ಬೆಂಗಳೂರು– : ಕಾವೇರಿಗೆ ಅಡ್ಡಲಾಗಿ ತಮಿಳುನಾಡು ಸರ್ಕಾರ ನಿರ್ಮಿಸುತ್ತಿರುವ ಅಣೆಕಟ್ಟು ಯೋಜನೆಗೆ ಕರ್ನಾಟಕ ಸರ್ಕಾರ ಆಕ್ಷೇಪಣೆ ಸಲ್ಲಿಸದೆ ಇರುವುದರಿಂದ ಮುಂದಿನ ದಿನಗಳಲ್ಲಿ ನೀರಾವರಿ ವಿಷಯದಲ್ಲಿ ಭಾರೀ ಅನ್ಯಾಯ ಅನುಭವಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರರಾದ ಲಕ್ಷ್ಮಣ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನಸಂಕಲ್ಪ ಯಾತ್ರೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಕಾಂಗ್ರೆಸ್ ನಾಯಕರನ್ನು ಟೀಕಿಸುವುದರಲ್ಲೇ ಅವರ ಸಮಯ ವ್ಯರ್ಥವಾಗುತ್ತಿದೆ. ರಾಜ್ಯ ಶ್ರೇಯೋಭಿವೃದ್ಧಿಗಿಂತ ಅವರಿಗೆ ಪಕ್ಷದ ರಾಜಕಾರಣವೇ ಮುಖ್ಯವಾಗಿದೆ ಎಂದು ಆರೋಪಿಸಿದರು.
ಹೊಗೆನಕಲ್ಲಿನಲ್ಲಿ ತಮಿಳುನಾಡು ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ 8500 ಕೋಟಿ ರೂ. ವೆಚ್ಚದ ನೀರಾವರಿ ಯೋಜನೆಗಳಿಗೆ 2020ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಯೋಜನೆಗೆ ಕರ್ನಾಟಕ ಸರ್ಕಾರ ಆಕ್ಷೇಪಣೆ ಸಲ್ಲಿಸಿತ್ತು. ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು, ಕಳೆದ ಆಗಸ್ಟ್ನಲ್ಲಿ ಯೋಜನೆಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಮೂರ್ತಿಗಳು ಕರ್ನಾಟಕಕ್ಕೆ 15 ದಿನಗಳ ಕಾಲಾವಕಾಶ ನೀಡಿದ್ದರು. ಆದರೆ, ನಮ್ಮ ಸರ್ಕಾರ ಆಕ್ಷೇಪಣೆ ಸಲ್ಲಿಸಿಲ್ಲ.
ಹೀಗಾಗಿ ಕರ್ನಾಟಕ ಸರ್ಕಾರದಿಂದ ಯೋಜನೆಗೆ ಆಕ್ಷೇಪ ಇಲ್ಲ. ಈ ಮೊದಲು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಎಂದು ಕಳೆದ ಎರಡು ದಿನಗಳ ಹಿಂದೆ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ಗೆ ಮನವಿ ಮಾಡಿದೆ.
ಬಹುತೇಕ ಈ ಮನವಿ ಆಧರಿಸಿ ಸುಪ್ರೀಂಕೋರ್ಟ್ ರಾಜ್ಯದ ಅರ್ಜಿಯನ್ನು ತಿರಸ್ಕರಿಸುವ ಸಾಧ್ಯತೆ ಇದೆ. ಇದು ನಡೆದಿದ್ದೇ ಆದರೆ ಕರ್ನಾಟಕಕ್ಕೆ ಭಾರೀ ಅನ್ಯಾಯವಾಗಲಿದೆ ಎಂದು ಅವರು ಎಚ್ಚರಿಸಿದರು.
ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ ಎರಡು ದಿನಗಳ ಕಳೆದರೂ ರಾಜ್ಯ ಮುಖ್ಯಮಂತ್ರಿಯಾಗಲಿ ಜಲಸಂಪನ್ಮೂಲ ಸಚಿವರಾಗಲಿ ಪ್ರತಿಕ್ರಿಯೆ ನೀಡಿಲ್ಲ. ಕೇವಲ ಭಾವನಾತ್ಮಕ ರಾಜಕಾರಣದಲ್ಲೇ ಮುಳುಗಿ ಹೋಗಿದ್ದಾರೆ. ಇವರಿಗೆ ಚುನಾವಣೆಯೇ ಮುಖ್ಯ ಎಂದು ಆರೋಪಿಸಿದರು.
