ಕಂದಾಯ ಇಲಾಖೆ ಕಾರ್ಯದರ್ಶಿಗೆ ವರದಿ ಸಲ್ಲಿಸಿದ ಡಿಸಿ
ಚಿತ್ರದುರ್ಗ: ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಪೋಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದು, ಮಠಕ್ಕೆ ಆಡಳಿತಾಧಿಕಾರಿ ನೇಮಕ ಸನ್ನಿಹಿತವಾಗಿದೆ.
ಸರ್ಕಾರ ಮಾಹಿತಿ ಕೇಳಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಸರ್ಕಾರಕ್ಕೆ ೭೦ ಪುಟಗಳ ವರದಿ ಸಲ್ಲಿಸಿದ್ದಾರೆ. ಮುರುಘಾ ಮಠದಲ್ಲಿ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯಪ್ರವೇಶಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಮಾಜದ ಮುಖಂಡರು ಹಾಗೂ ಮಠದ ಅಭಿಮಾನಿಗಳು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಶೀಘ್ರ ವರದಿ ನೀಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು.
ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದಾರೆ. ವರದಿಯನ್ನು ಗೌಪ್ಯವಾಗಿ ಇಡಲಾಗಿದೆ. ಮಠಕ್ಕೆ ಆಡಳಿತಾಧಿಕಾರಿ ನೇಮಕ ಸನ್ನಿಹಿತವಾಗಿದೆ ಎಂದು ಹೇಳಲಾಗಿದೆ.
ಈ ನಡುವೆ ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ, ಜಿಲ್ಲಾಧಿಕಾರಿಗಳು ಕೇಳಿದ ಮಾಹಿತಿ ನೀಡಿದ್ದೇವೆ. ಮುರುಘಾ ಶ್ರೀಗಳು ನಮಗೆ ಜಿಪಿಎ ನೀಡಿದ್ದಾರೆ. ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿ ವಸ್ತ್ರದಮಠ ಅವರಿಗೂ ಜಿಪಿಎ ನೀಡಲಾಗಿದ್ದು, ಮಠ ಮತ್ತು ವಿದ್ಯಾಪೀಠದ ಆಡಳಿತ ಸುಗಮವಾಗಿ ನಡೆಯುತ್ತಿದೆ. ಸರ್ಕಾರದಿಂದ ಆಡಳಿತಾಧಿಕಾರಿ ನೇಮಕ ಅನಗತ್ಯವಾಗಿದೆ ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿ ಸಲಹೆ
* ಮಠದ ಆಸ್ತಿ, ಆಡಳಿತ ನಿರ್ವಹಣೆ, ಅಲ್ಲಿನ ಸಿಬ್ಬಂದಿಗಳಿಗೆ ತಿಂಗಳ ವೇತನ ಸೇರಿದಂತೆ ಮತ್ತಿತರ ಕಾರಣಗಳಿಗಾಗಿ ಆಡಳಿತಾಧಿಕಾರಿ ನೇಮಕ ಮಾಡುವ ಅಗತ್ಯವಿದೆ.
* ಮಠದ ಆಡಳಿತಾಧಿಕಾರಿ ಹಾಗೂ ಕೆಲವು ಸಿಬ್ಬಂದಿಗಳ ಮೇಲೆಯೂ ಸಹ ಗಂಭೀರವಾದ ಆರೋಪ ಕೇಳಿಬಂದಿದೆ. ಒಬ್ಬರಿಗೊಬ್ಬರು ಮುಖವನ್ನೇ ನೋಡಿಕೊಳ್ಳದ ಪರಿಸ್ಥಿತಿ ಇದೆ. ವಾಸ್ತವ ಸ್ಥಿತಿ ಹೀಗಿದ್ದಾಗ ಮಠದಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬುದಕ್ಕೆ ಖಾತ್ರಿ ಇಲ್ಲ. ಹೀಗಾಗಿ ಆಡಳಿತಾಧಿಕಾರಿ ನೇಮಕ ಅಗತ್ಯ.