ಶಿವಮೊಗ್ಗ: ನನ್ನನ್ನು ಪುಗಸಟ್ಟೆ ಬಂಧಿಸೋಕೆ ನಾನೇನು ಕುರಿನೋ, ಕೋಳಿಯೋ, ಎಮ್ಮೆಯೋ? ಹಾಗೆ ಸುಮ್ಮನೆ ಬಂಧಿಸೋಕೆ ಬರುವುದಿಲ್ಲ ಎಂದು ದೆಹಲಿ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ದೂರಿನ ಕುರಿತು ಶಾಸಕ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರಾರಯರೋ ಕಂಪ್ಲೆಂಟ್ಕೊಟ್ರು, ಕೇಸ್ಹಾಕಿದ್ರು ಅಂದ ತಕ್ಷಣ ಬಂಧಿಸ್ತಾರಾ? ಈಗ ನಾನೂ ನಿಮ್ಮ ಮೇಲೆ ಕಂಪ್ಲೆಂಟ್ಕೊಟ್ಟರೆ ನಿಮ್ಮನ್ನ ಬಂಧಿಸಿ ಬಿಡ್ತಾರಾ? ಯಾರೋ ಅವರ ಪ್ರಚಾರಕ್ಕಾಗಿ ನನ್ನ ಮೇಲೆ ಕೇಸು ದಾಖಲಿಸಿದ್ದಾರಷ್ಟೆ. ಅದರಿಂದ ಏನೂ ಪ್ರಯೋಜನವಿಲ್ಲ. ಅವರಿಗೆ ಒಳ್ಳೆಯದಾಗ್ಲಿ ಎಂದು ನುಡಿದರು.
ಈಗ ಯಾರೋ ಹೊಸಬರು ಪಾಪ ಅವರ ಹೆಸರು ಮಾಧ್ಯಮಗಳಲ್ಲಿ ಬರಲಿ ಎಂದು ನನ್ನ ಮೇಲೆ ಕೇಸ್ಹಾಕಿದ್ದಾರೆ. ಇಂತಹ ನೂರು ಕೇಸ್ಹಾಕಿದರೂ ನಾನು ಎದುರಿಸುತ್ತೇನೆ. ಕರ್ನಾಟಕದಲ್ಲಿ ಏನಾದರೂ ಮಾಡಲಿಕ್ಕೆ ಇಂದಿರಾ ಗಾಂಧಿ, ನೆಹರೂ ಕೈಯಲ್ಲೇ ಆಗಲಿಲ್ಲ. ಪಾಪ ಈ ಆಪ್ನವರು ಏನ್ಮಾಡ್ತಾರೆ? ನನ್ನ ವಿರುದ್ಧ ದೂರು ದಾಖಲಾಗಿದೆಯೇ ವಿನಃ ಎಫ್ಐಆರ್ಅಲ್ಲ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದವರು ರಾಷ್ಟ್ರದ್ರೋಹಿಗಳು ಎಂದು ಸ್ವತಃ ನಾನೇ ಈ ಹಿಂದೆಯೇ ಹೇಳಿದ್ದೇನೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದರೆ ನಾವು ಬಿಡಲ್ಲ ಎಂದರು.
ನೂರೋ, ಇನ್ನೂರೋ, ಐನೂರೋ ವರ್ಷ ಬಿಟ್ಟು ಕೆಂಪು ಕೋಟೆ ಮೇಲೆ ಭಗವಾಧ್ವಜ ಹಾರಿಸಬಹುದೆಂದು ನಾನು ಹೇಳಿದ್ದು ನಿಜ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ನಾನೇನು ವ್ಯತ್ಯಾಸ ಮಾಡಿಲ್ಲ. ದೇಶದಲ್ಲಿ ಹಿಂದುತ್ವದ ಬಗ್ಗೆ, ಹಿಂದು ಧರ್ಮದ ಬಗ್ಗೆ ಸಾಕಷ್ಟುಚರ್ಚೆಯಾಗುತ್ತಿದೆ. ಅದೇ ರೀತಿ ಸ್ಪೀಕರ್ಹಾಗೂ ಕಾನೂನು ಸಚಿವರು ಕೂಡ ಹೇಳಿದ್ದಾರೆ. ಆದರೆ, ಕಾಂಗ್ರೆಸ್ನವರು ಈ ವಿಷಯ ತಂದು ಹಾಗೇ, ಹೀಗೆ ಎಂದು ಹೇಳುತ್ತಿದ್ದಾರೆ. ಅದೀಗ ಬಿದ್ದು ಹೋಗಿರುವ, ಮುಗಿದು ಹೋಗಿರುವ ಕಥೆ ಎಂದು ಹೇಳಿದರು.
