ಕೋಲಾರ : ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಚ್.ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಪರಿಶಿಷ್ಟ ಜಾತಿ ಎಸ್ಸಿ (ಎಡ) ಸಮುದಾಯದ ಮುಖಂಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಹಿರಿಯ ಮುಖಂಡರಾದ ಕೆ.ಸಿ.ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯಾದ್ಯಂತ 76 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಸಮುದಾಯದಲ್ಲಿ ಕೆ.ಎಚ್.ಮುನಿಯಪ್ಪ ಅತ್ಯಂತ ಹಿರಿಯ ನಾಯಕರಾಗಿದ್ದಾರೆ, ಅವರು ಸಮುದಾಯದ ಹಿತದೃಷ್ಟಿಯಿಂದ ಡಿಸಿಎಂ ಆಗಬೇಕು. ಸತತ ಏಳು ಬಾರಿ ಕೋಲಾರ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದು ಯುಪಿಎ ಸರ್ಕಾರದಲ್ಲಿ ಎರಡು ಬಾರಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿದ್ದಾರೆ, ಅವರ ಹಿರಿತನವನ್ನು ಪರಿಗಣಿಸಿ ಹೊಸ ಸರ್ಕಾರದಲ್ಲಿ ಡಿಸಿಎಂ ಸ್ಥಾನ ನೀಡಬೇಕೆಂದು ಕರ್ನಾಟಕ ಎಸ್ಸಿ/ಎಸ್ಟಿ ಆಯೋಗದ ಮಾಜಿ ಅಧ್ಯಕ್ಷ ಎ.ಮುನಿಯಪ್ಪ ತಿಳಿಸಿದ್ದಾರೆ.
ಪಕ್ಷದ ಹೈಕಮಾಂಡ್ಗೆ ಮನವಿ ಪತ್ರವನ್ನು ಸಲ್ಲಿಸಲು ಈಗಾಗಲೇ ನಾಯಕರ ಗುಂಪು ನವದೆಹಲಿಗೆ ತಲುಪಿದೆ ಎಂದು ಮುನಿಯಪ್ಪ ಹೇಳಿದರು, ತಮ್ಮ ಸಮುದಾಯದಿಂದ ಆರು ಶಾಸಕರು ಕರ್ನಾಟಕದಿಂದ ಕಾಂಗ್ರೆಸ್ ಟಿಕೆಟ್ನಲ್ಲಿ ಆಯ್ಕೆಯಾಗಿದ್ದಾರೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಗೆ ತಿಳಿಸಲಿದ್ದಾರೆ.
ಜಿಲ್ಲೆಯಾದ್ಯಂತ ಮುನಿಯಪ್ಪ ಅವರ ಪ್ರಭಾವವಿದೆ, ಮುನಿಯಪ್ಪ ಅವರನ್ನು ಉಪಮುಖ್ಯಮಂತ್ರಿಯಾಗಿರಿಸಿ ಸರ್ಕಾರದಲ್ಲಿ ಸೂಕ್ತವಾಗಿ ಇರಿಸುವುದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ ಎಂದು ಬೀದರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿಲ್ಲಾ ಎಸ್ಸಿ ಸೆಲ್ ಮಾಜಿ ಅಧ್ಯಕ್ಷ ಚಂದ್ರಕಾಂತ ಹಿಪ್ಪಳಗಾಂವ್ ಹೇಳಿದ್ದಾರೆ.
ಸಂಸತ್ತಿನ ಮಾಜಿ ಸ್ಪೀಕರ್ ಮೀರಾ ಕುಮಾರ್ ಮತ್ತು ಸುರ್ಜಿವಾಲಾ, ಕೆ.ಸಿ.ವೇಣುಗೋಪಾಲ್ ಜೊತೆಗೆ ಸೋನಿಯಾ ಗಾಂಧಿ ಕೂಡ ಮುನಿಯಪ್ಪ ಅವರ ಮೇಲೆ ಸಾಪ್ಟ್ ಕಾರ್ನರ್ ತೊರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಕೋಲಾರ ಜಿಲ್ಲೆ ಹಾಗೂ ನೂತನವಾಗಿ ಆಯ್ಕೆಯಾಗಿರುವ ದೇವನಹಳ್ಳಿ ಕ್ಷೇತ್ರದಲ್ಲಿ ಮುನಿಯಪ್ಪ ಬೆಂಬಲಿಗರು ಹಿರಿಯ ನಾಯಕರಿಗೆ ಸೂಕ್ತ ಸ್ಥಾನಮಾನ ಸಿಗುವ ವಿಶ್ವಾಸದಲ್ಲಿದ್ದು, ಮುನಿಯಪ್ಪ ಅವರಿಗೆ ಸೂಕ್ತವಾಗಿ ಸಚಿವ ಸ್ಥಾನ ನೀಡವುದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಭಿವೃದ್ಧಿಗೆ ವರದಾನವಾಗಲಿದೆ ಎಂದು ದೇವನಹಳ್ಳಿಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.