳಿಗೆ ಹಾನಿಯಾಗದಂತೆ ತನ್ನ ದೇಹ ಮತ್ತು ಕೈಗಳನ್ನು ಅಡ್ಡಲಾಗಿ ಇಟ್ಟು ಜೀವ ಉಳಿಸುವ ಪ್ರಯತ್ನ ಮಾಡಿ ಮಾತೃ ಹೃದಯ ಪ್ರದರ್ಶಿಸಿದ್ದಾರೆ.

ಮುಂಜಾನೆ ಸ್ಥಳೀಯರು ಬಂದು ನೋಡಿದಾಗ ಮೂರು ವರ್ಷದ ಆರ್ಯನ್ಗೆ ಯಾವುದೇ ಚಲನೆ ಇರಲಿಲ್ಲ. ತಾಯಿಯ ಮತ್ತೊಂದು ಮಗ್ಗಲುನಲ್ಲಿದ್ದ ಮಗು ಅರುಷಾ ಕೈಗಳನ್ನು ಅಲುಗಾಡಿಸುತ್ತಿತ್ತು. ಸ್ಥಳೀಯರು ಅಶ್ವಿನಿ ಹಾಗೂ ಮಕ್ಕಳನ್ನು ರಕ್ಷಿಸುವ ಪ್ರಯತ್ನ ಮಾಡಿದ್ದರು. ಆದರೆ ಅದು ಕಷ್ಟಸಾಧ್ಯವಾಗಿತ್ತು. ಈ ವೇಳೆ ಅರೆಪ್ರಜ್ಞಾವಸ್ಥೆಯಲ್ಲಿದ್ದ ಅಶ್ವಿನಿ ತನಗಿಂತ ಮೊದಲು ತನ್ನ ಮಕ್ಕಳನ್ನು ಕಾಪಾಡಿ ಎಂದು ಕೇಳಿಕೊಂಡಿದ್ದಾರೆ. ತಾಯಿಯ ಪಕ್ಕದಲ್ಲಿದ್ದ ಮಗು ತನ್ನ ಎರಡೂ ಕೈಗಳನ್ನು ಅಲುಗಾಡಿಸುತ್ತಿತ್ತು. ಈ ದೃಶ್ಯ ಕರುಳು ಹಿಂಡುವಂತಿತ್ತು. ಕಣ್ಣೆದುರಿಗೆ ತಾಯಿ, ಮಕ್ಕಳು ನರಳಾಡುತ್ತಿದ್ದರೂ ರಕ್ಷಿಸಲಾಗದೆ ಸ್ಥಳೀಯರು ಕಣ್ಣೀರು ಹಾಕುತ್ತಿದ್ದರು. ಮನಕಲುಕುವ ಈ ದೃಶ್ಯ ರಕ್ಷಣಾ ಕಾರ್ಯಕ್ಕೆ ಆಗಮಿಸಿದ ಎಸ್.ಡಿಆರ್.ಎಫ್ ಸಿಬ್ಬಂದಿಗಳು ಭಾವೋದ್ವೇಗಕ್ಕೆ ಒಳಗಾಗುವಂತೆ ಮಾಡಿತ್ತು.

ಕಾರ್ಯಾಚರಣೆ ಬಳಿಕ ಆರ್ಯನ್ ಮೃತದೇಹವನ್ನು ಹೊರತೆಗೆಯಲಾಗಿದೆ. ಅಶ್ವಿನಿ ಮತ್ತು ಅರುಷಾ ಅವರ ರಕ್ಷಣಾ ಕಾರ್ಯ ಮಧ್ಯಾಹ್ನದವರೆಗೂ ನಡೆಯಿತು. ಕೊನೆಗೂ ತಾಯಿ-ಮಗುವನ್ನು ರಕ್ಷಿಸುವಲ್ಲಿ ರಕ್ಷಣಾ ಸಿಬ್ಬಂದಿಗಳು ಯಶಸ್ವಿಯಾದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅರುಷಾ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 3ಕ್ಕೆ ಹೆಚ್ಚಿದೆ. ಮಕ್ಕಳಿಬ್ಬರನ್ನು ಕಳೆದುಕೊಂಡು ತಾಯಿ ಆಸ್ಪತ್ರೆ ಯಲ್ಲಿ ಕಣ್ಣೀರು ಹಾಕಿದ್ದಾರೆ.

