ಬೆಂಗಳೂರು: ವಿಧಾನಸೌಧದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪಂಡಿತ್ ಜವಹಾರ್ ಲಾಲ್ ನೆಹರು ಪುತ್ಥಳಿ ಮಧ್ಯ ಭಾಗದಲ್ಲಿ ನಾಡಪ್ರಭು ಹಾಗೂ ಬೆಂಗಳೂರು ನಿಮಾತೃ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡರ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸುವುದು ಬಹುದಿನಗಳ ಬೇಡಿಕೆಯಾಗಿತ್ತು. ಅದರಂತೆ ನೆಹರು ಮತ್ತು ಅಂಬೇಡ್ಕರ್ ಪ್ರತಿಮೆಗಳಿರುವ ಮಧ್ಯ ಭಾಗದಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸಲಾಗುವುದು. ಇದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಮ್ಮತಿಸಿದ್ದಾರೆ ಎಂದರು.
ಬೆಂಗಳೂರಿಗೆ ದೇಶ-ವಿದೇಶಗಳಿಂದ ಲಕ್ಷಾಂತರ ಜನರು ಬರುತ್ತಾರೆ. ಕೆಂಪೇಗೌಡರ ಸಾಧನೆ ಏನೆಂಬುದು ವಿಶ್ವಕ್ಕೆ ತಿಳಿಯಬೇಕು. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡಲಿದೆ. ಅತ್ಯಂತ ಖುಷಿಯ ವಿಷಯವೆಂದರೆ ನಮ್ಮ ಸರ್ಕಾರದ ಅವಯಲ್ಲಿ ಈ ಕೆಲಸ ಮಾಡುತ್ತಿರುವುದು ನಮಗೆ ಹೆಮ್ಮೆ ಎಂದರು.
ಕೆಂಪೇಗೌಡರು ಒಂದು ಜಾತಿಗೆ ಸೀಮಿತವಾಗಿಲ್ಲ. ಒಂದು ನಗರವನ್ನು ಹೇಗೆ ಕಟ್ಟಬಹುದು ಎಂದು ವಿಶ್ವಕ್ಕೆ ತೋರಿಸಿಕೊಟ್ಟ ದೂರದೃಷ್ಟಿವುಳ್ಳ ನಾಯಕ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಅವರ ಪ್ರತಿಮೆಯನ್ನು ನಿರ್ಮಿಸಿದ್ದೇವೆ ಎಂದು ತಿಳಿಸಿದರು.
ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಸಂಬಂಸಿದಂತೆ ಬೆಂಗಳೂರಿಗೆ 11ರಂದು ಪ್ರಧಾನಿ ನರೇಂದ್ರಮೋದಿ ಬರುತ್ತಿದ್ದಾರೆ. ಇದು ಪವಿತ್ರ ಕಾರ್ಯಕ್ರಮ. ಪ್ರತಿ ಹಳ್ಳಿ, ಗ್ರಾಮ ಪಂಚಾಯತಿ ಯಲ್ಲಿ ಮೃತ್ತಿಕೆ ಸಂಗ್ರಹ ಮಾಡಲಾಗುತ್ತಿದೆ. ಹಳ್ಳಿಗಳಿಗೆ ಜಿಲ್ಲಾಕಾರಿ, ಎಸ್ಪಿ ಹೋಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರುವ ಚಾಲನೆ ಕೊಟ್ಟಿದ್ದಾರೆ ಎಂದರು.
ನವೆಂಬರ್ 8ರಂದು ಸಂಗ್ರಹ ಆದ ಮಣ್ಣನ್ನ ಡಿಸಿ ಕಚೇರಿಯಲ್ಲಿ ಇಡಬೇಕು. ಆ ಮಣ್ಣಿಗೆ ಗೌರವಯುತವಾಗಿ ಬೆಂಗಳೂರಿಗೆ ಕಳಿಸಲು ಸೂಚಿಸಲಾಗಿದೆ. ಮಣ್ಣು ಕೂಡ 9ರಂದು ಬೆಂಗಳೂರಿಗೆ ಬರಲಿದೆ. 27 ರಂದು ಮಣ್ಣು ಸಂಗ್ರಹ ಕೋಲಾರದಲ್ಲಿ ಮಾಡಲಿದ್ದೇವೆ. ಟೇಕಲ್ ಬ್ರಿಡ್ಜ್ ಬಳಿ ಉದ್ಘಾಟನೆ ಮಾಡಲಿದ್ದೇನೆ.
