ಬೆಂಗಳೂರು : ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಉಂಟಾಗಿರುವ ಗಡಿ ವಿವಾದ ಸಂಬಂಧ ಮುಂದಿನ ವಾರ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಹೇಳಿದ್ದಾರೆ.
ಗಡಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕ್ ನಾಥ್ ಶಿಂಧೆ ಮುಂದಿಟ್ಟಿರುವ ಪ್ರಸ್ತಾವನೆಗೆ ಕುರಿತಾಗಿ, ಪ್ರತಿಕ್ರಿಯಿಸಿದ ಬೊಮ್ಮಯಿ ಅವರು, ಮುಂದಿನ ವಾರ ಸರ್ವಪಕ್ಷ ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆಯಲಾಗುವುದು ಎಂದು ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗಡಿ ವಿಧವಾದ ಅರ್ಜಿಗಳು ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಒಂದು ಕಡೆ ಮಹಾರಾಷ್ಟ್ರ ಸರ್ಕಾರವೇ ದಾವೆ ಹೂಡಿದ್ದು, ಮತ್ತೊಂದು ಕಡೆ ಮಾತುಕತೆಯ ಪ್ರಸ್ತಾವನೆ ಮುಂದಿಟ್ಡಿದೆ. ರಾಜ್ಯದ ನಿಲುವಿನ ಬಗ್ಗೆ ಸರ್ವಪಕ್ಷಗಳ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದರು.
ಸುಪ್ರೀಂಕೋರ್ಟ್ನಲ್ಲಿ ಅವರೇ (ಮಹಾರಾಷ್ಟ್ರ) ದಾವೆ ಹೂಡಿದ್ದಾರೆ. ನಾವು ನಮ್ಮ ವಾದ ಮಂಡನೆಗೆ ಸಮರ್ಥವಾಗಿ ತಯಾರಿ ಮಾಡಿಕೊಂಡಿದ್ದೇವೆ. ಈ ಮಧ್ಯೆ ಮಹಾರಾಷ್ಟ್ರ ಸಿಎಂ ಅವರು ಮಾತುಕತೆ ನಡೆಸುವ ಕುರಿತು ಹೇಳಿಕೆ ಕೊಟ್ಟಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ವಾದ ಮಾಡುವ ಬಗ್ಗೆ ಈ ಹಿಂದಿನ ಸರ್ವಪಕ್ಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ಹೇಳಿದರು.
ಸದ್ಯಕ್ಕೆ ನಮ್ಮ ಮುಂದೆ ಸುಪ್ರೀಂಕೋರ್ಟ್ ಮುಂದೆ ವಾದ ಮಂಡಿಸುವ ಉದ್ದೇಶ ಒಂದೇ ಇದೆ. ಇಡೀ ಗಡಿ ವಿಚಾರವೇ ಮುಗಿದು ಹೋಗಿದೆ. ಜತ್ ತಾಲೂಕು ಕರ್ನಾಟಕಕ್ಕೆ ಸೇರುವ ಬಗ್ಗೆ ಅಲ್ಲಿ ಗ್ರಾಮ ಪಂಚಾಯಿತಿಗಳೇ ನಿರ್ಣಯ ಮಾಡಿವೆ. ಇವೆಲ್ಲ ಸುಪ್ರೀಂಕೋರ್ಟ್ ಮುಂದೆ ವಾದ ಮಂಡನೆ ವೇಳೆ ಬರಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಮಾತುಕತೆಗೆ ಆಹ್ವಾನ ಮುಂಬೈ-ಹಲವು ದಶಕಗಳಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಕಗ್ಗಂಟಾಗಿಯೇ ಪರಿಣಮಿಸಿರುವ ಗಡಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ನಾವು ಬದ್ದ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಕರ್ನಾಟಕ ಸರ್ಕಾರ ಬಯಸಿದರೆ ಗಡಿ ವಿವಾದವನ್ನು ಮಾತುಕತೆಯಿಂದಲೇ ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲಾಗುವುದು. ಇದಕ್ಕೆ ಅಲ್ಲಿನ ಸರ್ಕಾರ ಯಾವ ನಿರ್ಧಾರಕ್ಕೆ ಬರುತ್ತದೆ ಎಂಬುದರ ಮೇಲೆ ಅವಲಂಬಿಸಿದೆ ಎಂದಿದ್ದಾರೆ.
