ಉಡುಪಿ : ಇಲ್ಲೊಬ್ಬರು 80 ವರ್ಷದ ಅಜ್ಜಿ ಕೋರ್ಟಿನಲ್ಲಿ ಸಾಕ್ಷಿ ಹೇಳುವ ಸಲುವಾಗಿ ನ್ಯಾಯಾಲಯಕ್ಕೆ ಬಂದಿದ್ದರು ಆದರೆ ಆಕೆಯು ನಡೆಯಲಾರದ ಸ್ಥಿತಿಯಲ್ಲಿದ್ದುದರಿಂದ ಆಕೆಯು ಕುಳಿತಿದ್ದ ರಿಕ್ಷಾದ ಬಳಿಯೇ ಬಂದು ಪ್ರಕರಣಕ್ಕೆ ಸಂಬಂಧಿಸಿದ ಹೇಳಿಕೆಯನ್ನು ನ್ಯಾಯಾಧೀಶರು ಆಲಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿರುವ ಮಾನವೀಯ ಘಟನೆ ಉಡುಪಿಯಲ್ಲಿ ನಡೆದಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೆಶನದ ಮೇರೆಗೆ ಜೂನ್ 25ರಂದು ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ‘ರಾಷ್ಟ್ರೀಯ ಲೋಕ್ ಅದಾಲತ್’ನ್ನು ಆಯೋಜಿಸಲಾಗಿತ್ತು. ಅದರಂತೆ ಅಜ್ಜಿಯು 2011ರ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕ್ ಅದಾಲತ್ನಲ್ಲಿ ಭಾಗಿಯಾಗಲು ನ್ಯಾಯಾಲಕ್ಕೆ ಬಂದಿದ್ದರು, ಅಜ್ಜಿ ದೇವಕಿ ಶೆಡ್ತಿ ಪರವಾಗಿ ಅವರ ಮಗಳು ವಾದವನ್ನು ಆಲಿಸಲು ನ್ಯಾಯಾಲಯದ ಒಳಗೆ ಹೋಗಿದ್ದರು.
ವಿಷಯ ತಿಳಿದ ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಜೀತು ಆರ್ ಎಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಶರ್ಮಿಳಾ ಎಸ್ ಮತ್ತು ನ್ಯಾಯವಾದಿ ಮಿತೇಶ್ ಶೆಟ್ಟಿ ಹಾಗೂ ಎರಡು ಕಡೆಯ ವಕೀಲರುಗಳು, ದೇವಕಿ ಶೆಡ್ತಿ ಕುಳಿತಿದ್ದ ರಿಕ್ಷಾದ ಬಳಿ ಬಂದು ಅವರ ಹೇಳಿಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.
ನ್ಯಾಯಾಧೀಶರ ಈ ಮಾನವೀಯ ನಡೆಗೆ ರಾಜ್ಯದಾದ್ಯಂತ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.