ಮೈಸೂರು: ಪ್ರವರ್ಗ-2ರಲ್ಲಿರುವ ಸಣ್ಣ, ಸಣ್ಣ ಜಾತಿಗಳಿಗೂ ಸಾಮಾಜಿಕ ನ್ಯಾಯ, ಸರ್ಕಾರದ ಸವಲತ್ತು, ಸೌಲಭ್ಯಗಳು ಸಿಗುವಂತೆ ಮಾಡಲು ಒಳ ಮೀಸಲಾತಿಯನ್ನು ನೀಡಬೇಕು. ಆದಾಯ ತೆರಿಗೆ ಮಿತಿಯನ್ನು ತೆಗೆದು ಹಾಕಬೇಕು ಎಂದು ಕಾಯಕ ಸಮಾಜಗಳ ನಾಯಕರಾದ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ನಿಗಮದ ಅಧ್ಯಕ್ಷ ಆರ್.ರಘುಕೌಟಿಲ್ಯ ಆಗ್ರಹಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಒಕ್ಕಲಿಗ, ವೀರಶೈವಲಿಂಗಾಯಿತ ಸಮುದಾಯಗಳಿಗೆ ನೀಡಲಾಗಿರುವ ಮೀಸಲಾತಿ ಪ್ರಮಾಣವನ್ನು ಇದೀಗ ಹೆಚ್ಚಿಸಿದೆ. ಅಲ್ಲದೇ ಪರಿಶಿಷ್ಟ ಜಾತಿಗೆ ನೀಡಲಾಗಿದ್ದ ಮೀಸಲಾತಿಯಲ್ಲಿ ಇದೀಗ ಒಳ ಮೀಸಲಾತಿಯನ್ನು ನೀಡಿರುವುದು ಸ್ವಾಗತಾರ್ಹವಾಗಿದೆ. ಇದೇ ಮಾದರಿಯಲ್ಲಿ ಪ್ರವರ್ಗ-2ರಲ್ಲಿಯೂ ಸಣ್ಣ, ಸಣ್ಣ ಜಾತಿಗಳಿಗೂ ಅನುಕೂಲವಾಗುವಂತೆ ಒಳಮೀಸಲಾತಿಯನ್ನು ನೀಡಬೇಕೆಂದು ಒತ್ತಾಯಿಸಿದರು.
ಪ್ರವರ್ಗ-1ರಲ್ಲಿ 95 ಜಾತಿಗಳಿವೆ. ಇವುಗಳಿಗೆ ಶೇ 4ರಷ್ಟು ಮೀಸಲಾತಿಯನ್ನು ನೀಡುತ್ತಿರುವುದು ಯಾವುದಕ್ಕೂ ಸಾಲದಾಗಿದೆ. ಹಾಗಾಗಿ ಮೀಸಲಾತಿಯನ್ನು ಹೆಚ್ಚಿಸಬೇಕು. ಪ್ರವರ್ಗ-2ರಲ್ಲಿ ಒಟ್ಟು 105 ಜಾತಿಗಳಿವೆ. ಇವುಗಳಲ್ಲಿ ದೊಡ್ಡ, ದೊಡ್ಡ ಸಮುದಾಯಗಳು ಸೇರಿವೆ. ಕುಲಕಸುಬು ಆಧಾರಿತ ಸಣ್ಣ, ಸಣ್ಣ ಜಾತಿಗಳು ಇವೆ. ಆದರೆ ದೊಡ್ಡ, ದೊಡ್ಡ ಸಮುದಾಯಗಳಿಗೆ ಸರ್ಕಾರ ನೀಡುತ್ತಿರುವ ಶೇ 15ರಷ್ಟು ಮೀಸಲಾತಿಯ ಸೌಲಭ್ಯಗಳು, ಸವಲತ್ತುಗಳೆಲ್ಲಾ ಧಕ್ಕುತ್ತಿವೆ. ಆದರೆ ಸಣ್ಣ, ಸಣ್ಣ ಜಾತಿಗಳಿಗೆ ಸಿಗುತ್ತಿಲ್ಲ. ಇದರಿಂದಾಗಿ ಈ ಜಾತಿಗಳ ಯುವ ಸಮೂಹಕ್ಕೆ ಉದ್ಯೋಗ, ಶಿಕ್ಷಣ ಮುಂತಾದವುಗಳು ಸಿಗುತ್ತಿಲ್ಲ, ಅವೆಲ್ಲವೂ ಮರಿಚಿಕೆಯಾಗಿವೆ ಎಂದರು.
ಕುಲಕಸಬು ಆಧಾರಿತ ಸಣ್ಣ, ಸಣ್ಣ ಸಮುದಾಯಗಳು ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದು, ಸರ್ಕಾರದ ಯಾವುದೇ ಸೌಲಭ್ಯಗಳು, ಸವಲತ್ತುಗಳು ಮೀಸಲಾತಿಯಡಿ ಸಿಗದ ಕಾರಣ, ಶೋಚನೀಯ ಸ್ಥಿತಿಯಲ್ಲಿ ಬದುಕನ್ನು ನಡೆಸುತ್ತಿವೆ. ಹಾಗಾಗಿ ರಾಜ್ಯ ಸರ್ಕಾರ ಕುಲಕಸುಬು ಆಧಾರಿತ ಸಣ್ಣ, ಸಣ್ಣ ಜಾತಿಗಳನ್ನೂ ಅಭಿವೃದ್ಧಿಯ ಪಥದಲ್ಲಿ ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ಕಣ್ಣು ಹಾಯಿಸಬೇಕಾಗಿದೆ ಎಂದರು.
