ಬೆಳಗಾವಿ: ಎಚ್.ಡಿ.ಕುಮಾರಸ್ವಾಮಿ ಅವರು ನಮಗೆ ಬೆಂಬಲ ಕೊಟ್ಟರೆ ಒಳ್ಳೆಯದಾಗುತ್ತೆ. ಒಳ್ಳೆಯ ಸರ್ಕಾರ ಮಾಡಲು ಒಳ್ಳೆಯದಾಗುತ್ತದೆ. ಎಚ್ಡಿ ಕುಮಾರಸ್ವಾಮಿ ಅವರದ್ದು, ಎಚ್.ಡಿ ದೇವೇಗೌಡರದ್ದು ಸಲಹೆ ಇದ್ದರೆ ಒಳ್ಳೆಯದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮೈತ್ರಿಗೆ ನಾವು ಸಿದ್ಧ ಎಂಬ ಎಚ್ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಲೆಕ್ಕದಲ್ಲಿ ಬಹುಮತದ ಕೊರತೆ ಆಗಲ್ಲ. ಆದರೂ ಎಚ್.ಡಿ ಕುಮಾರಸ್ವಾಮಿ ನಮಗೆ ಬೆಂಬಲ ನೀಡಿದರೆ ಒಳ್ಳೆಯದು. ಬಿಜೆಪಿಯವರು ಆಪರೇಷನ್ ಕಮಲ ಮಾಡೋದು ಹಗಲುಗನಸು, ಅತಂತ್ರ ಫಲಿತಾಂಶ ನೂರಕ್ಕೆ ನೂರರಷ್ಟು ಬರಲ್ಲ. ಅತಂತ್ರ ಸರ್ಕಾರ ಬಂದರೆ ಮೈತ್ರಿಗೆ ಸಿದ್ಧ ಎಂದು ಹೇಳಿದ್ದಾರೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆಗಿಯೇ ಆಗುತ್ತದೆ. ಬಿಜೆಪಿ ವಿರೋಧಿ ಅಲೆ, ಬೆಲೆ ಏರಿಕೆ, 4 ವರ್ಷದಿಂದ ಯಾವುದೇ ಅಭಿವೃದ್ಧಿ ಯೋಜನೆಗಳಿಲ್ಲ. ವಿಶೇಷವಾಗಿ 40 ಪರ್ಸೆಂಟ್ ಸರ್ಕಾರ ಇಡೀ ವಿಶ್ವದಲ್ಲೇ ಫೇಮಸ್ ಆಯ್ತು. ರಾಷ್ಟ್ರೀಯ ವಾಹಿನಿಗಳಲ್ಲೂ ಸಹ 40 ಪರ್ಸೆಂಟ್ ಸರ್ಕಾರ ಅಂತಾ ಹೇಳುತ್ತಾರೆ. ನಮ್ಮ ನಾಯಕರು ಕಲೆಕ್ಟೀವ್ ಆಗಿ ಪ್ರಚಾರ ಮಾಡಿದ್ರು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಎಲ್ಲರೂ ತಮ್ಮ ತಮ್ಮ ಭಾಗದಲ್ಲಿ ಒಳ್ಳೆಯ ಪ್ರಚಾರ ಮಾಡಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಪ್ರಚಾರ ವಿಚಾರಕ್ಕೆ ಪ್ರತಿಕ್ರಿಯಿಸಿ, ಕರ್ನಾಟಕದ್ದು ಬೇರೆ, ಲೋಕಸಭಾ ಚುನಾವಣೆ ಬೇರೆ, ಜನ ಅಭಿವೃದ್ಧಿ ನೋಡ್ತಾರೆ, ಬೆಲೆ ಏರಿಕೆ ಆಗಲು ಮೋದಿ ಕಾರಣ. ಹೀಗಾಗಿ ಮೋದಿಯವರ ಭಾಷಣ ಕರ್ನಾಟಕ ಜನ ತಿರಸ್ಕಾರ ಮಾಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪರ ಇಡೀ ರಾಷ್ಟ್ರ, ರಾಜ್ಯದ ಸರ್ವೇ ಏಜೆನ್ಸಿ, ಪೊಲೀಸ್ ಗುಪ್ತಚರ, ನಮ್ಮದೇ ಪಕ್ಷದ ವರದಿ ಇವೆ. ನಾವು ಮುಂಚೆಯೇ ಹೇಳಿದ್ವಿ 120 ಗೆಲ್ಲುತ್ತೀವಿ ಎಂದು. ಅದೇ ವರದಿಯನ್ನು ಎಕ್ಸಿಟ್ ಪೋಲ್ಗಳು ಕೊಟ್ಟಿವೆ. ಬೆಳಗಾವಿ ಜಿಲ್ಲೆಯಲ್ಲಿ 10 ಕ್ಷೇತ್ರ ಗೆಲ್ಲುತ್ತೇವೆ ಎಂದಿದ್ದೇವು. ಅದರಂತೆ, 10 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದರು.
