ಬೆಂಗಳೂರು : ಗೃಹಜ್ಯೋತಿ ವಿದ್ಯುತ್ ಯೋಜನೆಗೆ ಜೂನ್ 15 ರಿಂದ ನೋಂದಣಿ ಆರಂಭವಾಗಲಿದೆ. ಆಗಸ್ಟ್ 1ರಿಂದ ಗೃಹಜ್ಯೋತಿ ಯೋಜನೆ ಜಾರಿಗೆ ಬರಲಿದ್ದು, ಜೂನ್ ತಿಂಗಳ ವಿದ್ಯುತ್ ಶುಲ್ಕವನ್ನು ನಾಗರಿಕರು ಕಡ್ಡಾಯವಾಗಿ ಪಾವತಿಸಬೇಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಬೆಸ್ಕಾಂ ಕಚೇರಿಯಲ್ಲಿ ಕೆ.ಜೆ ಜಾರ್ಜ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಯೋಜನೆ ಕುರಿತು ಕೇಳಿಬಂದಿರುವ ಹಲವಾರು ಗೊಂದಲಗಳನ್ನು ಬಗೆಹರಿಸುವ ಪ್ರಯತ್ನ ಮಾಡಿದರು.
ಸ್ವಂತಮನೆ, ಬಾಡಿಗೆ ಮನೆ, ಸರ್ಕಾರಿ ನೌಕರರು ಆದಾಯ ತೆರಿಗೆದಾರರು ಸೇರಿದಂತೆ ಯಾರೇ ಆದರೂ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡುತ್ತಿದ್ದರೆ ಅವರಿಗೆ ಶುಲ್ಕ ವಿನಾಯಿತಿ ದೊರೆಯಲಿದೆ.ನೋಂದಣಿಗೆ ಸೇವಾ ಸಿಂಧು ಪೋರ್ಟಲ್ನಲ್ಲಿ ಪ್ರತ್ಯೇಕವಾದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿದಿನ 5 ರಿಂದ 10 ಲಕ್ಷ ನೋಂದಣಿಯ ಧಾರಣ ಸಾಮಥ್ರ್ಯವನ್ನು ನಿಭಾಯಿಸಲು ಅನುಕೂಲವಾಗುವಂತೆ ಸರ್ವರ್ ಅನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದರು.
ನೋಂದಣಿಗೆ ಫಲಾನುಭವಿಯ ಆಧಾರ್ ಸಂಖ್ಯೆ ಮತ್ತು ವಿದ್ಯುತ್ ಸಂಪರ್ಕದ ಆರ್ ಆರ್ ನಂಬರ್ ಕಡ್ಡಾಯವಾಗಿದೆ. ಸ್ವಂತ ಮನೆಯಿರುವವರ ವಿಳಾಸ ಆಧಾರ್ ನೊಂದಿಗೆ ಹಂಚಿಕೆಯಾಗುವುದರಿಂದ ಹೆಚ್ಚಿನ ದಾಖಲಾತಿಗಳ ಅಗತ್ಯ ಇರುವುದಿಲ್ಲ.ಬಾಡಿಗೆದಾರರು ಬಾಡಿಗೆ ಕರಾರು, ಭೋಗ್ಯ ಕರಾರು ಸೇರಿದಂತೆ ಸೂಕ್ತ ದಾಖಲಾತಿಗಳನ್ನು ಸಲ್ಲಿಸಬೇಕಿದೆ. ಒಂದು ವೇಳೆ ಬಾಡಿಗೆ ಅಥವಾ ಭೋಗ್ಯ ಕರಾರು ಇಲ್ಲದೇ ಹೋದರೆ ಅದೇ ಆರ್ ಆರ್ ಸಂಖ್ಯೆಯ ಮನೆಯಲ್ಲಿ ವಾಸವಿರುವುದನ್ನು ದೃಢಪಡಿಸಲು ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್ ಸೇರಿದಂತೆ ಯಾವುದಾದರೂ ವಾಸ ದೃಢೀಕರಣ ದಾಖಲೆಯನ್ನು ಒದಗಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಜೂನ್ 15ರಿಂದ ಜುಲೈ 15ರೊಳಗೆ ಗ್ರಾಹಕರು ನೋಂದಣಿ ಮಾಡಿಕೊಳ್ಳಬಹುದು. ಸ್ವಂತ ಲ್ಯಾಪ್ಟಾಪ್, ಕಂಪ್ಯೂಟರ್, ಮೊಬೈಲ್ ಬಳಸಬಹುದು. ಒಂದು ವೇಳೆ ತಾಂತ್ರಿಕತೆಯ ಅನುಭವವಿಲ್ಲದಿದ್ದವರು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಬೆಸ್ಕಾಂನಿಂದ ವಿಶೇಷ ಶಿಬಿರಗಳನ್ನು ಕೂಡ ಆಯೋಜನೆ ಮಾಡಲಾಗುತ್ತದೆ.ನೋಂದಣಿ ಪೂರ್ಣಗೊಂಡ ಬಳಿಕ ಎಸ್ಎಂಎಸ್ ಮತ್ತು ಇ-ಮೇಲ್ ಮೂಲಕ ಗ್ರಾಹಕರಿಗೆ ಸಂದೇಶ ರವಾನೆಯಾಗುತ್ತದೆ ಎಂದು ತಿಳಿಸಿದರು.