ಪ್ರವರ್ಗ-2ರಲ್ಲಿರುವ ಕುಲಕಸಬು ಆಧಾರಿತ ಸಣ್ಣ, ಸಣ್ಣ ಜಾತಿಗಳನ್ನು ಗುಂಪುಗಳನ್ನಾಗಿ ಮಾಡಿ, ಅವುಗಳಿಗೆ ಒಳ ಮೀಸಲಾತಿಯನ್ನು ನೀಡುವ ಮೂಲಕ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತುವ ತುರ್ತು ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ ಎಂದು ನುಡಿದರು.
ಪ್ರವರ್ಗ-2ರಲ್ಲಿರುವ ದೊಡ್ಡ, ದೊಡ್ಡ ಸಮುದಾಯಗಳು ನೀಡಲಾಗಿರುವ ಮೀಸಲಾತಿಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದರಿಂದ, ಸಣ್ಣ, ಸಣ್ಣ ಜಾತಿಗಳಿಗೆ ಸಂವಿಧಾನಬದ್ಧವಾಗಿ ಸಿಗಬೇಕಾಗಿರುವ ಮೀಸಲಾತಿ ಇನ್ನೂ ಕೂಡ ಸಿಕ್ಕಿಲ್ಲ. ಇದರಿಂದಾಗಿ ಈ ಸಣ್ಣ, ಸಣ್ಣ ಜಾತಿಗಳ ಯಾವುದೇ ವ್ಯಕ್ತಿ ಇಲ್ಲಿಯ ತನಕ ಶಾಸಕರಾಗಿ, ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗುತ್ತಿಲ್ಲ, ಆಯ್ಕೆಯಾಗುವ ಅವಕಾಶದಿಂದಲೂ ವಂಚಿತರಾಗುತ್ತಿದ್ದಾರೆ.
ಕೆಪಿಎಸ್ಸಿಯಲ್ಲೂ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ ಸಂವಿಧಾನದ ಆಶಯಗಳು ಇಲ್ಲಿ ಈಡೇರಿಲ್ಲ. ಇದರಿಂದಾಗಿ ಇನ್ನೂ ಕೂಡ ಕುಲಕಸಬು ಆಧಾರಿತ ಸಣ್ಣ, ಸಣ್ಣ ಜಾತಿಗಳು ಅತಂತ್ರ ಸ್ಥಿತಿಯಲ್ಲಿಯೇ ಬದುಕು ನಡೆಸುತ್ತಿರುವುದು ನಿಜಕ್ಕೂ ನೋವಿನ ಬೇಸರ ಸಂಗತಿಯಾಗಿದೆ ಎಂದರು.
ಆಧುನಿಕತೆಯ ಹೊಡೆತಕ್ಕೆ ಕುಲಕಸಬು ಆಧಾರಿತ ಸಣ್ಣ, ಸಣ್ಣ ಜಾತಿಗಳ ಕಸಬುಗಳು ಸಿಲುಕಿ ನರಳುತ್ತಿವೆ. ಇದರಿಂದಾಗಿ ತಮ್ಮ ಕುಲಕಸಬು ಉಳಿಸಿಕೊಳ್ಳುವುದಕ್ಕಾಗಿ ಈ ಸಣ್ಣ ಸಮುದಾಯಗಳು ಹೋರಾಟ ನಡೆಸಲು ಕೂಡ ಆರ್ಥಿಕ, ಶೈಕ್ಷಣಿಕ, ರಾಜಕೀಯ ಶಕ್ತಿಯಿಲ್ಲದಂತಾಗಿದೆ. ಅಲ್ಲದೇ ಪ್ರವರ್ಗ-2ಕ್ಕೆ ಆದಾಯ ಮಿತಿಯನ್ನು ನಿಗದಿಪಡಿಸಿರುವುದು ಕೂಡ ಸರ್ಕಾರದ ಸವಲತ್ತುಗಳು, ಸೌಲಭ್ಯಗಳಿಂದ ಈ ಸಣ್ಣ, ಸಣ್ಣ ಸಮುದಾಯಗಳು ವಂಚಿತವಾಗಲು ಕಾರಣವಾಗುತ್ತಿದೆ. ಹಾಗಾಗಿ ಪ್ರವರ್ಗ-2ಕ್ಕೆ ನಿಗದಿಪಡಿಸಿರುವ ಆದಾಯ ಮಿತಿಯನ್ನು ಕೂಡಲೇ ತೆಗೆದು ಹಾಕಬೇಕು.
ವೈಜ್ಞಾನಿಕವಾಗಿ ಸಂಶೋಧನೆ ಮಾಡಿ, ಪ್ರವರ್ಗಕ್ಕೆ ನೀಡಲಾಗುತ್ತಿರುವ ಶೇ 15ರಷ್ಟು ಮೀಸಲಾತಿಯನ್ನು ವರ್ಗೀಕರಿಸಿ, ಸಣ್ಣ, ಸಣ್ಣ ಜಾತಿಗಳಿಗೂ ಒಳಮೀಸಲಾತಿಯನ್ನು ನೀಡಬೇಕು. ಆ ಮೂಲಕ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಯಕ ಸಮಾಜಗಳ ಮುಖಂಡರಾದ ಉಮೇಶ್, ಮಂಜು, ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು