ಬೆಂಗಳೂರು: ನವದೆಹಲಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಳ್ಳಲು ಕೊನೆಯ ದಿನಗಳಲ್ಲಿ ಅನುಮತಿ ದೊರೆತರೂ ಅಷ್ಟೇ ಶೀಘ್ರವಾಗಿ ರಾಜ್ಯ ಸ್ತಬ್ಧಚಿತ್ರ ಪೂರ್ಣಗೊಂಡಿದೆ.
ನಿಸ್ವಾರ್ಥದಿಂದ ಸೇವೆ ಸಲ್ಲಿಸಿ ರಾಷ್ಟ್ರದ ಉನ್ನತ ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಮೂವರು ಮಹಿಳೆಯರ ಕೈಂಕರ್ಯವನ್ನು ರಾಜ್ಯದ ‘ನಾರಿಶಕ್ತಿ’ ಪರಿಕಲ್ಪನೆಯ ಸ್ತಬ್ಧಚಿತ್ರದಲ್ಲಿ ಬಿಂಬಿಸಲಾಗಿದೆ.
‘ನಾರಿಶಕ್ತಿʼಯ ವಿಶೇಷತೆಗಳೇನು ?
ಗಿಡ-ಮರ, ಬೆಟ್ಟ-ಗುಡ್ಡ, ಪಕ್ಷಿಗಳಿಂದ ಕಂಗೊಳಿಸುತ್ತಿರುವ ಸ್ತಬ್ಧಚಿತ್ರದ ಮುಂಭಾಗದಲ್ಲಿ ತೊಟ್ಟಿಲು ತೂಗುತ್ತಾ, ಕೈನಲ್ಲಿ ಮಗು ಆಡಿಸುತ್ತಿರುವ ಸೂಲಗಿತ್ತಿ ನರಸಮ್ಮ ಅವರನ್ನು ಬಿಂಬಿಸಲಾಗಿದೆ. ನುರಿತ ವೈದ್ಯರ ಅನುಪಸ್ಥಿತಿಯಲ್ಲಿ ಸಾಂಪ್ರದಾಯಿಕವಾಗಿ ಹೆರಿಗೆಗಳನ್ನು ಮಾಡಿಸುವಲ್ಲಿ ನರಸಮ್ಮ ಸಿದ್ಧಹಸ್ತರು. ಕಳೆದ ಏಳು ದಶಕಗಳಲ್ಲಿ ಇಂತಹ ಎರಡು ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಅವರು ಮಾಡಿಸಿದ್ದಾರೆ.
ಸ್ತಬ್ಧಚಿತ್ರದ ಮಧ್ಯಭಾಗದಲ್ಲಿ ಹಚ್ಚ ಹಸುರಿನಿಂದ ಕೂಡಿರುವ ಗಿಡ ಮರಗಳನ್ನು ಪೋಷಿಸುತ್ತಿರುವ ‘ವೃಕ್ಷ ಮಾತೆ’ ಎಂದೇ ಹೆಸರಾಗಿರುವ ತುಳಸಿ ಗೌಡ ಹಾಲಕ್ಕಿ ಅವರನ್ನು ಅಭಿವ್ಯಕ್ತಿಗೊಳಿಸಲಾಗಿದೆ. ‘ವೃಕ್ಷ ಮಾತೆ’ ಎಂದೇ ಹೆಸರಾಗಿರುವ ತುಳಸಿ ಅವರು ಅಪರೂಪದ ಪ್ರಭೇದಗಳ ಸಸ್ಯಗಳನ್ನು ಗುರುತಿಸಿ ಬೆಳೆಸುವಲ್ಲಿ ಪರಿಣಿತರು. 30,000ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿರುವ ಶ್ರೇಯ ಇವರದ್ದಾಗಿದೆ. ಗಿಡಗಳ ಮಧ್ಯ ಕುಳಿತು ಅವುಗಳನ್ನು ಪೋಷಿಸುತ್ತಿರುವ ರೀತಿಯಲ್ಲಿ ಅವರನ್ನು ತೋರಿಸಲಾಗಿದೆ. ಇನ್ನೂ ಕೊನೆಯ ಭಾಗದಲ್ಲಿ 75 ಆಲದ ಮರಗಳನ್ನು 45 ಕಿ. ಮೀ ಉದ್ದದ ರಾಜ್ಯ ಹೆದ್ದಾರಿಯಲ್ಲಿ
ಬೆಳೆಸಿರುವ ಸಾಲುಮರದ ತಿಮ್ಮಕ್ಕನವರನ್ನು ಬಿಂಬಿಸಲಾಗಿದೆ. ಬೃಹತ್ ಆಲದ ಮರದ ಮುಂದೆ ಬಿಂದಿಗೆ ಮೂಲಕ ಸಸಿಗಳಿಗೆ ನೀರು ಉಣಿಸುತ್ತಿರುವ ತಿಮ್ಮಕ್ಕನವರನ್ನು ಚಿತ್ರಿಸಲಾಗಿದ್ದು, ಎಲ್ಲವೂ ಕಣ್ಮನ ಸೆಳೆಯುವಂತಿವೆ.