ಸರ್ಕಾರ ದಾಖಲಾತಿಯ ನೆಪದಲ್ಲಿ ಜನರು ಸೌಲಭ್ಯ ವಂಚಿತರಾಗುವುದನ್ನು ಬಯಸುವುದಿಲ್ಲ. ಆದಷ್ಟು ಸರಳ ವ್ಯವಸ್ಥೆಯನ್ನು ರೂಪಿಸಲು ಕ್ರಮ ಕೈಗೊಳ್ಳುತ್ತಿದೆ. ಹೊಸ ಸಂಪರ್ಕ ಪಡೆಯುವವರು ಮತ್ತು ಇತ್ತೀಚೆಗಷ್ಟೇ ಮನೆಬಾಡಿಗೆಗೆ ಬಂದವರಿಗೆ ವಾರ್ಷಿಕ ಸರಾಸರಿಯನ್ನು ಲೆಕ್ಕ ಹಾಕುವ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಒಂದೆರಡು ದಿನಗಳಲ್ಲೇ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದರು.
ಸಂಪುಟ ಸಭೆಯ ನಿರ್ಣಯದಂತೆ ವಾರ್ಷಿಕ ಬಳಕೆಯ ಸರಾಸರಿಯೊಂದಿಗೆ ಶೇ.10 ರಷ್ಟು ವಿದ್ಯುತ್ ಅನ್ನು ಹೆಚ್ಚು ಬಳಕೆಗೆ ಅನುಮತಿಸಿ ಯೋಜನೆ ಜಾರಿಗೊಳಿಸಲಾಗುತ್ತಿದೆ.ಒಂದು ವೇಳೆ ಮುಂದಿನ 12 ತಿಂಗಳೊಳಗೆ 200 ಯೂನಿಟ್ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡಿದವರಾದರೆ ಅವರಿಗೆ ಮುಂದಿನ ವರ್ಷದಿಂದ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ 2.16 ಕೋಟಿ ವಿದ್ಯುತ್ ಸಂಪರ್ಕಗಳಿವೆ. ಅದರಲ್ಲಿ 200 ಯೂನಿಟ್ ಒಳಗೆ ಬಳಕೆ ಮಾಡುವ ಗ್ರಾಹಕರ ಸಂಖ್ಯೆ 2.14 ಕೋಟಿಯಷ್ಟಿದೆ. ಗ್ರಾಹಕರು ಸರಾಸರಿಯಾಗಿ 53 ಯೂನಿಟ್ ಬಳಸುವ ಲೆಕ್ಕಾಚಾರಗಳಿವೆ. ಇದಕ್ಕಾಗಿ 14,852 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ.ಗೃಹಜ್ಯೋತಿಯ ವಾರ್ಷಿಕ ವೆಚ್ಚ 13,000 ಕೋಟಿಯಷ್ಟಾಗಬಹುದು ಎಂದು ವಿವರಿಸಿದರು.
ಅರ್ಹ ಪ್ರಮಾಣದ ವಿದ್ಯುತ್ ಬಳಕೆ ಬಳಿಕ ಹೆಚ್ಚುವರಿ ಯೂನಿಟ್ಗಳಿಗೆ ಗ್ರಾಹಕರು ಹಣ ಪಾವತಿಸಬೇಕಿದೆ. ಈ ವೇಳೆ ನಿಗದಿತ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.ಗೃಹಜ್ಯೋತಿ ಯೋಜನೆಯಡಿ ಈಗಾಗಲೇ 200 ಯೂನಿಟ್ವರೆಗೆ ಶುಲ್ಕ ವಿನಾಯಿತಿ ನೀಡುವಾಗಲೇ ಫಿಕ್ಸೆಡ್ ಚಾರ್ಜಸ್ ಅನ್ನು ಮನ್ನಾ ಮಾಡಲಾಗಿದೆ. ಹಾಗಾಗಿ ಹೆಚ್ಚುವರಿ ಯೂನಿಟ್ಗೆ ಮತ್ತೆ ಫಿಕ್ಸೆಡ್ ಚಾರ್ಜ್ ವಸೂಲಿ ಮಾಡಲಾಗುವುದಿಲ್ಲ.ಆದರೆ ಹೆಚ್ಚುವರಿ ಯೂನಿಟ್ಗಳಿಗೆ ಶೇ.9ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.