ಈಗಾಗಲೇ ನೋಡಲ್ ಅಕಾರಿಗಳಿಗೆ ಸೂಚಿಸಿದ್ದೇವೆ. ರೋಡ್ ಮ್ಯಾಪ್ ಮಾಡಲು ಸೂಚಿಸಿದ್ದೇವೆ. ಗುಜರಾತ್ ಸ್ಟ್ಯಾಚು ಆಫ್ ಯೂನಿಟಿ ತರ ಮಾಡುತ್ತಿದ್ದೇವೆ. ಇದು ಕೆಂಪೇಗೌಡರ ಬಗ್ಗೆ ಹೆಮ್ಮೆ ಪಡುವ ಕಾರ್ಯಕ್ರಮ. ಪ್ರತಿಯೊಬ್ಬರೂ ಕೆಂಪೇಗೌಡ ವಿಮಾನ ನಿಲ್ದಾಣ ಎನ್ನುತ್ತಾರೆ. ಆ ಕೆಂಪೇಗೌಡ ಯಾರು ಅಂತ ತಿಳಿಸುವ ಕೆಲಸ ಮಾಡುತ್ತಿದ್ದೇವೆ.
75 ವರ್ಷದಿಂದ ಯಾರೂ ಮಾಡಿರಲಿಲ್ಲ. ಈಗ ಬೊಮ್ಮಾಯಿ ಸರ್ಕಾರ ಮಾಡಲಿದ್ದೇವೆ. ಹಬ್ಬದ ವಾತಾವರಣ ಮಾಡುವ ವ್ಯವಸ್ಥೆ ಮಾಡಿದ್ದೇವೆ. ಬಹಳ ಜನ ಕೆಂಪೇಗೌಡ ಹೆಸರೇಳಿಕೊಂಡು ರಾಜಕಾರಣ ಮಾಡಿದ್ದಾರೆ. ಬರುವ ದೇಶ, ವಿದೇಶ ಜನಗಳಿಗೆ ಕೆಂಪೇಗೌಡ ಯಾರು ಎಂಬುದು ಗೊತ್ತಾಗಬೇಕು ಎಂದು ಪರೋಕ್ಷವಾಗಿ ಪ್ರತಿಪಕ್ಷಗಳಿಗೆ ಟಾಂಗ್ ನೀಡಿದರು.
ನಾಡಿನ ಗ್ರಾಮಸ್ಥರು, ಎಲ್ಲರೂ ಭಾಗಿಯಾಗಲು ಅವಕಾಶ ಸಿಕ್ಕಿದೆ. ಪ್ರತಿಯೊಂದು ಕಡೆ ಮೃತ್ತಿಕೆ ಸಂಗ್ರಹ ಮಾಡಲಾಗುತ್ತಿದೆ. 500 ವರ್ಷಗಳ ಹಿಂದೆ ಕೆಂಪೇಗೌಡರು ಕಟ್ಟಿದ ನಾಡು. ದೇಶದಲ್ಲೇ ನಂಬರ್ ಒನ್, ವಿಶ್ವದಲ್ಲಿ 42ನೇ ಸ್ಥಾನದಲ್ಲಿದೆ. ಬೊಮ್ಮಾಯಿ ನಾಯಕತ್ವದಲ್ಲಿ ನಮ್ಮ ಸರ್ಕಾರ ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿದೆ. ದೇಶಕ್ಕೆ, ವಿಶ್ವಕ್ಕೆ ಸಂದೇಶ ಕೊಡುವ ಕೆಲಸ ಆಗಲಿದೆ. ವಿಶ್ವದ ಗಮನ ಸೆಳೆಯುವ ಕೆಲಸ ಆಗಲಿದೆ. ಇತರ ಅಕಾರಿಗಳ ಜೊತೆ ಸಮಾಲೋಚನೆ ಮಾಡಿ ತಯಾರಿ ಮಾಡಲಾಗುತ್ತಿದೆ. ಯಾವ ಚ್ಯುತಿ ಇಲ್ಲದೆ ಕಾರ್ಯಕ್ರಮ ನಡೆಯಬೇಕು ಎಂದರು.
