ಚಿಕ್ಕಬಳ್ಳಾಪುರ: ಕಡ್ಡಾಯವಾಗಿ ಎಲ್ಲರೂ ಬೂಸ್ಟರ್ ಡೋಸ್ ಲಸಿಕೆ ಪಡೆಯಿರಿ ಎಂದು ನಗರದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿಕೆ ನೀಡಿದರು.
ರಾಜ್ಯದಲ್ಲಿ ಶೇ.17ರಷ್ಟು ಜನ ಬೂಸ್ಟರ್ ಡೋಸ್ ಪಡೆದಿದ್ದಾರೆ. ಕೆಲವು ವಾರಗಳಲ್ಲಿ ಸಮರೋಪಾದಿಯಲ್ಲಿ ಲಸಿಕೆ ನೀಡುತ್ತೇವೆ. ಎಲ್ಲರಿಗೂ ಉಚಿತವಾಗಿ ಬೂಸ್ಟರ್ ಡೋಸ್ ವ್ಯಾಕ್ಸಿನ್ ನೀಡುತ್ತೇವೆ. ಮಾಸ್ಕ್ ಕಡ್ಡಾಯ ಮುನ್ಸೂಚನೆಯನ್ನು ಸಚಿವ ಸುಧಾಕರ್ ನೀಡಿದ್ದು, ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಮಾಸ್ಕ್ ಕಡ್ಡಾಯದ ಬಗ್ಗೆ ಸಭೆಯಲ್ಲಿ ಸಿಎಂ ಜೊತೆ ಚರ್ಚೆ ಮಾಡಲಾಗುವುದು. ಗಣೇಶ ಹಬ್ಬ ಹಿನ್ನೆಲೆ ಕೊವಿಡ್ ಹೆಚ್ಚಳವಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಚಿವ ಸುಧಾಕರ್ ನೇತೃತ್ವದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ 2,500 ಅಡಿ ಉದ್ದದ ರಾಷ್ಟ್ರಧ್ವಜ ಜೊತೆ ಸಚಿವರ ವಾಕಥಾನ್ ನಡೆಯಿತು. ಅಭಿಯಾನದಲ್ಲಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ನಗರದ ರಸ್ತೆಯುದ್ದಕ್ಕೂ ತ್ರಿವರ್ಣ ಧ್ವಜಗಳು ಹಾರಾಟ ಜೋರಾಗಿತ್ತು. ವಿದ್ಯಾರ್ಥಿಗಳೊಂದಿಗೆ ಬೆಳ್ಳಂಬೆಳಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೆಜ್ಜೆ ಹಾಕಿದರು. ಬ್ಯಾಂಡ್ ಸೆಟ್ಗಳು, ಡಿಜೆ ಶಬ್ದದ ಅಬ್ಬರದ ನಡುವೆ ರಾಷ್ಟ್ರಪ್ರೇಮ, ಉಕ್ಕೇರಿಸುವ ಘೋಷಣೆಗಳ ನಿನಾದ, ಯುವ ವಿದ್ಯಾರ್ಥಿಗಳ ಜೈಕಾರದ ಆರ್ಭಟ, ಹೆಜ್ಜೆ ಹೆಜ್ಜೆಗೂ ಭಾರತ್ ಮಾತಾಕಿ ಜೈ ಉದ್ಘೋಷ, ಮೆರವಣಿಗೆಯಲ್ಲಿ ಎಲ್ಲರ ಕೈಯಲ್ಲೂ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿದ್ದವು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೆಸರಿನಲ್ಲಿ ಕಾಂಗ್ರೇಸ್ನಿಂದ ಪಾದಯಾತ್ರೆ ವಿಚಾರವಾಗಿ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದು, ಸ್ವಾತಂತ್ರ್ಯ ಹಾಗೂ ಧ್ವಜ ಹಾಗೂ ಭಾರತಾಂಬೆ ವಿಚಾರದಲ್ಲಿ ಗೌರವ ಕೊಡುವುದು ನಮ್ಮೇಲ್ಲರೆ ಕರ್ತವ್ಯ. ಚಳುವಳಿಯ ರೀತಿಯಲ್ಲಿ ದೇಶದ ಜನರು ಸಂಭ್ರಮಿಸಬೇಕು. ಸ್ವಾತಂತ್ರ್ಯದ ದಿನಗಳನ್ನು ಮೇಲುಕು ಹಾಕಬೇಕು. 75 ವರ್ಷಗಳ ನಂತರ ಹಬ್ಬದ ವಾತವರಣ ಈಗ ಮತ್ತೆ ಬಂದಿದೆ ಎಂದು ಹೇಳಿದರು.