ರಾಯಚೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಒಬ್ಬ ಪತ್ನಿ ಅಲ್ಲ ಇರೋದು, ಏಳು ಜನ ಪತ್ನಿಯರು ಇದ್ದಾರೆ. ತಮ್ಮ ಕುಟುಂಬದ ಜಗಳ ಸರಿಪಡಿಸಿಕೊಳ್ಳದವರು, ಶಿವನಗೌಡ ನಾಯಕನನ್ನು ಸೋಲಿಸುವ ಕನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ಮಾಜಿ ಸಿಎಂ ವಿರುದ್ಧ ಏಕವಚನದಲ್ಲಿ ವಾಗ್ದಳಿ ನಡೆಸಿದರು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು. ಕುಮಾರಸ್ವಾಮಿಗೆ ಒಬ್ಬರ ಹೆಂಡರಲ್ಲ, ಏಳು ಜನ ಹೆಂಡರು ಇದ್ದಾರೆ, ಇಲ್ಲಿಗೆ ಬಂದು ಶಿವನಗೌಡ ಒಂದು ಕಡೆ ಕಳುಹಿಸಿ ಬಿಡ್ರಿ ಅಂತಾ ಹೇಳುತ್ತಿದ್ದಾರೆ. ಹೇ ಹುಚ್ಚ, ನೀನೇ ಗೆಲುವುದಿಲ್ಲ. ನಿಮ್ಮ ಮನೆಯಲ್ಲಿ ಜಗಳ ನಡೆದಿದೆ. ರೇವಣ್ಣ ಪತ್ನಿಗೆ ಟಿಕೆಟ್ ಕೊಡುವುದಕ್ಕೆ ಮನಸ್ಸು ಇಲ್ಲ ನಿನಗೆ ಎಂದು ಕಿಡಿಕಾರಿದರು.
ಒಂದು ಕಡೆ ಮಗ ಸೋತ, ಇನ್ನೊಂದು ಕಡೆ ತಂದೆ ದೇವಗೌಡರು ಸೋತರು. ಇಷ್ಟಾದರೂ ನಿಮಗೆ ಬುದ್ದಿಯಿಲ್ಲ ಇನ್ನೊಬ್ಬರನ್ನ ಬಂದು ಸೋಲಿಸುತ್ತಾನಂತೆ. ನಿಜವಾಗಲೂ ಗಂಡಸ್ತನ ಇದ್ದರೆ ಈ ವಿಧಾನಸಭಾ ಕ್ಷೇತ್ರದಲ್ಲಿ ನಿನ್ನ ಶಕ್ತಿಯನ್ನು ಸಾಬೀತು ಮಾಡಿ ತೋರಿಸು, ಇಡೀ ಜಿಲ್ಲೆಯಲ್ಲಿ ಶಿವನಗೌಡ ಸೋಲಿಸುತ್ತೇವೆ ಅಂತಾ ಹೇಳುತ್ತಿದ್ದಾರೆ. ನಾನು ಒಂದುವರೆ ಲಕ್ಷ ಮತಗಳಿಂದ ಗೆದ್ದು ತೋರಿಸುತ್ತೇನೆ. ಒಂದು ವೇಳೆ ಅಷ್ಟು ಪಡೆದುಕೊಂಡಿಲ್ಲ ಎಂದರೆ ಗೆದ್ದರು ರಾಜೀನಾಮೆ ಕೊಡುತ್ತೇನೆ. ನಾನು ಗೆಲ್ಲುವುದರ ಜೊತೆ ನನ್ನ ಜತೆಯಲ್ಲಿ ನಾಲ್ವರು ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಶ್ರೀರಾಮುಲು ಬಗ್ಗೆ ಹಾಡಿ ಹೊಗಳಿದ ಶಿವನಗೌಡ ನಾಯಕ, ಎಸ್ಟಿ ಮೀಸಲಾತಿಯನ್ನ ಜಾರಿಗೆ ತರುತ್ತೇನೆ ಈ ಬಗ್ಗೆ ನಾನು ರಕ್ತದಲ್ಲಿ ಬರೆದುಕೊಂಡುವೆ ಎಂದು ಸಚಿವ ಶ್ರೀರಾಮುಲು ಹೇಳಿದ್ರು, ಹೇಳಿದಂತೆ ಅವರು ಮಾಡಿದ್ದಾರೆ. ನಾವು ತಂದೆ- ತಾಯಿಗೆ ಹುಟ್ಟಿದ ಮಕ್ಕಳು, ಬೇರೆಯವರಿಗೆ ಹುಟ್ಟಿದವರು ಅಲ್ಲ ಎಂದರು. ಸಿಎಂ ಬೊಮ್ಮಾಯಿಯದ್ದು ಬ್ರೇನ್ ಸೂಪರ್ ಯಾರು ಮಾಡದಂತಹ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ ಎಂದು ಹೊಗಳಿದರು.
ಇನ್ನು ನನಗೆ ತೊಂದರೆ ಕೊಟ್ಟವರು ಕೈಲಾಸಕ್ಕೆ ಹೋಗಿದ್ದಾರೆ, ನನ್ನ ರಾಜಕೀಯ ಜೀವನದಲ್ಲಿ ನಾನು ಒಂದೇ ಒಂದು ಸುಳ್ಳು ಹೇಳಿಲ್ಲ. ನಾನು ಏನು ನಿರಂತರವಾಗಿ ದೇವದುರ್ಗ ಶಾಸಕನಾಗಿ ಇರಬೇಕು ಅಂತ ಇಲ್ಲ. ದೇವದುರ್ಗಕ್ಕೆ ಮೆಡಿಕಲ್ ಕಾಲೇಜು ಮಾಡಬೇಕು ಇದು ನನ್ನ ಆಸೆ ಎಂದರು.
ನಾನು ಪಕ್ಷಕ್ಕೆ ಮುಜುಗರ ಮಾಡುವ ಯಾವ ಕೆಲಸನೂ ಮಾಡಿಲ್ಲ. ನನಗೆ ಯಾರು ಅಣ್ಣ – ತಮ್ಮಂದಿರಿಲ್ಲ, ಮದುವೆ ಮತ್ತು ಅಂತ್ಯಕ್ರಿಯೆಗೆ ನಾನು ಬರಬೇಕಾಗಿಲ್ಲ, 2023ರ ಚುನಾವಣೆಯಲ್ಲಿ ನಾನು 1.5 ಲಕ್ಷ ಮತಗಳು ಪಡೆಯುವೆ, ಇಲ್ಲ ಅಂದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಶಿವನಗೌಡ ನಾಯಕ ಸವಾಲು ಹಾಕಿದರು. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲಿ 5 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುತ್ತೇನೆ. ಗೆಲ್ಲಿಸದ್ದಿದ್ದರೆ ಒಂದು ಕಡೆ ಮೀಸೆ ಬೊಳಿಸುವೆ ಎಂದರು.
ಬಿಜೆಪಿ ಕಾರ್ಯಕರ್ತರು ಯಾರು ನರಿ ಮರಿಗಳು ಅಲ್ಲ. ಬಿಜೆಪಿಯ ಕಾರ್ಯಕರ್ತರು ಹುಲಿ ಮರಿಗಳು. ನಾವು ಬ್ರಿಟಿಷರ ಜೊತೆಗೆ ಯುದ್ಧ ಮಾಡಿದವರು. 1 ಲಕ್ಷ 50 ಸಾವಿರ ಮತಗಳಿಂದ ನನಗೆ ಗೆಲ್ಲಿಸಿ. ನಾನು ನಿಮ್ಮ ಮನೆಗೆ ಬಂದು ಹೆಡ್ಡಿ ಕೆಲಸ( ಸಗಣಿ ಕೆಲಸ) ಮಾಡಿ ನಿಮ್ಮ ಋಣ ತಿರುಸುವೆ ಎಂದರು.