ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಜಾತಿವಾರು ಪ್ರಾತಿನಿಧ್ಯ ನೀಡಿ ಹೆಚ್ಚುವರಿ ಉಪಮುಖ್ಯಮಂತ್ರಿಗಳನ್ನು ಮಾಡಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆಯನ್ನು ಹೈಕಮಾಂಡ್ ಸರಿಯಾಗಿ ಅರ್ಥೈಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಸಿಗುತ್ತೆ ಎಂದರೆ ನನ್ನು ಸೇರಿದಂತೆ ಯಾರು ಬೇಡ ಎನ್ನುವುದಿಲ್ಲ. ಇಲ್ಲಿ ನನ್ನ ವೈಯಕ್ತಿಕ ಪ್ರಶ್ನೆ ಇಲ್ಲ. ಒಂದು ವೇಳೆ ನನಗೆ ಬೇಕು ಎಂದಿದ್ದರೆ ನಾನೇ ನೇರವಾಗಿ ಹೈಕಮಾಂಡ್ ಬಳಿಗೆ ಹೋಗಿ ಉಪಮುಖ್ಯಮಂತ್ರಿ ಮಾಡಿ ಎಂದು ಹೇಳುತ್ತಿದ್ದೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ, ಲಿಂಗಾಯಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಕಾಂಗ್ರೆಸ್ ಜೊತೆಯಲ್ಲಿ ದೃಢವಾಗಿ ನಿಂತಿದ್ದವು. ಆ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಯಾಗಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ವಾದವನ್ನು ತಾವು ಕೂಡ ಒಪ್ಪುವುದಾಗಿ ಸ್ಪಷ್ಟಪಡಿಸಿದರು.
ನಮ್ಮ ವೈಯಕ್ತಿಕ ಹೇಳಿಕೆಗಳು ಏನೇ ಇದ್ದರೂ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಕಾಂಗ್ರೆಸ್ನಲ್ಲಿ ಹೈಕಮಾಮಡೇ ಸುಪ್ರಿಂ. ಹಾಗಾಗಿಯೇ ಹೈಕಮಾಂಡ್ ಸೂಚನೆ ಕೊಟ್ಟರೆ ಹೆಚ್ಚುವರಿ ಉಪಮುಖ್ಯಮಂತ್ರಿಗಳನ್ನು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಟ್ಟರೆ ಚುನಾವಣೆಯಲ್ಲಿ ನಮ್ಮ ಜೊತೆಗೆ ನಿಲ್ಲುತ್ತವೆ ಎಂದು ರಾಜಣ್ಣ ಹೇಳಿದ್ದಾರೆ. ಇದನ್ನೂ ಹೈಕಮಾಂಡ್ ಗಮನಿಸಬೇಕು. ಉಪಮುಖ್ಯಮಂತ್ರಿಯಾದವರಿಗೆ ಜವಾಬ್ದಾರಿ ನೀಡಿ ನಿಮ್ಮ ಸಮುದಾಯದ ಮತಗಳನ್ನು ಕ್ರೋಢಿಕರಿಸಿ ಎಂದು ಸೂಚನೆ ನೀಡಬಹುದು ಎಂದು ಹೇಳಿದರು.
ಅಧಿಕಾರ ಬರುತ್ತೆ ಎಂದರೆ ಯಾರಾದರೂ ಬಿಡುತ್ತಾರಾ. ನಾನಂತೂ ರಾಜಕಾರಣದಲ್ಲಿ ಅಧಿಕಾರ ಬೇಡ ಎನ್ನುವವರನ್ನು ನೋಡಿಲ್ಲ ಎಂದರು.
ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಎಂದು ರಾಜಣ್ಣ ಹೇಳಿಲ್ಲ.ಉಪಮುಖ್ಯಮಂತ್ರಿ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.