ಈ ಮೂವರು ಮಹಿಳೆಯರು ಅತ್ಯಂತ ಹಿಂದುಳಿದ ಪ್ರದೇಶಗಳಿಂದ ಬಂದವರಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ, ಸಮಾಜ ಸುಧಾರಣೆಗೆ ಇವರ ಜಾತಿ, ಧರ್ಮ, ಸಂಸ್ಕೃತಿ, ಅಂತಸ್ತು ಯಾವುದೂ ಅಡ್ಡಿಯಾಗಲಿಲ್ಲ.
ಪರೇಡ್ನಲ್ಲಿ ಭಾಗವಹಿಸಲು ಅನುಮತಿ ದೊರೆತ ಕೇವಲ 7 ದಿನಗಳಲ್ಲಿ ಈ ಸಬ್ದಚಿತ್ರವನ್ನು ಸಿದ್ಧಪಡಿಸಲಾಗಿದೆ ಎಂಬುದು ವಿಶೇಷವಾಗಿದೆ. ಈ ಹಿಂದೆ 45 ದಿನಗಳು ಸ್ತಬ್ಧಚಿತ್ರ ತಯಾರಿಕೆ ಕಾಲಾವಕಾಶ ದೊರೆಯುತ್ತಿತ್ತು. ಆದರೆ ಈ ಬಾರಿ ಕೆಲ ಗೊಂದಲಗಳಿಂದ ಕೇವಲ 7 ದಿನ ಮಾತ್ರ ಸಮಯವಿತ್ತು. ಅತ್ಯಂತ ಕಡಿಮೆ ಅವಧಿಯಲ್ಲೂ ತ್ವರಿತವಾಗಿ ಸ್ತಬ್ಧಚಿತ್ರ ಪೂರ್ಣಗೊಳಿಸಲಾಗಿದೆ.
ಸತತ 13 ವರ್ಷ ಗಣರಾಜ್ಯೋತ್ಸವ:
ಪರೇಡ್ನಲ್ಲಿ ರಾಜ್ಯದ ಸ್ತಬ್ಧಚಿತ್ರ ಪಾಲ್ಗೊಂಡಿತ್ತು. ಆದರೆ ಈ ಬಾರಿ ಇತರೆ ರಾಜ್ಯಗಳಿಗೆ ಅವಕಾಶ ನೀಡಲು ರಾಜ್ಯ ಭಾಗವಹಿಸಲು ಅನುಮತಿ ನಿರಾಕರಿಸಲಾಗಿತ್ತು. ಈ ವಿಚಾರ ರಾಜ್ಯದಲ್ಲಿ ತೀವ್ರ ವಿವಾದ ಸೃಷ್ಟಿಸಿ ವ್ಯಾಪಕ ಆಕ್ರೋಶ ಉಂಟಾಗಿತ್ತು. ತದನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಅಧಿಕಾರಿಗಳ ಸತತ ಪರಿಶ್ರಮದಿಂದಾಗಿ ರಕ್ಷಣಾ ಇಲಾಖೆ ಸಮ್ಮತಿ ಸೂಚಿಸಿತು. ಅನುಮತಿ ದೊರೆತ ಕೇವಲ 7 ದಿನಗಳಲ್ಲಿ ಅಧಿಕಾರಿಗಳು, ಕಲಾವಿದರು, ನುರಿತ ತಜ್ಞರ ಸಹಯೋಗದಲ್ಲಿ ಸ್ತಬ್ಧಚಿತ್ರ ಮನಮೋಹಕವಾಗಿ
ಮೈದಾಳಿದೆ.
ಕೇವಲ ಎಂಟು ಹತ್ತು ದಿನಗಳಲ್ಲಿ ನಾರಿ ಶಕ್ತಿ ಎಂಬ ವಿಷಯದ ಕುರಿತು ಸ್ಥಬ್ಧಚಿತ್ರ ತಯಾರಿಸಲಾಗಿದೆ. ಅತ್ಯಂತ ಅದ್ಭುತವಾಗಿ ಸ್ಥಬ್ಧಚಿತ್ರ ಮೂಡಿಬಂದಿದೆ.
ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿಗಳು
ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಧೈರ್ಯ ತುಂಬಿದರು.
ಅವರ ಬೆಂಬಲದಿಂದಲೇ ಅತ್ಯಂತ ಕಡಿಮೆ ಅವಧಿಯಲ್ಲಿ ರಾಜ್ಯದ ಗೌರವಕ್ಕೆ ಧಕ್ಕೆಯಾಗದಂತೆ ಸ್ತಬ್ಧಚಿತ್ರ ಪೂರ್ಣಗೊಳಿಸಲಾಗಿದೆ. ಕಲಾವಿದರು, ತಂತ್ರಜ್ಞರನ್ನು ವಿಮಾನದ ಮೂಲಕ ಕರೆಯಿಸಿ ಕೆಲಸದಲ್ಲಿ
ತೊಡಗಿಸಲಾಯಿತು. ಕಲಾವಿದರು ಸಹ ಹಗಲಿರುಳು ಕೆಲಸ ಮಾಡಿದ್ದಾರೆ.
ಡಾ.ಪಿ.ಎಸ್.ಹರ್ಷ
ಆಯುಕ್ತರು,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