ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪತ್ರ ಬರೆದು ಪಕ್ಷ ಸಂಘಟನೆಯಲ್ಲಿ ಅವರ ಕೊಡುಗೆಗೆ ಧನ್ಯವಾದವನ್ನು ತಿಳಿಸಿರುವ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, 2024ರ ಲೋಕಸಭೆ ಚುನಾವಣೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವಂತೆ ಕೋರಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಅಭೂತಪೂರ್ವ ಬಹುಮತ ದೊರೆತಿದೆ.ಈ ಜಯದಲ್ಲಿ ಎಲ್ಲರ ಪರಿಶ್ರಮ, ನಿರಂತರ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡ ರೀತಿ ಗಮನಿಸಲಾಗಿದೆ. ಚುನಾವಣೆಯಲ್ಲಿ ತಾವು ಪರಾಜಿತರಾಗಿರಬಹುದು, ಆದರೆ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೀರಿ. ತಮ್ಮ ಶ್ರಮವನ್ನು ಪಕ್ಷವು ಸ್ಮರಿಸುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾವು ಕೈಗೊಂಡ ರಾಜಕೀಯ ನಿಲುವುಗಳು ಮತ್ತು ನಿರ್ಧಾರಗಳು ದೇಶಾದ್ಯಂತ ಚರ್ಚೆಯಾಗಿವೆ. ಆ ನಿಟ್ಟಿನಲ್ಲಿ ಎಐಸಿಸಿ ವರಿಷ್ಠರು ಮುಂಬರುವ ಲೋಕಸಭಾ ಚುನಾವಣೆಗೆ ನಮ್ಮ ಮೇಲೆ ಹೆಚ್ಚಿನ ನಿರೀಕ್ಷೆಯಿಟ್ಟುಕೊಂಡಿದ್ದಾರೆ.
ಆದ್ದರಿಂದ ತಾವು ತಮ್ಮ ಸೋಲಿನ ಬಗ್ಗೆ ಎದೆಗುಂದದೆ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಅಣಿಯಾಗಬೇಕು ಎಂದು ಕೋರಿದ್ದಾರೆ. ಮುಂದೆ ಲೋಕಸಭೆ ಚುನಾವಣೆಯಷ್ಟೇ ಅಲ್ಲದೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆಗಳು ಎದುರಾಗಲಿವೆ. ಈ ಎಲ್ಲ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಿ ಗೆಲವು ಸಾಧಿಸಲು ಪಕ್ಷವನ್ನು ಅಣಿಗೊಳಿಸಬೇಕಿದೆ. ಹೀಗಾಗಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಗೆ ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಡಿಕೆಶಿ ಗೈರಿನಲ್ಲಿ ಕಚೇರಿಗೆ ಪೂಜೆ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಸಂಪುಟ ರಚನೆ ಕಸರತ್ತಿನಲ್ಲಿ ತೊಡಗಿದರೆ, ಇತ್ತ ವಿಧಾನಸೌಧದಲ್ಲಿನ ಅವರ ಕಚೇರಿಗೆ ಸಿಬ್ಬಂದಿ ವರ್ಗ ಪೂಜೆ ನೆರವೇರಿಸಿದ್ದಾರೆ. ಬೆಳಗ್ಗೆ ವಿಧಾನಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 335, 336, 337 ಹಾಗೂ 337(ಅ) ನಲ್ಲಿ ಪೂಜೆ ಮಾಡಲಾಯಿತು. ಕೊಠಡಿಯನ್ನು ಹೂವಿನಿಂದ ವಿಶೇಷ ಅಲಂಕೃತಗೊಳಿಸಲಾಗಿತ್ತು.
ಪೂಜೆ ವೇಳೆ ಡಿ.ಕೆ.ಶಿವಕುಮಾರ್ ಪುತ್ರ ಆಕಾಶ್ ಉಪಸ್ಥಿತರಿದ್ದರು. ಕಚೇರಿಯ ಸಿಬ್ಬಂದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರ ಉಪಸ್ಥಿತಿಯಲ್ಲಿ ಧಾರ್ಮಿಕ ಪೂಜಾಕಾರ್ಯಗಳು ನಡೆದವು. ಈ ವೇಳೆ ಈಡುಗಾಯಿ ಮತ್ತು ಕುಂಬಳಕಾಯಿ ಒಡೆಯಲಾಯಿತು. ಪೂಜೆ ವೇಳೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಹ ಭಾಗಿಯಾಗಿದ್ದರು. ಕಚೇರಿಯಲ್ಲಿ ಮಹಾಲಕ್ಷ್ಮಿ, ವೆಂಕಟೇಶ್ವರ ದೇವರ ಫೋಟೋಗಳ ಜತೆಗೆ ಗಂಗಾಧರ ಅಜ್ಜಯ್ಯ ಫೋಟೋ ಇಡಲಾಗಿದೆ.