ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯನ್ನು ನಿಷೇಧಿಸಿದ ಕೇಂದ್ರ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.
ನಿಷೇಧ ಆದೇಶ ಪ್ರಶ್ನಿಸಿ ನಾಸೀರ್ ಅಲಿ ಎನ್ನುವವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್ ತೀರ್ಪನ್ನು ನವೆಂಬರ್ 30ಕ್ಕೆ ಕಾಯ್ದಿರಿಸಿತ್ತು.
ಗಣ್ಯ ವ್ಯಕ್ತಿಗಳ ಹತ್ಯೆಗೆ ಸಂಚು, ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಪಿತೂರಿ, ಉಗ್ರ ಸಂಘಟನೆಗಳ ಜೊತೆ ನಿಕಟ ಸಂಪರ್ಕ ಹೊಂದಿದ ಆರೋಪದಡಿ ಕೇಂದ್ರ ಗೃಹ ಇಲಾಖೆ ಪಿಎಫ್ ಸಂಘಟನೆಯನ್ನು ಐದು ವರ್ಷಗಳ ಕಾಲ ನಿಷೇಧಿಸಿ ಆದೇಶ ಹೊರಡಿಸಿತ್ತು.
ವಾದ-ಪ್ರತಿವಾದ
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಜಯಕುಮಾರ್ ಎಸ್.ಪಾಟೀಲ್ ಪಿಎಫ್ಐ ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಇದಕ್ಕೆ ಸೂಕ್ತ ಕಾರಣ ನೀಡಿಲ್ಲ.
ತಕ್ಷಣದ ನಿಷೇಧಕ್ಕೆ ಪ್ರತ್ಯೇಕ ಕಾರಣ ನೀಡಬೇಕಿತ್ತು. ವಾದಮಂಡನೆಗೆ ಕಾಲಾವಕಾಶ ನೀಡದೇ ನಿಷೇಧಿಸಲಾಗಿದೆ. ಯುಎಪಿಎ ಕಾಯ್ದೆಗೆ ವಿರುದ್ಧವಾಗಿ ಆದೇಶ ಹೊರಡಿಸಲಾಗಿದೆ ಎಂದು ವಾದ ಮಂಡಿಸಿದ್ದರು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪಿಎಫ್ಐ ಸಂಘಟನೆಯಿಂದ ದೇಶ ವಿರೋಧಿ ಚಟುವಟಿಕೆ ನಡೆಯುತ್ತಿದೆ. ದೇಶದಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ಸಂಘಟನೆಯ ಸದಸ್ಯರಿಂದ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಈ ಕಾರಣದಿಂದ ಪಿಎಫ್ಐ ಸಂಘಟನೆ ನಿಷೇಧಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.