ವಿಶೇಷವೆಂದರೆ ಗಡಿ ವಿವಾದವನ್ನು ಸುಪ್ರೀಂಕೋರ್ಟ್ ಅಂಗಳಕ್ಕೆ ಕೊಂಡೊಯ್ದು ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ಮಹಾರಾಷ್ಟ್ರ ಸರ್ಕಾರ ಈಗ ಮತ್ತೊಂದು ಅಸ್ತ್ರವನ್ನು ಕರ್ನಾಟಕದ ಮೇಲೆ ಬಿಟ್ಟಿದೆ.
ಎರಡು ರಾಜ್ಯಗಳ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ರಾಜ್ಯಪಾಲರು ಈಗಾಗಲೇ ಒಂದು ಬಾರಿ ಚರ್ಚೆ ನಡೆಸಿದ್ದಾರೆ. ಅದೇ ರೀತಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಒಂದೆಡೆ ಕುಳಿತು ಮಾತುಕತೆ ಮೂಲಕ ಏಕೆ ಚರ್ಚಿಸಬಾರದು. ಚೆಂಡು ಕರ್ನಾಟಕದ ಅಂಗಳದಲ್ಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿರುವ ಮರಾಠಿಗರ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕೆಂದು ನಾವು ಸುಪ್ರೀಂಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸಿದ್ದೇವೆ. ಅಲ್ಲಿ ನಮಗೆ ಮುನ್ನಡೆಯಾಗುತ್ತದೆ ಎಂಬುದು ಮುಖ್ಯವಲ್ಲ. ವಿವಾದವು ಸರ್ವ ಸಮ್ಮತಿಯ ಮೂಲಕ ಪರಿಹರಿಸಬೇಕು ಎಂಬುದು ನಮ್ಮ ನಿಲುವು ಎಂದಿದ್ದಾರೆ.
ನಮ್ಮ ನಿರ್ಧಾರದ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಏನೆಂಬುದು ಗೊತ್ತಿಲ್ಲ. ಆದರೆ ಮರಾಠಿಗರ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕೆಂಬ ಹೋರಾಟ ನಿಲ್ಲುವುದಿಲ್ಲ. ಕರ್ನಾಟಕ ಸರ್ಕಾರದ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಶಿಂಧೆ ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿರುವವರಿಗೆ ಪಿಂಚಣಿ ಹೆಚ್ಚಿಸಿದ್ದರಲ್ಲಿ ತಪ್ಪೇನಿಲ್ಲ. ಮೊದಲು ಹಿಂದಿನ ಸರ್ಕಾರಗಳು 10 ಸಾವಿರ ರೂ. ನೀಡುತ್ತಿದ್ದವು. ನಾವು 20 ಸಾವಿರ ರೂ.ಗೆ ಏರಿಕೆ ಮಾಡಿದ್ದೇವೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಮುಖ್ಯಮಂತ್ರಿ ಧರ್ಮಾದಾಯ ಸಹಾಯ ನಿ ಯೋಜನೆಯ ಲಾಭ ಬಂದ್ ಆಗಿತ್ತು. ಅದನ್ನೂ ಮತ್ತೆ ಶುರು ಮಾಡಿದ್ದೇವೆ. ಗಡಿಭಾಗದ ಮರಾಠಿಗರಿಗೆ ಆರೋಗ್ಯ ಸೌಲಭ್ಯ ನೀಡಲು ಮಹಾತ್ಮ ಜ್ಯೋತಿಬಾ ಪುಲೆ ಯೋಜನೆ ನೀಡಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ
ಗಡಿ ಭಾಗದ ಮರಾಠಿಗರಿಗೆ ಮಹಾರಾಷ್ಟ್ರ ಸರ್ಕಾರದಿಂದ ಸಿಗುವ ಯೋಜನೆಗಳ ಲಾಭ ಹೆಚ್ಚಿಸಿದ್ದೇವೆ. ಮತ್ಯಾರೋ ವಾದ ಸೃಷ್ಟಿಸಿ ಮತ್ತಷ್ಟು ಜಟಿಲಗೊಳಿಸಬಾರದು. ನಾವು ಸಭೆ ನಡೆಸಿದಾಗ ಸಾಕಷ್ಟು ಸಲಹೆಗಳು ಬಂದಿವೆ ಎಂದು ಅವರು ಹೇಳಿದ್ದಾರೆ.