ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ಇಂದು ರೈತಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಜೊತೆಗೆ ಕನ್ನಡ ಪರ ಸಂಘಟನೆಗಳು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದರು. ಈ ಹಿನ್ನಲೆ ಸಿಎಂ ಸಿದ್ದರಾಮಯ್ಯ ನಿವಾಸದ ಬಳಿ ಹೆಚ್ಚಿನ ಬಿಗಿ ಪೊಲೀಸ್ ಭದ್ರತೆ ಅಳವಡಿಸಲಾಗಿದೆ. ಸಿಎಂ ನಿವಾಸ ಕಾವೇರಿ ಹಾಗೂ ಕಚೇರಿ ಕೃಷ್ಣಾ ಬಳಿ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿದ್ದು, 3 ಕೆಎಸ್ ಆರ್ ಪಿ ತುಕಡಿಗಳು, ವಾಟರ್ ಜೆಟ್ ವಾಹನ ಸೇರಿ 30 ಹೆಚ್ಚುವರಿ ಪೊಲೀಸ್ ನಿಯೋಜಿಸಲಾಗಿದೆ.
ಬಂದ್ ಹಿನ್ನಲೆ ಸಿಎಂ ಮನೆ ಮುಂದೆ ಭದ್ರತೆ ಅಳವಡಿಸಲಾಗಿತ್ತು. ಆದರೆ, ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸಿಎಂ ನಿವಾಸ ಮತ್ತು ಗೃಹ ಕಛೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ ದಿಢೀರ್ ಪೊಲೀಸ್ ಭದ್ರತೆಯನ್ನು ಅಧಿಕಾರಿಗಳು ಹೆಚ್ಚಿಸಿದ್ದಾರೆ. ಜೊತೆಗೆ ಸಿಎಂ ನಿವಾಸಕ್ಕೆ ಡಿಜಿಪಿ ಅಲೋಕ್ ಮೋಹನ್ ಮತ್ತು ಪೊಲೀಸ್ ಆಯುಕ್ತ ದಯಾನಂದ ಆಗಮಿಸಿ, ಬಂದ್ ಪರಿಸ್ಥಿತಿ ಬಗ್ಗೆ ಹಾಗೂ ಕಾನೂನು ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಬಂದ್ ಹಿನ್ನಲೆ ಕಾನೂನು ಸುವ್ಯವಸ್ಥೆಯ ಕಡೆ ಹೆಚ್ಚು ಗಮನ ನೀಡುವಂತೆ ಸೂಚಿಸಿದ್ದು, ಪ್ರತಿ ಜಿಲ್ಲೆಯ ಬಂದ್ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಇನ್ನು ಕಾವೇರಿ ಕಿಚ್ಚು ಬೆಂಗಳೂರಿನ ಕೆಪಿಸಿಸಿ ಕಚೇರಿಗೂ ತಟ್ಟಿದೆ. ಹೌದು, ಬೈಕ್ ರ್ಯಾಲಿ ಮೂಲಕ ತೆರಳುತ್ತಿದ್ದ ಕನ್ನಡಪರ ಹೋರಾಟಗಾರು, ಈ ವೇಳೆ ಕೆಪಿಸಿಸಿ ಕಚೇರಿ ಎದುರು ಬೈಕ್ ನಿಲ್ಲಿಸಿ ಕನ್ನಡಪರ ಸಂಘಟನೆಗಳು ಘೋಷಣೆ ಕೂಗಿ ಪ್ರತಿಭಟನೆ ನಡೆಸಿವೆ.ಕಾವೇರಿ ನಮ್ಮದು ಎಂದು ಘೋಷಣೆ ಕೂಗುವ ಮೂಲಕ ಸರ್ಕಾರಕ್ಕೆ ದಿಕ್ಕಾರ ಎಂದು ಕೂಗಿದ್ದಾರೆ.