ಕಡಿಮೆ ಕ್ಷೇತ್ರ ಬಂದರೂ ಸರ್ಕಾರ ಮಾಡ್ತೀವಿ ಎಂಬ ಆರ್.ಅಶೋಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಪರೇಷನ್ ಕಮಲ ಮಾಡಲು ಆಗಲ್ಲ, ಬಹಳ ಗ್ಯಾಪ್ ಇದೆ. ಸರ್ಕಾರ ಮಾಡಲು 30 ರಿಂದ 40 ಸೀಟ್ ಅವರಿಗೆ ಬೇಕಾಗುತ್ತೆ, ಅದು ಅಸಾಧ್ಯ. ವಿಪಕ್ಷದಲ್ಲಿ ಕುಳಿತು ಒಳ್ಳೆಯ ಸಲಹೆ ನೀಡುವುದು ಸೂಕ್ತ. ಬಿಜೆಪಿ 75 ರಿಂದ 80 ಕ್ಷೇತ್ರ ಮಾತ್ರ ಬರುತ್ತೆ. ಅತಂತ್ರ ಫಲಿತಾಂಶ ನೂರಕ್ಕೆ ನೂರು ಬರಲ್ಲ. ಕಾಂಗ್ರೆಸ್ ಸರ್ಕಾರ ರಚನೆ ಆಗಿಯೇ ಆಗುತ್ತೆ ಎಂದು ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಪಾತ್ರ ನಿರ್ಣಾಯಕ ಆಗಬಹುದು ಹೊರತು ಬಿಜೆಪಿ ಪಾತ್ರ ನಿರ್ಣಾಯಕ ಆಗಲ್ಲ. ಪ್ರತಿ ಬಾರಿ ಆಪರೇಷನ್ ಕಮಲ ಸಕ್ಸಸ್ ಆಗಲ್ಲ. ಒಂದ್ಸಾರಿ ಮಾಡ್ತಾರೆ, ಎರಡು ಸಾರಿ ಮಾಡ್ತಾರೆ, ಪ್ರತಿ ಸಾರಿ ಆಗಲ್ಲ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದರು.
ಜೆಡಿಎಸ್, ಬಿಜೆಪಿ ಒಳಒಪ್ಪಂದ ಆಗಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನೋಡಬೇಕು ಅದನ್ನ ಹೇಳೋದಕ್ಕೆ ಆಗಲ್ಲ, ಅವೆಲ್ಲ ಗುಪ್ತವಾಗಿರುವ ವಿಚಾರ, ಬಹಿರಂಗವಾಗಿ ಇರಲ್ಲ. ಅವರು ಏನೇ ಮಾಡಿದರೂ ಕರ್ನಾಟಕ ಜನ ಕಾಂಗ್ರೆಸ್ ಪರ ಇದ್ದಾರೆ ಎಂಬುದು ಸ್ಪಷ್ಟ ಎಂದು ಹೇಳಿದರು.