ಜೈಲಿನಿಂದ ಹೊರಬಂದ ಪಿಎಸ್​ಐಗೆ ಸ್ವಾಗತ ಕೋರಿದ್ದವರ ವಿರುದ್ಧ ಪ್ರಕರಣ ದಾಖಲು

ವಿಜಯನಗರ: ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದು ಜೈಲು ಸೇರಿದ್ದ ಪೊಲೀಸ್ ಸಬ್​ಇನ್​​ಸ್ಪೆಕ್ಟರ್​ಗೆ ಭವ್ಯ ಸ್ವಾಗತ ಕೋರಿದ್ದವರ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜಾಮೀನಿನ​ ಮೇಲೆ ಹೊರಬಂದ ಪಿಎಸ್​ಐ ನಾಗಪ್ಪಗೆ ಕುಮಾರಪ್ಪ, ಮಧುನಾಯ್ಕ್, ಶಿವರಾಜ್, ಶಿವಕುಮಾರ್, ಅಂಬರೀಶ್​, ಚಂದ್ರು, ಯರಿಽಸ್ವಾಮಿ, ಸುರೇಶ, ಮಂಜಪ್ಪ, ತಿಮ್ಮಣ್ಣ, ಪಂಪಣ್ಣ, ನಾಗೇಶ ಸ್ವಾಗತ ಕೋರಿದ್ದರು. ಇವರ ವಿರುದ್ಧ ಐಪಿಸಿ ಸೆಕ್ಷನ್​ 143, 188, 268, 269ರಡಿ ಪ್ರಕರಣ ದಾಖಲಾಗಿದೆ.

ವಿಜಯನಗರ ಜಿಲ್ಲೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ₹ 2.50 ಲಕ್ಷ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ನಾಗಪ್ಪನನ್ನು ಬಂಧಿಸಿದ್ದರು. ನಂತರ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಅದ್ಧೂರಿ ಮೆರವಣಿಗೆ ಮಾಡಿ, ಪಟಾಕಿ ಸಿಡಿಸಿ ಪಿಎಸ್​ಐ ನಾಗಪ್ಪಗೆ ಬೆಂಬಲಿಗರು ಸ್ವಾಗತ ಕೋರಿದ್ದರು.

ಅಕ್ರಮ ಮರಳು ಸಾಗಣೆ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಲು ₹ 10 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಪಿಎಸ್​ಐ ನಾಗಪ್ಪ ಮತ್ತು ಎಎಸ್​ಐ ಸೈಫುಲ್ಲಾ ಅವರನ್ನು ಬಳ್ಳಾರಿಯ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಡಿಸೆಂಬರ್ 11ರಂದು ದಾಳಿ ನಡೆಸಿ ಬಂಧಿಸಿದರು. ಪ್ರಕರಣದ ಇತರ ಆರೋಪಿಗಳಾದ ಸಿಪಿಐ ಟಿ.ಎಸ್‌.ಮುರುಗೇಶ್‌, ಪೊಲೀಸ್‌ ಪೇದೆಗಳಾದ ತಿಪ್ಪೇಸ್ವಾಮಿ, ನಾಗರಾಜ, ಕೊಂಡಿ ಬಸವರಾಜ್‌ ಪರಾರಿಯಾಗಿದ್ದಾರೆ. ಲಂಚದ ಹಣ ಸ್ವೀಕರಿಸುವ ವೇಳೆ ಬಳ್ಳಾರಿಯ ಎಸಿಬಿ ಡಿವೈಎಸ್‌ಪಿ ಸೂರ್ಯನಾರಾಯಣ ರಾವ್‌ ನೇತೃತ್ವದ ತಂಡ ದಾಳಿ ನಡೆಸಿ ಪಿಎಸ್‌ಐ, ಎಎಸ್‌ಐ ಅವರನ್ನು ಬಂಧಿಸಿತ್ತು.

ಅಕ್ರಮ ಮರಳು ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ್ಲಿಗಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ವೆಂಕಟೇಶ ನಾಯ್ಕ ವಿರುದ್ಧ ನವೆಂಬರ್ 28ರಂದು ಪ್ರಕರಣ ದಾಖಲಾಗಿತ್ತು. ವೆಂಕಟೇಶ್‌ ನಾಯ್ಕ ಅವರನ್ನು ಕೈಬಿಡಬೇಕೆಂದರೆ ₹ 10 ಲಕ್ಷ ಲಂಚ ನೀಡಬೇಕೆಂಬು ಬೇಡಿಕೆ ಇಟ್ಟಿದ್ದರು. ವೆಂಕಟೇಶ ನಾಯ್ಕ ಕೊಟ್ಟೂರು ಸರ್ಕಲ್ ಇನ್​ಸ್ಪೆಕ್ಟರ್ ಕಚೇರಿಯಲ್ಲಿ ಹಣ ನೀಡುವ ವೇಳೆ ಬಳ್ಳಾರಿ ಎಸಿಬಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಹಣದ ಸಮೇತ ಎಎಸ್‌ಐ ಸೈಪುಲ್ಲಾನನ್ನು ವಶಕ್ಕೆ ತೆಗೆದುಕೊಂಡಿದ್ದರು. ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿದ ವಿಷಯ ತಿಳಿದು ಓಡಿಹೋಗಲು ಯತ್ನಿಸಿದ ಸಬ್‌ಇನ್ಸ್‌ಸ್ಪೆಕ್ಟರ್‌ ನಾಗಪ್ಪ ಅವರನ್ನು ಎಸಿಬಿ ಅಧಿಕಾರಿಗಳು ಹಿಡಿದುತಂದರು.

ಅಕ್ರಮ ಮರಳು ಸಾಗಣೆ ಪ್ರಕರಣದಲ್ಲಿ ತನ್ನ ಹೆಸರು ಕೈಬಿಡುವಂತೆ ವೆಂಕಟೇಶ್‌ ನಾಯ್ಕ ಪೊಲೀಸ್‌ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುವ ಆಡಿಯೊ ವೈರಲ್ ಆಗಿತ್ತು.

× Chat with us