ಬೆಂಗಳೂರು: ಜಲ ಸಂರಕ್ಷಣೆ ಕುರಿತು ಕಲ್ಮನೆ ಕಾಮೇಗೌಡರು ಹಾಕಿಕೊಟ್ಟ ಮೇಲ್ಪಂಕ್ತಿ ಅನುಕರಣೀಯ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ, ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಪರಿಸರ ಜೀವಿ, ಕೆರೆಗಳ ನಿರ್ಮಾಣದ ಮೂಲಕ ನೀರಿನ ಮಹತ್ವ ಸಾರಿದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ಬಹಳ ನೋವಾಗಿದೆ. ಕುರಿ ಸಾಕಣೆ ಕಾಯಕದಲ್ಲಿ ತೊಡಗಿದ್ದ ಅವರು ತಮ್ಮ ದುಡಿಮೆ ಹಣದಲ್ಲಿಯೇ 14ಕ್ಕೂ ಹೆಚ್ಚು ಕೆರೆ-ಕಟ್ಟೆ ನಿರ್ಮಾಣ ಮಾಡಿ ಸಕ್ಕರೆ ನಾಡಿನ ಆಧುನಿಕ ಭಗೀರಥರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದರು. ನಾನು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಎಂದು ಸ್ಮರಿಸಿದ್ದಾರೆ.