ಬೆಂಗಳೂರು: ಯಾವ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡಬೇಕು ಎಂಬುದರ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ತಮ್ಮ ನಿವಾಸದಲ್ಲಿ ಶನಿವಾರ ಮಾತನಾಡಿದ ಅವರು, ಕ್ಷೇತ್ರ ಗೊಂದಲದ ಬಗ್ಗೆ ಮಾತನಾಡಿ, ಕೋಲಾರದಲ್ಲಿ ಸರ್ವೆಗಳಲ್ಲಿ ಹಿನ್ನಡೆ ಆಗಿದೆ ಅನ್ನೋದು ಊಹಾಪೋಹ. ಉಹಾಪೋಹಗಳಿಗೆ ಬೆಲೆ ಇಲ್ಲ. ನನ್ನ ಕ್ಷೇತ್ರದ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು.
ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಒಂದೇ ಹೆಸರು ಇರುವ ಹಾಗೂ ಗೊಂದಲ ಇಲ್ಲದ ಕ್ಷೇತ್ರಗಳಲ್ಲಿ ಹೆಸರು ಫೈನಲ್ ಮಾಡಿದ್ದೀವಿ. ಮೊದಲ ಪಟ್ಟಿ 22 ಮಾರ್ಚ್ ಬೆಳಗ್ಗೆ ಪ್ರಕಟ ಆಗಲಿದೆ ಎಂದರು. ವರುಣಾ ಅಥವಾ ಕೋಲಾರ ಸ್ಪರ್ಧೆಯ ಬಗ್ಗೆ ಮಾತನಾಡಿ, ವರುಣಾದಲ್ಲಿ ಒಂದೇ ಹೆಸರು ಇದೆ. ಯತೀಂದ್ರ ಇದ್ದಾನಲ್ಲ. ನಾನು ಎಲ್ಲಿ ನಿಂತುಕೊಳ್ಳಬೇಕು ಎಂದು ಹೈಕಮಾಂಡ್ ನಿರ್ಧರಿಸುತ್ತೆ. ಹೈಕಮಾಂಡ್ ಎಲ್ಲಿ ಹೇಳುತ್ತೋ ಅಲ್ಲಿ ನಿಂತುಕೊಳ್ಳುತ್ತೇನೆ ಎಂದರು. ಸಿದ್ದರಾಮಯ್ಯ ಭಾನುವಾರದ ಕೋಲಾರ ಪ್ರವಾಸ ರದ್ದಾಗಿದೆ. ಈ ಬಗ್ಗೆ ಮಾತನಾಡಿ, ಕೋಲಾರಕ್ಕೆ ಹೋಗ್ತಿಲ್ಲ, ರದ್ದು ಮಾಡಿದ್ದೀರಿ. ಭಾನುವಾರ ಬೆಳಗಾವಿಗೆ ಹೋಗ್ತಿದೀನಿ ಹಾಗಾಗಿ ಕೋಲಾರ ಪ್ರವಾಸ ರದ್ದು ಮಾಡಿದ್ದೇನೆ. ಸ್ಪರ್ಧೆ ಬಗ್ಗೆ ನನಗೆ ಟೆಕ್ಷನ್ ಇಲ್ಲ ಎಂದರು.
ಮಾರ್ಚ್ 22 ರಂದು ಮೊದಲ ಪಟ್ಟಿ ಬಿಡುಗಡೆ: ಮಾರ್ಚ್ 21 ಅಮಾವಾಸ್ಯೆ, 22 ಕ್ಕೆ ಯುಗಾದಿ. ಪಕ್ಷಕ್ಕೂ ಅಮಾವಾಸ್ಯೆಗೂ ಸಂಬಂಧ ಇಲ್ಲ. ಆದರೂ ಆ ದಿನ ಪಟ್ಟಿ ಪ್ರಕಟ ಆಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಈಗಾಗಲೇ ಪಟ್ಟಿ ಬಿಡುಗಡೆ ಬಗ್ಗೆ ಕಾಂಗ್ರೆಸ್ಸಿಗರಲ್ಲಿ ಸಾಕಷ್ಟು ಕುತೂಹಲ, ತಳಮಳಗಳು ಉಂಟಾಗಿದ್ದು, ಮಾ. 22ರಂದು ಪಟ್ಟಿ ಬಿಡುಗಡೆಯಾಗುವುದು ಖಾತ್ರಿಯಾಗುತ್ತಿದ್ದಂತೆ ಈ ಕುತೂಹಲ ಮತ್ತಷ್ಟು ತಾರಕ್ಕಕೇರಿದೆ.
ಕಾರ್ಯಕ್ರಮಗಳು ರದ್ದು: ಹೈಕಮಾಂಡ್ ಸೂಚನೆಯ ಅನುಸಾರ, ಕಾಂಗ್ರೆಸ್ ಆರಂಭಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮವನ್ನು ದಿಢೀರನೆ ರ್ದದುಗೊಳಿಸಲಾಗಿದೆ. ಅದರ ಜೊತೆಗೆ, ಪ್ರಜಾಧ್ವನಿಯಲ್ಲಿ ಸಿದ್ದರಾಮಯ್ಯನವರು ನಡೆಸಬೇಕಿದ್ದ ಯಾತ್ರೆಯೂ ರದ್ದಾಗಿದೆ. ಮಾ. 24ರಿಂದ ಏ. 1ರವರೆಗೆ ಪ್ರಜಾಧ್ವನಿ ಯಾತ್ರೆಯು ನಡೆಯಬೇಕಿತ್ತು. ಅದು ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.