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸಮತೋಲನ ಅಣೆಕಟ್ಟು ನಿರ್ಮಿಸಲು ಸಿದ್ದರಾಮಯ್ಯ ಸರ್ಕಾರ ಯೋಜನೆ ರೂಪಿಸಿತ್ತು. ಈ ಯೋಜನೆ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಮಾತ್ರ ಸೀಮಿತವಾಗಿತ್ತು.
ಅಣೆಕಟ್ಟು ನಿರ್ಮಾಣದಿಂದ ಶೇ.96ರಷ್ಟು ಲಾಭ ತಮಿಳುನಾಡಿಗೆ ಆಗುತ್ತಿತ್ತು. ರಾಜ್ಯಕ್ಕೆ ಶೇ.4ರಷ್ಟು ಮಾತ್ರ ಪ್ರಯೋಜನ ಸಿಗುತ್ತದೆ. ಆದರೆ, ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯುವ ಸಾಧ್ಯತೆ ಇದೆ. ಈ ಯೋಜನೆಗೆ ತಮಿಳುನಾಡು ಅಡ್ಡಗಾಲಾಗಿದೆ. ಪದೇ ಪದೇ ಸುಪ್ರೀಂಕೋರ್ಟ್ ಮೊರೆಯೋಗುತ್ತಿದೆ.
ಕೇಂದ್ರ ಜಲಶಕ್ತಿ ಸಚಿವಾಲಯದ ಅೀನದಲ್ಲಿ ಬರುವ ನೀರು ನಿರ್ವಹಣಾ ಸಮಿತಿ ಸಭೆಯಲ್ಲಿ ಮೇಕೆದಾಟು ಅಣೆಕಟ್ಟಿನ ವಿಚಾರ 17 ಬಾರಿ ವಿಷಯ ಪಟ್ಟಿಯಲ್ಲಿ ಸೇರ್ಪಡೆಯಾಗಿ ಚರ್ಚೆಯಾಗದೆ ಮುಂದೂಡಲ್ಪಟ್ಟಿದೆ. ಇದಕ್ಕೆ ಕೇಂದ್ರ ಜಲಶಕ್ತಿ ಸಚಿವ ಬೈರೋನ್ಸಿಂಗ್ ಶೇಖಾವತ್ ಅವರ ಹಸ್ತಕ್ಷೇಪವಿದೆ. ತಮಿಳುನಾಡಿನ ಬಿಜೆಪಿ ನಾಯಕರ ಚಿತಾವಣೆ ಎಂದು ಆರೋಪಿಸಿದರು.
ಹೊಗೆನಕಲ್ಲು ಯೋಜನೆಗೆ ನಾವು ಪ್ರತಿರೋಧ ವ್ಯಕ್ತಪಡಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದೇವೆ. ಮತ್ತೊಂದೆಡೆ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಹೇಳಿದರು.
ಈ ಹಿಂದೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ನಡೆಸಿತ್ತು. ಆ ವೇಳೆ ಮುಖ್ಯಮಂತ್ರಿಯವರು ಯೋಜನೆಗಾಗಿ ಬಜೆಟ್ನಲ್ಲಿ ಒಂದು ಸಾವಿರ ಕೋಟಿ ಮೀಸಲಿಡುವುದಾಗಿ ಹೇಳಿದ್ದರು. ಬಳಿಕ ಸರ್ಕಾರವೂ ಯೋಜನೆ ಮರೆತಿದೆ.
ಕಾಂಗ್ರೆಸಿಗರು ಯೋಜನೆ ಪ್ರಸ್ತಾಪಿಸುತ್ತಿಲ್ಲ. ಇದು ಬೆಂಗಳೂರು ಜನರ ಕುಡಿಯುವ ನೀರಿನ ಚಾರವಾಗಿರುವುದರಿಂದ ಬೆಂಗಳೂರಿಗರು ದಂಗೆ ಹೇಳುವ ಅಗತ್ಯವಿದೆ ಎಂದು ತಿಳಿಸಿದರು.
