ವಿವಿಧ ರಾಜ್ಯಗಳಿಗೆ ಕೇಂದ್ರದಿಂದ ೧೭,೦೦೦ ಕೋಟಿ ರೂ.ಬಿಡುಗಡೆ
ಹೊಸದಿಲ್ಲಿ: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ೧೭,೦೦೦ ಕೋಟಿ ರೂ. ಜಿಎಸ್ಟಿ ಪರಿಹಾರ ಬಾಕಿಯನ್ನು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ ೧,೯೧೫ ಕೋಟಿ ರೂ. ದೊರೆತಿದೆ.
ಇದರೊಂದಿಗೆ ಈ ಆರ್ಥಿಕ ವರ್ಷದಲ್ಲಿ ಇದುವರೆಗೆ ಬಿಡುಗಡೆಯಾದ ಒಟ್ಟು ಮೊತ್ತವು ೧.೧೫ ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಈ ಪರಿಹಾರ ಬಿಡುಗಡೆಯೊMದಿಗೆ ಕೇಂದ್ರ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷ ಮಾರ್ಚ್ ಅಂತ್ಯದವರೆಗೆ ಸಂಗ್ರಹಿಸಬಹುದಾದ ಸಂಪೂರ್ಣ ಸೆಸ್ ಮೊತ್ತವನ್ನು ಮುಂಚಿತವಾಗಿ ಬಿಡುಗಡೆ ಮಾಡಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದರಲ್ಲಿ ಈ ಬಾರಿಯ ಜಿಎಸ್ಟಿ ಸಂಗ್ರಹದಲ್ಲಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರಕ್ಕೆ ೨೦೮೧ ಕೋಟಿ ರೂ, ಸಿಕ್ಕಿದ್ದರೆ, ನಂತರ ಸ್ಥಾನದಲ್ಲಿರುವ ರ್ನಾಟಕಕ್ಕೆ ೧,೯೧೫ ಕೋಟಿ ರೂ. ನೀಡಿದೆ.
ಜುಲೈ ೧, ೨೦೧೭ ರಿಂದ ಜಾರಿಗೆ ಬರುವಂತೆ ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪರಿಚಯಿಸಲಾಯಿತು ಮತ್ತು ಐದು ವರ್ಷಗಳ ಅವಧಿಗೆ ಜಿಎಸ್ಟಿ ಅನುಷ್ಠಾನದ ಖಾತೆಯಲ್ಲಿ ಉಂಟಾಗುವ ಯಾವುದೇ ಆದಾಯದ ನಷ್ಟಕ್ಕೆ ಪರಿಹಾರದ ಭರವಸೆಯನ್ನು ರಾಜ್ಯಗಳಿಗೆ ಭರವಸೆ ನೀಡಲಾಗಿತ್ತು. ರಾಜ್ಯಗಳಿಗೆ ಪರಿಹಾರವನ್ನು ಒದಗಿಸಲು ಕೆಲವು ಸರಕುಗಳ ಮೇಲೆ ಸೆಸ್ ವಿಧಿಸಲಾಗುತ್ತದೆ ಮತ್ತು ಸಂಗ್ರಹಿಸಿದ ಸೆಸ್ ಮೊತ್ತವನ್ನು ಪರಿಹಾರ ನಿಧಿಗೆ ಜಮಾ ಮಾಡಲಾಗುತ್ತದೆ.
೨೦೨೨ ಅಕ್ಟೋಬರ್ ವರೆಗಿನ ಒಟ್ಟು ಸೆಸ್ ಸಂಗ್ರಹವು ಕೇವಲ ೭೨,೧೪೭ ಕೋಟಿ ರೂಪಾಯಿಗಳಾಗಿದ್ದು, ಉಳಿದ ೪೩,೫೧೫ ಕೋಟಿ ರೂಪಾಯಿಗಳನ್ನು ಕೇಂದ್ರವು ತನ್ನದೇ ಆದ ಸಂಪನ್ಮೂಲಗಳಿಂದ ಬಿಡುಗಡೆ ಮಾಡುತ್ತಿದೆ ಎಂದು ಸಚಿವಾಲಯ ತಿಳಿಸಿದೆ.