ಬೆಂಗಳೂರು : ಕಾವೇರಿ ವಿಚಾರವಾಗಿ ಮಾಜಿ ಪ್ರಧಾನಿ ದೇವೇಗೌಡರ ಬದ್ಧತೆಯ ಕುರಿತಂತೆ ಕಾಂಗ್ರೆಸ್ ನಾಯಕರಿಗೆ ಕಿಂಚಿತ್ತಾದರೂ ಗೌರವವಿದೆಯೇ? ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯ ಭೇಟಿಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತನಾಡಿರುವ ವಿಚಾರ ಇನ್ನೊಂದು ಸಂದರ್ಭದಲ್ಲಿ ಹೇಳುತ್ತೇನೆ. ಸಿದ್ದರಾಮಯ್ಯನವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ವಿಚಾರದ ಸಂಕಷ್ಟ ಬಂದಾಗ ದೇವೇಗೌಡರ ಮನೆಗೆ ಬಂದಿದ್ದರಲ್ಲವೇ? ಆ ಸಂದರ್ಭದಲ್ಲಿ ದೇವೇಗೌಡರು ಸಣ್ಣತನ ತೋರಿಸಲಿಲ್ಲ, ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಉಪವಾಸ ಪ್ರತಿಭಟನೆ ನಡೆಸಿದ್ದರು. ಆಗ ಕೇಂದ್ರದ ಸಚಿವರು ಓಡಿ ಬಂದಿದ್ದರು ಎಂದು ಹೇಳಿದರು.
ಕೇಂದ್ರ ಜಲಶಕ್ತಿ ಸಚಿವರನ್ನು ಮುಖ್ಯಂಮತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಏನು ಅರ್ಜಿ ಕೊಟ್ಟರು ಎಂದು ಪ್ರಶ್ನಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ನಿರ್ವಹಣಾ ಸಮಿತಿ ಮತ್ತು ಸುಪ್ರೀಂ ಕೋರ್ಟ್ ಮುಂದೆ ಯಾವ ವಾಸ್ತವಾಂಶ ವರದಿಯನ್ನು ಸರ್ಕಾರ ಇಟ್ಟಿದೆ? ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.
ಜಲ ಸಂಪನ್ಮೂಲ ಖಾತೆ ಹೊಂದಿರುವ ಡಿಸಿಎಂ ಅವರು, ಸತ್ಯಾಂಶವನ್ನು ಹೇಳಿದರೆ ಕರ್ನಾಟಕಕ್ಕೆ ಡ್ಯಾಮೇಜ್ ಆಗುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ಸತ್ಯಾಂಶವನ್ನು ಏಕೆ ಮುಚ್ಚಿಟ್ಟಿದ್ದೀರಿ? ಸತ್ಯಾಂಶವನ್ನು ಹೇಳದೆ ಹೋದರೆ ಸುಪ್ರೀಂಕೋರ್ಟ್ನಲ್ಲಿ ಹೇಗೆ ನ್ಯಾಯ ಸಿಗುತ್ತದೆ? ಎಂದು ಪ್ರಶ್ನಿಸಿದರು.
ಕಾವೇರಿ ಪ್ರಾಧಿಕಾರ ನೀರು ಬಿಡಲು ಹೇಳಿದಾಗ ತಮಿಳುನಾಡಿಗೆ ಏಕೆ ನೀರನ್ನು ಬಿಟ್ಟರು? ತಮಿಳುನಾಡು ಸುಪ್ರೀಂಕೋರ್ಟ್ ಮುಂದೆ ಹೋಗಿತ್ತು. ಆ ಸಂದರ್ಭದಲ್ಲಿ 15 ದಿನ ನೀರು ಬಿಡದೆ ಇದ್ದರೆ ಜಲಾಶಯಗಳಲ್ಲಿ ನೀರು ಉಳಿಯುತ್ತಿರಲಿಲ್ಲವೇ? ಇವಾಗ ಸುಪ್ರೀಂಕೋರ್ಟ್ ಕೂಡ 15 ದಿನ ನೀರುಬಿಡಲು ಹೇಳಿದೆ ಎಂದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ನಮ್ಮರಾಜ್ಯ ಸರ್ಕಾರದ ಅಧಿಕಾರಿಗಳು ವರ್ಚುವಲ್ ಆಗಿ ಭಾಗಿಯಾಗುತ್ತಾರೆ. ಆದರೆ ತಮಿಳುನಾಡಿನವರು 15 ಅಧಿಕಾರಿಗಳು ಖುದ್ದಾಗಿ ಹಾಜರಾಗುತ್ತಾರೆ. ಮಾಹಿತಿ ಕೊಡಲು ಸರ್ಕಾರ ಎಡವಿದೆ ಎಂದು ಆರೋಪಿಸಿದರು.
ವಾಸ್ತಾವಾಂಶ ಅರಿಯಲು ಐದು ಮಂದಿ ತಜ್ಞರನ್ನು ಕಳಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಕಾರವು ಎರಡು ರಾಜ್ಯಗಳ ವಾಸ್ತವಾಂಶವನ್ನು ಅರಿತು ತೀರ್ಪು ಕೊಡಬೇಕು. ಬದಲಾಗಿ ಎಸಿ ರೂಂನಲ್ಲಿ ಕುಳಿತುಕೊಂಡು ಕೊಡುವುದಲ್ಲ ಎಂದರು.