2021ರ ಜೂನ್ನಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮಿಳುನಾಡಿನ ಸಿಎಂ ಯಡಪಾಡಿ ಪಳನಿ ಸ್ವಾಮಿ ಅವರಿಗೆ ಪತ್ರ ಬರೆದು ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಇದು ಒಂದು ರೀತಿಯ ಅಪರಾಧ. ಸುಪ್ರೀಂಕೋರ್ಟ್ 2018ರ ಫೆಬ್ರವರಿ 16ರಂದು ನೀಡಿರುವ ಅಂತಿಮ ತೀರ್ಪಿನಲ್ಲಿ ಹಂಚಿಕೆಯಾಗಿರುವ ನೀರನ್ನು ಯಾರು ಯಾವ ರೀತಿ ಬೇಕಾದರೂ ಬಳಸಿಕೊಳ್ಳಬಹುದು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಆದರೂ ನಮ್ಮ ಸರ್ಕಾರ ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಕೇಳಿರುವುದರ ಹಿಂದೆ ಷಡ್ಯಂತ್ರವಿದೆ ಎಂದು ಲಕ್ಷ್ಮಣ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿದ್ದ ಮತ್ತೊಬ್ಬ ವಕ್ತಾರ ರಮೇಶ್ ಬಾಬು ಅವರು ತಮಿಳುನಾಡಿನ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಡಿಎಂಕೆ ಮತ್ತು ಬಿಜೆಪಿ ನಡುವೆ ಮೈತ್ರಿಯ ರಾಜಕಾರಣವಿತ್ತು. ಚುನಾವಣೆ ಮೈತ್ರಿಯ ಪ್ರಸ್ತಾಪಗಳು ನಡೆಯುತ್ತಿದ್ದವು. ಹೀಗಾಗಿ ಅಲ್ಲಿನ ಬಿಜೆಪಿಗೆ ಅನುಕೂಲ ಮಾಡಿಕೊಡಲು ಯಡಿಯೂರಪ್ಪ ಪತ್ರ ಬರೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಮತದಾರರ ಪಟ್ಟಿ ಅಕ್ರಮದಲ್ಲಿ ಕೆಳಹಂತದ ಅಕಾರಿಗಳನ್ನು ದಂಡಿಸುವ ಬದಲು ಜಿಲ್ಲಾ ಚುನಾವಣಾ ಅಕಾರಿಯಾಗಿರುವ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ಗಿರಿನಾಥ್ ಅವರನ್ನು ಅಮಾನತುಗೊಳಿಸಬೇಕೆಂದು ರಮೇಶ್ಬಾಬು ಒತ್ತಾಯಿಸಿದರು.
ಜನಪ್ರಾತಿನಿಧ್ಯ ಕಾಯ್ದೆ ಪ್ರಕಾರ ಮತದಾರರ ಪಟ್ಟಿಯ ಅಕ್ರಮಗಳಿಗೆ ಜಿಲ್ಲಾ ಚುನಾವಣಾಕಾರಿಯೇ ಹೊಣೆ. ಹೀಗಾಗಿ ಕೂಡಲೇ ಅವರನ್ನು ಪ್ರಸ್ತುತ ಹುದ್ದೆಯ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು. ಐಎಎಸ್ ಅಕಾರಿಯ ಅಮಾನತಿಗೆ ಕೇಂದ್ರ ಚುನಾವಣಾ ಆಯೋಗವೇ ಶಿಫಾರಸು ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ದೂರು ನೀಡುವ ಮೊದಲೇ ಬಿಜೆಪಿಯಿಂದ ದೂರು ನೀಡಲಾಗಿತ್ತು ಎಂದು ಬಿಂಬಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಹಾಗೂ ಜನರ ದಿಕ್ಕು ತಪ್ಪಿಸುವ ಹುನ್ನಾರ. ಕೇಂದ್ರ ಚುನಾವಣಾ ಆಯೋಗಕ್ಕೆ ನ.22ರಂದೇ ಲಿಖಿತ ದೂರು ಸಲ್ಲಿಸಿದ್ದೆ ಎಂದರು.