ಬೆಂಗಳೂರು : ಸಂಸದರಿಗೆ ನೀಡಿರುವ ಸಂವಿಧಾನದ ಪ್ರತಿಯಲ್ಲಿ ಜಾತ್ಯತೀತ ಮತ್ತು ಸಮಾಜವಾದದ ಪದಗಳನ್ನು ತೆಗೆದು ಹಾಕಿರುವುದು ಸಂವಿಧಾನ ಬದಲಾಣೆ ಮಾಡುವ ಗುಪ್ತಕಾರ್ಯಸೂಚಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಆಕ್ಷೇಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಅವರು, ಸಂವಿಧಾನದ ಅಧಿಕೃತ ಪ್ರಸ್ತಾವನೆಯಲ್ಲಿ ಜಾತ್ಯತೀತ ಮತ್ತು ಸಮಾಜವಾದದ ಉಲ್ಲೇಖವಿದೆ. ಆದರೆ ಕೇಂದ್ರ ಸರ್ಕಾರ ಸಂಸದರಿಗೆ ನೀಡಿರುವ ಸಂವಿಧಾನದ ಪ್ರತಿಯಲ್ಲಿ ಜಾತ್ಯತೀತ ಮತ್ತು ಸಮಾಜವಾದ ಪದಗಳೇ ಇಲ್ಲ. ಇದು ಸಂವಿಧಾನಕ್ಕೆ ಎಸಗಿದ ಅಪಚಾರ ಮಾತ್ರವಲ್ಲ, ಕೇಂದ್ರದ ಬಿಜೆಪಿ ಸರ್ಕಾರ ಜಾತ್ಯತೀತ ತತ್ವದ ಮೇಲೆ ನಂಬಿಕೆಯಿಟ್ಟಿಲ್ಲ ಎಂದೂ ಸಾಬೀತಾಗಿದೆ ಎಂದಿದ್ದಾರೆ.
ಸಂವಿಧಾನದ ಪ್ರಸ್ತಾವನೆಯಲ್ಲಿ ಇರುವ ಜಾತ್ಯತೀತ ಪದ ಕೇವಲ ಪದವಲ್ಲ. ಅದು ನಮ್ಮ ದೇಶದ ಮನಸ್ಥಿತಿಯ ಪ್ರತೀಕ. ಆದರೆ ಬಿಜೆಪಿಯವರು ಈಗ ಸಂವಿಧಾನದ ಪ್ರಸ್ತಾವನೆಯಲ್ಲಿರುವ ಜಾತ್ಯತೀತ ಪದವನ್ನೇ ಉದ್ದೇಶಪೂರ್ವಕವಾಗಿ ಮೆರೆಮಾಚುತ್ತಿದ್ದಾರೆ. ಇದು ಸಂವಿಧಾನ ಬದಲಾಯಿಸುವ ಕೇಂದ್ರ ಬಿಜೆಪಿ ಸರ್ಕಾರದ ಹಿಡೆನ್ ಅಜೆಂಡಾವಿದ್ದಂತಿದೆ ಎಂದು ಹೇಳಿದರು.