ಚನ್ನಪಟ್ಟಣ: ಜೆಡಿಎಸ್ ಶಾಸಕಾಂಗದ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು ದೇವರ ಆಶೀರ್ವಾದದಿಂದಲೇ ಹೊರತು ಜನರ ಆಶೀರ್ವಾದದಿಂದ ಅಲ್ಲ ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡ ಹೇಳಿದರು.
ಚನ್ನಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಗಲು ದೇವರ ಆಶೀರ್ವಾದ ಇದೆ ಎಂದು ಕುಮಾರಸ್ವಾಮಿ ತಾವು ಹೋದಲ್ಲೆಲ್ಲಾ ಹೇಳಿಕೊಳ್ಳುತ್ತಿದ್ದಾರೆ. ಅವರೇ ಹೇಳುವಂತೆ ಎರಡು ಬಾರಿಯೂ ಅದು ನಿಜವಾಗಿದೆ ಎಂದರು. ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಈ ಭಾಗದಲ್ಲಿ ನಾವು 35 ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ. ಅದನ್ನು ತಲುಪುತ್ತೇವೆ ಎನ್ನುವ ವಿಶ್ವಾಸವಿದೆ. ಹುಣುಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಚಾಮರಾಜನಗರದಲ್ಲಿ ಪ್ರವಾಸ ಮಾಡಿದ್ದೇವೆ. ಈ ಭಾಗದಲ್ಲಿ ಬಿಜೆಪಿಗೆ ಜನಸ್ಪಂದನೆ ಇದೆ. ಈ ಭಾಗದಲ್ಲಿ ಈ ಬಾರಿ ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.