ಬೆಂಗಳೂರು : ನನ್ನನ್ನು ಎಲ್ಲರೂ ಎರಡನೇ ದೇವರಾಜ ಅರಸು ಅಂತಾರೆ. ಆದರೆ, ದೇವರಾಜ ಅರಸು ದೇವರಾಜ ಅರಸುನೇ ಸಿದ್ದರಾಮಯ್ಯ ಸಿದ್ದರಾಮಯ್ಯನೇ. ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇತ್ತೀಚೆಗೆ ಪಕ್ಷದ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಪರೋಕ್ಷವಾಗಿ ದೇವರಾಜ ಅರಸು ಅವರನ್ನು ಪ್ರಸ್ತಾಪಿಸಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದು ಹೇಳಿಕೆಗೆ ಮಹತ್ವ ಬಂದಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾನು ಅರಸು ಆಗಲು ಸಾಧ್ಯವಿಲ್ಲ. ಅರಸು, ಇಂದಿರಾಗಾಂಧಿ, ನೆಹರೂ ಎಲ್ಲರೂ ಭಿನ್ನವಾಗಿದ್ದರು. ಆದರೆ ಇವರೆಲ್ಲರ ಸಾಮಾಜಿಕ ಕೊಡುಗೆಗಳು ಅಪಾರ. ಯಾರ ಕೊಡುಗೆಗಳನ್ನೂ ಅಲ್ಲಗಳೆಯಲಾಗದು. ಒಬ್ಬರು ಇನ್ನೊಬ್ಬರಾಗಲು ಸಾಧ್ಯವಿಲ್ಲ. ಹಾಗೆಯೇ ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ ಎಂದರು.
ನಾವು ರೂಪಿಸುವ ಕಾಳಜಿ ಮತ್ತು ಕಾರ್ಯಕ್ರಮಗಳಲ್ಲಿ ಸಾಮಾಜಿಕ ನ್ಯಾಯ ಇರುತ್ತದೆ. ಎಲ್ಲಾ ಹಿಂದುಳಿದ ಜಾತಿ, ಸಮುದಾಯಗಳು ಸಮಾನ ಅವಕಾಶಗಳನ್ನು ಪಡೆದುಕೊಂಡು ಮುಂದುವರೆದಾಗ ಮಾತ್ರ ಇಡೀ ಸಮಾಜ ಮುಂದುವರೆಯುತ್ತದೆ. ಕೆಲವೇ ಜಾತಿ-ಸಮುದಾಯಗಳು ಅವಕಾಶಗಳನ್ನು ಪಡೆದುಕೊಂಡು ಉಳಿದವುಗಳು ಅವಕಾಶ ವಂಚಿತರಾಗುತ್ತಿದ್ದರೆ ಅದನ್ನು ಪ್ರಗತಿ ಪಥದಲ್ಲಿರುವ ಸಮಾಜ ಎಂದು ಕರೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.