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನವರು ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ. ಮುಸಲ್ಮಾನರಿಗೂ ಅಪಮಾನಿಸುತ್ತಿದ್ದಾರೆ. ಕಾಂಗ್ರೆಸ್ನವರಿಗೆ ಎರಡು ಸ್ಥಾನದಲ್ಲಿ ಗೆಲ್ಲುವಂತಹ ಅವಕಾಶ ಇಲ್ಲ. ಆದರೆ, ಕಾಂಗ್ರೆಸ್ನಾಯಕ ಸಿದ್ದರಾಮಯ್ಯ ಮುಸ್ಲಿಮರಿಗೆ ಒಂದು ರೀತಿಯಲ್ಲಿ ದ್ರೋಹ ಮಾಡುತ್ತಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ರಾಜ್ಯಸಭೆಗೆ ಒಬ್ಬರನ್ನು ಮಾತ್ರ ಆಯ್ಕೆ ಮಾಡಿ ಕಳಿಸಬಹುದು. ಆದರೆ, ಎರಡನೇ ಅಭ್ಯರ್ಥಿಯನ್ನಾಗಿ ಮುಸ್ಲಿಮರೊಬ್ಬರನ್ನು ಆಯ್ಕೆ ಮಾಡಿದ್ದಾರೆ. ಮುಸ್ಲಿಂ ಅಭ್ಯರ್ಥಿ ಸೋಲುತ್ತಾರೆ ಎಂದು ಗೊತ್ತಿದ್ದರೂ ಓಲೈಸುವ ನೆಪದಲ್ಲಿ ಹಾಗೂ ಮುಸ್ಲಿಮರಿಗೆ ಆದ್ಯತೆ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳಲು ಈ ರೀತಿಯ ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಒಂದು ಕಡೆ ಜೆಡಿಎಸ್ ಮುಖಂಡರು ಬಿಜೆಪಿಗೆ ಬೆಂಬಲ ನೀಡಬಹುದು. ಮತ್ತೊಂದು ಕಡೆ ಕಾಂಗ್ರೆಸ್ಪಕ್ಷದ ಅತೃಪ್ತರು ಬಿಜೆಪಿಯ ಮೂರನೇ ಅಭ್ಯರ್ಥಿಗೆ ಮತ ಹಾಕಿದರೂ ಆಶ್ವರ್ಯವಿಲ್ಲ. ಹಾಗಾಗಿ ಬಿಜೆಪಿ ಮೂರು ಸ್ಥಾನಗಳನ್ನು ಗೆಲುವು ಸಾಧಿಸುತ್ತದೆ. ಕಾಂಗ್ರೆಸ್ತನ್ನಲ್ಲಿರುವ ಉಳಿದ ಮತಗಳನ್ನು ಉಳಿಸಿಕೊಳ್ಳುತ್ತದೋ, ಜೆಡಿಎಸ್ಗೆ ಕೊಡುತ್ತದೋ ಅದು ನಮಗೆ ಗೊತ್ತಿಲ್ಲ. ಅದು ಆ ಪಕ್ಷಕ್ಕೆ ಬಿಟ್ಟವಿಚಾರ. ಆದರೆ, ತಮ್ಮ ಒಬ್ಬ ಅಭ್ಯರ್ಥಿ ಸೋಲುತ್ತಾರೆ ಎಂದು ಗೊತ್ತಿದ್ದೂ, ಎರಡನೇ ಅಭ್ಯರ್ಥಿಯನ್ನಾಗಿ ಮುಸ್ಲಿಮರನ್ನು ಕಣಕ್ಕೆ ಇಳಿಸಿರುವುದು ಆ ಜನಾಂಗಕ್ಕೆ ಮಾಡಿದ ಅವಮಾನ ಎಂದು ದೂರಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡರೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಜೊತೆಗೆ ಮಾತನಾಡಿ ಜೆಡಿಎಸ್ ಗೆ ಬೆಂಬಲ ನೀಡುವುದಾಗಿ ಒಪ್ಪಿದ್ದಾರೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿಥ್ಡ್ರಾ ಮಾಡಿ ಜೆಡಿಎಸ್ ಗೆ ಬೆಂಬಲ ನೀಡುತ್ತಾರಾ ನೋಡಬೇಕು ಎಂದರು.