ಸ್ಥಳೀಯರಾದ ಆಸೀಫ್ ನೀಡಿರುವ ಮಾಹಿತಿ ಪ್ರಕಾರ, ಮನೆಯ ಯಜಮಾನ ಕಾಂತಪ್ಪ ಅವರನ್ನು ಹೊರಗೆ ತಂದು ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರೇಮ ಪೂಜಾರಿ ಮೃತಪಟ್ಟಿದ್ದಾರೆ. ನಾವು ಸ್ಥಳಕ್ಕೆ ಬಂದಾಗ ತಾಯಿ ಇಬ್ಬರು ಮಕ್ಕಳಿಗೆ ಪ್ರಜ್ಞೆ ಇತ್ತು. ನಾವು ನೀರು ಕುಡಿಸಿ ಉಪಚರಿಸಿದವು. ತಾಯಿ ಪ್ರಜ್ಞೆ ತಪ್ಪುವ ಮುನ್ನ ಆಕೆಯನ್ನು ರಕ್ಷಿಸಲು ಯತ್ನಿಸಿದೆವು. ಆಗ ಅಶ್ವಿನಿ ಅವರು ನನ್ನನ್ನು ಬಿಡಿ.. ಮಗುವನ್ನು ತೆಗೆದುಕೊಳ್ಳಿ.. ದೊಡ್ಡ ಮಗ ಎಲ್ಲಿದ್ದಾನೆ. ಪತಿ ಎಲ್ಲಿದ್ದಾರೆ ಎಂದು ಕೇಳುತ್ತಿದ್ದರು. ಒಂದೂವರೆ ವರ್ಷದ ಮಗು ಕೈಯಾಡಿಸುತ್ತಿತ್ತು. ಅದನ್ನು ರಕ್ಷಿಸುವ ಪ್ರಯತ್ನ ಮಾಡಿದವು. ಆದರೆ ಸಾಧ್ಯವಾಗಲಿಲ್ಲ, ಸ್ವಲ್ಪ ಹೆಚ್ಚುಕಮ್ಮಿಯಾದರೂ ಅವಶೇಷ ಕುಸಿದು ಜೀವಹಾನಿ ಆಗುವ ಆತಂಕ ಇತ್ತು ಎಂದು ಬಿಕ್ಕಳಿಸಿದ್ದಾರೆ.

ಕಾರ್ಯಾಚರಣೆ ವಿಳಂಬ
ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯ ವಿಳಂಬವಾಗಿತ್ತು. ತೋಟದಲ್ಲಿ ಕಾಂತಪ್ಪನವರು ಮನೆ ನಿರ್ಮಿಸಿಕೊಂಡಿದ್ದರಿಂದಾಗಿ ಅಲ್ಲಿಗೆ ದೊಡ್ಡ ಪ್ರಮಾಣದ ಜೆಸಿಬಿ, ಇಟಾಚಿ ಅಥವಾ ಅರ್ಥ ಮೂವರ್ಗಗಳನ್ನು ತೆಗೆದುಕೊಂಡು ಹೋಗಲು ಕಷ್ಟವಾಗಿತ್ತು. ಎಸ್‍ಡಿಆರ್‌ಎಫ್ ಸಿಬ್ಬಂದಿಗಳು ಎರಡೂವರೆ ಕಿ.ಮೀ ದೂರ ಕಾರ್ಯಾಚರಣೆಯ ಸಲಕರಣೆಗಳನ್ನು ಹೊತ್ತು ಸಾಗಿಸಬೇಕಾಯಿತು. ಜೊತೆಗೆ ತಾಯಿ, ಮಕ್ಕಳು ಬದುಕಿದ್ದರಿಂದ ಕಾರ್ಯಚರಣೆ ಅತ್ಯಂತ ಸೂಕ್ಷ್ಮ ಪರಿಸ್ಥಿತಿಯಲ್ಲಿತ್ತು. ಸ್ವಲ್ಪ ವ್ಯತ್ಯಾಸವಾದರೂ ಅವಶೇಷಗಳಡಿ ಸಿಲುಕಿರುವ ತಾಯಿ-ಮಗುವಿನ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು. ಹೀಗಾಗಿ ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮ ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಬೇಕಾಗಿತ್ತು. ರಕ್ಷಣಾ ಕಾರ್ಯಚರಣೆ ಸಿಬ್ಬಂದಿಗಳು ಬೃಹತ್ ಮರಗಳನ್ನು ಕತ್ತರಿಸಿ ಅವಶೇಷಗಳಡಿ ಸಿಲುಕಿದ್ದ ತಾಯಿ-ಮಕ್ಕಳನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮಗು ಆರುಷಾ ಮೃತಪಟ್ಟಿದೆ.

ಸಿಎಂ ಆದೇಶ ;
ಭೂಕುಸಿತದ ಹಿನ್ನಲೆಯಲ್ಲಿ ತಕ್ಷಣ ಸ್ಥಳಕ್ಕೆ ತೆರಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ರಾತ್ರಿ ಬಿದ್ದ ಮಳೆಯಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ. ಗೋಡೆ ಕುಸಿತ ಆಗಿ ಸಾವು ಸಂಭವಿಸಿರುವ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ ಮುಖ್ಯಮಂತ್ರಿಗಳು, ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ವರದಿ ಮಾಡುವಂತೆ ದ.ಕ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

10 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

10 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

12 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

14 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

17 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

17 hours ago