ವಿದ್ಯುತ್ ದರ ಪರಿಷ್ಕರಣೆಯಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ. ಸರ್ಕಾರವೇ ಅದನ್ನು ಭರಿಸಲಿದೆ. 200 ಯೂನಿಟ್ ಬಳಕೆ ಮೀರಿದ 2 ಲಕ್ಷ ಗ್ರಾಹಕರಿದ್ದು ಅವರು ಶಕ್ತಿವಂತರಾಗಿದ್ದಾರೆ. ಅವರು ಶುಲ್ಕ ಪಾವತಿಸಬೇಕಾಗುತ್ತದೆ. ಸರ್ಕಾರ ವಿದ್ಯುತ್ ಹೊರೆಯನ್ನು ಕಡಿಮೆ ಮಾಡಲು ದುಬಾರಿ ದರದ ಖರೀದಿಯ ಒಪ್ಪಂದಗಳನ್ನು ಪರಿಷ್ಕರಿಸುವುದು ವಿದೇಶಿ ಹಾಗೂ ದೇಶೀಯ ಕಲ್ಲಿದ್ದಲನ್ನು ಮಿಶ್ರಣ ಮಾಡುವ ಮೂಲಕ ಉತ್ಪಾದನಾ ಇಂಧನದ ವೆಚ್ಚ ತಗ್ಗಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತದೆ. ನಾವು ವಿದ್ಯುತ್ ಕಡಿತ ಮಾಡುವ ಪ್ರಮೇಯವೇ ಉದ್ಭವಿಸುವುದಿಲ್ಲ. ನೀಡಿಕೆ ಮತ್ತು ಪೂರೈಕೆಯ ವ್ಯತ್ಯಾಸವನ್ನು ನಿಭಾಯಿಸುವ ಸಾಮರ್ಥ್ಯ ಸರ್ಕಾರಕ್ಕಿದೆ. ಅಗತ್ಯ ಇರುವ ಕಡೆಗೆ ಕಡಿಮೆ ಬೆಲೆಯಲ್ಲಿ ವಿದ್ಯುತ್ ಖರೀದಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಅರ್ಜಿ ಸಲ್ಲಿಸುವುದು ಹೇಗೆ?
1.ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ಗೃಹಜ್ಯೋತಿ ಹೆಸರಿನ ಆಪ್ ಮೂಲಕ ಜೂನ್ 15ರಿಂದ ಅರ್ಜಿ ಸಲ್ಲಿಕೆ ಆರಂಭ.
ಎಲ್ಲಾ ಆಪ್ ನಂತೆ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುತ್ತದೆ.
2.ಆಪ್ ಡೌನ್ ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸುವುದು,
3. ಬಾಡಿಗೆದಾರರು ಕನಿಷ್ಠ ಮೂರು ದಾಖಲೆಗಳನ್ನು ನೀಡಬೇಕು
4. ಆಧಾರ್ ಕಾರ್ಡು, ಬಾಡಿಗೆ ಕರಾರು ಪತ್ರ ಹಾಗೂ ಪ್ರತಿ ತಿಂಗಳು ಕಟ್ಟುವ ವಿದ್ಯುತ್ ಸ್ಥಾವರದ ಐಡಿ ನಂಬರ್ ಇರುವ ಬಿಲ್
5. ಆಪ್ ನಲ್ಲಿ ಲಾಗಿನ್ ಆಗಿ ಬಟನ್ ಆಪ್ಷನ್ ಪ್ರೆಸ್ ಮಾಡಬೇಕು
6. ಬಳಿಕ ಅಲ್ಲಿ ನಿಮ್ಮ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು.
7. ಒಂದು ವೇಳೆ ಒಂದೆರಡು ತಿಂಗಳಲ್ಲಿ ಬಾಡಿಗೆ ಮನೆ ಖಾಲಿ ಮಾಡಿ ಬೇರೆ ಮನೆಗೆ ಹೋದರೆ ಒಪಿಟಿ ಔಟ್ ಮಾಡಬೇಕು
8. ಮತ್ತೆ ಹೊಸ ಬಾಡಿಗೆ ಮನೆಗೆ ಹೋದಾಗ ಅಲ್ಲಿ ಮತ್ತೆ ಆ?ಯಪ್ ನಲ್ಲಿ ಲಾಗಿನ್ ಆಗಿ ಒಪಿಟಿ ಇನ್ ಆಪ್ಷನ್ ಆಯ್ಕೆ ಮಾಡಬೇಕು
9. ಅಲ್ಲಿ ಮತ್ತೆ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿ ಯೋಜನೆಗೆ ಅರ್ಹತೆ ಪಡೆಯಬೇಕು
10. ನೀವು ಬಳಸುತ್ತಿರುವ ಮನೆಗೆ ನಿಗದಿಯಾಗಿರುವ ವಾರ್ಷಿಕ ಸರಾಸರಿ ವಿದ್ಯುತ್ ಬಳಕೆ 200 ಯೂನಿಟ್ ಗಿಂತ ಕಡಿಮೆ ಇದ್ದರೆ ಯೋಜನೆ ಲಾಭ ಸಿಗುತ್ತದೆ. 200 ಯೂನಿಟ್ ಗಿಂತ ಹೆಚ್ಚಿದ್ದರೆ ಸಿಗುವುದಿಲ್ಲ.