ಪ್ರಧಾನಿ ನರೇಂದ್ರಮೋದಿ ಬರುತ್ತಿರುವ ಹಿನ್ನೆಲೆ ಯಶಸ್ವಿಯಾಗಿ ಮಾಡುವ ತಯಾರಿ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಎಲ್ಲಾ ಕನ್ನಡಿಗರ ಹೆಮ್ಮೆಯ ಕಾರ್ಯಕ್ರಮ. ಎಲ್ಲರೂ ಸೇರಿ ಯಶಸ್ವಿಯಾಗಿ ಮಾಡಬೇಕು ಎಂದು ಅಶೋಕ್ ಕರೆ ನೀಡಿದರು.
ಎಸ್ಸಿ-ಎಸ್ಟಿ ಮೀಸಲಾತಿ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಕಂಪನಿ ನಾಟಕ ಕಂಪನಿ. ಈಗಾಗಲೇ ಪಾದಯಾತ್ರೆ ಭಾರತ ಚೋಡೋ ಪಾದಯಾತ್ರೆ ಮಾಡಿ. ನಾಟಕ ಕಂಪನಿ ಬಣ್ಣ ಬದಲಾಗಿದೆ. ಬಸ್ಕಿ ಹೊಡೆಯೋದು, ಕೈ ಹಿಡಿದು ಓಡೋದು ಮಾಡಿದ್ದಾರೆ. ಅವರದ್ದು ನಿಜವಾದ ನಾಟಕ ಕಂಪನಿ ಎಂದು ಟೀಕಿಸಿದರು.
ನಾಗಮೋಹನ್ ದಾಸ್ ಕಮಿಟಿ ಸಿದ್ದರಾಮಯ್ಯ ಮಾಡಿದ್ದಲ್ಲ. ಕುಮಾರಸ್ವಾಮಿ ಅವರು ಮಾಡಿದ್ದು. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯಗೆ ಆಗಲ್ಲ, ಎಣ್ಣೆ ಸಿಗೇಕಾಯಿ.15 ವರ್ಷಗಳಿಂದ ಅವರಿಗೆ ಪರಸ್ಪರ ಆಗಲ್ಲ. ತಮ್ಮ ಅವಯಲ್ಲಿ ಏನು ಮಾಡಿದರು ಎಂಬುದನ್ನು ಸಿದ್ದರಾಮಯ್ಯ ಹೇಳಬೇಕಲ್ಲವೇ? ಎಂದು ಪ್ರಶ್ನಿಸಿದರು.
ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸ ಮಾಡುತ್ತಿದ್ದೀರಾ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಮೀಸಲಾತಿ ಕೊಡುವ ಕೆಲಸ ಬಿಜೆಪಿ ಮಾಡಿ ತೋರಿಸಿದೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಕಾಂಗ್ರೆಸ್ ನಾಟಕದ ಕಂಪನಿ ಎಂದು ಟೀಕಿಸಿದರು.
ಕಾಂಗ್ರೆಸ್ನಿಂದ ಮತ್ತೊಂದು ಬಸ್ ಯಾತ್ರೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 80 ವರ್ಷದ ಬಳಿಕ ಖರ್ಗೆ ಕೂರಿಸಿದ್ದಾರೆ. ಖರ್ಗೆ ಹಿಂದೆ ಯಾರಿದ್ದಾರೆ ಸೋನಿಯಾ ಎಂಬುದು ಗೊತ್ತಿದೆ. ಅವರ ಸ್ಟೇರಿಂಗ್ ಯಾರ ಬಳಿ ಇದೆ. ಅವರದ್ದು ರಿಮೋಟ್ ಕಂಟ್ರೋಲ್ ಗಾಡಿ. ಸಾವಿಗೆ ಕೊನೆ ಮೊಳೆ ಹೊಡೀತಾರೆ ಎನ್ನುತ್ತಾರೆ. ಹಾಗೆ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಕೊನೆಯ ಮೊಳೆಯನ್ನು ಹೊಡೆಯುತ್ತಾರೆ ಎಂದು ವ್ಯಂಗ್ಯವಾಡಿದರು.